ಎ.ಸಿ.ಬಿ. ಬಲೆಗೆ ಬಿದ್ದ ತಹಶೀಲ್ದಾರ್ ಡಾ. ಪ್ರದೀಪ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಲೋಕಸಭಾ ಚುನಾವಣೆಯ ಕರ್ತವ್ಯ ನಿರ್ವಹಿಸಿದ್ದವರಿಗೆ ಊಟೋಪಚಾರದ ವ್ಯವಸ್ಥೆ ಮಾಡಿದ್ದ ಪೈ
    ಕೆಟರಿಂಗ್ ಮಾಲಕ ದಿನೇಶ್ ಪೈಯವರಿಂದ ಲಂಚ ಪಡೆದ ತಾಲೂಕು ದಂಡಾಧಿಕಾರಿ ನ್ಯಾಯಾಂಗ ಬಂಧನಕ್ಕೆ

ಪುತ್ತೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಊಟ ಹಾಗೂ ಉಪಹಾರ ಒದಗಿಸಿದ್ದ ಪರ್ಲಡ್ಕದ ಪೈ ಕೆಟರಿಂಗ್ ಮಾಲಕ ದಿನೇಶ್ ಪೈಯವರಿಗೆ 9 ಲಕ್ಷದ 39 ಸಾವಿರ ರೂ ಶುಲ್ಕವನ್ನು ಸರಕಾರದಿಂದ ಮಂಜೂರು ಮಾಡಿಸಲು 1 ಲಕ್ಷದ 25 ಸಾವಿರ ರೂಪಾಯಿ ಲಂಚ ಸ್ವೀಕರಿಸಿದ ಆರೋಪದಡಿ ಪುತ್ತೂರು ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್‌ರವರನ್ನು ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಜೂ.20ರಂದು ಸಂಜೆ ಬಂಧಿಸಿದ್ದಾರೆ. ತಾಲೂಕಿನ ದಂಡಾಧಿಕಾರಿಯೂ ಆಗಿರುವ ಡಾ. ಪ್ರದೀಪ್ ಕುಮಾರ್‌ರವರನ್ನು ಎ.ಸಿ.ಬಿ. ಅಧಿಕಾರಿಗಳು ತಡ ಮಧ್ಯರಾತ್ರಿ 12 ಗಂಟೆ ವೇಳೆಗೆ ಮಂಗಳೂರಿನ ಮೂರನೇ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ ಪೈಯವರ ಮನೆಗೆ ಹಾಜರು ಪಡಿಸಿದ್ದು ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ತಹಶೀಲ್ದಾರ್ ಬಲೆಗೆ ಬಿದ್ದದ್ದು ಹೀಗೆ: ಎಪ್ರಿಲ್ 18ರಂದು ನಡೆದ ದ.ಕ.ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯ ಮಾರ್ಚ್ 30ರಿಂದ ಎಪ್ರಿಲ್ 18ರವರೆಗೆ ನಡೆದಿತ್ತು. ಇದರಲ್ಲಿ ಕಂದಾಯ ಇಲಾಖೆಯೂ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು. ಇವರಿಗೆ ಪ್ರತೀ ಹಗಲು ರಾತ್ರಿ ಪರ್ಲಡ್ಕದ ಪೈ ಕೆಟರಿಂಗ್‌ನಿಂದ ಊಟ ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಇದರ ಒಟ್ಟು ಮೊತ್ತ 9 ಲಕ್ಷದ 39 ಸಾವಿರ ರೂ ಆಗಿತ್ತು. ಈ ಮೊತ್ತವನ್ನು ಪಾವತಿಸಲು ಕೆಟರಿಂಗ್ ಮಾಲಕ ದಿನೇಶ್ ಪೈಯವರು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್‌ರವರಲ್ಲಿ ಮನವಿ ಮಾಡಿದ್ದರು. ಮೊತ್ತ ಪಾವತಿಸಬೇಕಾದರೆ ತನಗೆ ಲಂಚ ನೀಡಬೇಕು ಎಂದು ತಹಶೀಲ್ದಾರ್ ಪೀಡಿಸಿದ್ದರು ಎನ್ನಲಾಗಿದೆ. ಬಳಿಕ ದಿನೇಶ್ ಪೈಯವರು ತಹಶೀಲ್ದಾರ್ ಪ್ರದೀಪ್‌ರವರಿಗೆ 99 ಸಾವಿರ ರೂ ನೀಡಿದ್ದರು. ಅಲ್ಲದೆ, ತನಗೆ ಆದಷ್ಟು ಬೇಗ ಮೊತ್ತ ನೀಡಬೇಕು ಎಂದು ಕೇಳಿಕೊಂಡಿದ್ದರು. ಆದರೆ, ತಹಶೀಲ್ದಾರ್‌ರವರು ಮೊತ್ತ ಪಾವತಿಸಲು ನಿರಾಕರಿಸಿದ್ದರಲ್ಲದೆ ನನಗೆ ಇನ್ನೂ 1 ಲಕ್ಷದ 25 ಸಾವಿರ ರೂ ನೀಡಬೇಕು ಎಂದು ಷರತ್ತು ವಿಧಿಸಿದ್ದರು. ಇದರಿಂದ ಮನನೊಂದ ನಗರಸಭಾ ಸದಸ್ಯರಾದ ದೀಕ್ಷಾ ಪೈಯವರ ಪತಿ ದಿನೇಶ್ ಪೈಯವರು ತಹಶೀಲ್ದಾರ್ ಲಂಚ ಕೇಳುತ್ತಿರುವ ಕುರಿತು ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಖಚಿತಪಡಿಸಿಕೊಂಡ ಅಧಿಕಾರಿಗಳು ತಹಶೀಲ್ದಾರ್ ಡಾ. ಪ್ರದೀಪ್‌ರವರನ್ನು ಬಲೆಗೆ ಕೆಡವಲು ಸಿದ್ಧತೆ ನಡೆಸಿದ್ದರು.

ಎ.ಸಿ.ಬಿ. ಜಿಲ್ಲಾ ವರಿಷ್ಠಾಧಿಕಾರಿ ಉಮಾಪ್ರಶಾಂತ್‌ರವರ ನಿರ್ದೇಶನದಂತೆ ಡಿವೈಎಸ್‌ಪಿ ಮಂಜುನಾಥ್ ಕೌರಿ, ಇನ್ಸ್‌ಪೆಕ್ಟರ್‌ಗಳಾದ ಯೋಗೀಶ್ ಕುಮಾರ್, ಮೋಹನ್ ಕೊಟ್ಟಾರಿ, ಸಿಬ್ಬಂದಿಗಳಾದ ಹರಿಪ್ರಸಾದ್, ಉಮೇಶ್, ರಾಧಾಕೃಷ್ಣ ಬಿ.ಎ, ರಾಧಾಕೃಷ್ಣ ಕೆ., ಪ್ರಶಾಂತ್, ವೈಶಾಲಿ, ಚಾಲಕರಾದ ಗಣೇಶ್ ಮತ್ತು ರಾಕೇಶ್‌ರವರು ಕಾರ್ಯಾಚರಣೆ ನಡೆಸಿ ಪ್ರದೀಪ್‌ರವರನ್ನು ಪುತ್ತೂರಿನಲ್ಲಿ ಬಂಧಿಸಿದ್ದಾರೆ.

ತಾಲೂಕು ಕಛೇರಿಯಲ್ಲಿ ಸೆರೆ ಹಿಡಿಯಲು ಸಿದ್ಧತೆ ಪರ್ಲಡ್ಕದಲ್ಲಿ ಬಲೆಗೆ ಬಿದ್ದ ತಹಶೀಲ್ದಾರ್ ಪ್ರದೀಪ್
ದಿನೇಶ್ ಪೈಯವರ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಎ.ಸಿ.ಬಿ. ಅಧಿಕಾರಿಗಳು ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್‌ರವರನ್ನು ಪುತ್ತೂರು ಮಿನಿವಿಧಾನ ಸೌಧದಲ್ಲಿರುವ ತಹಶೀಲ್ದಾರ್ ಕಛೇರಿಯಲ್ಲಿ ಬಂಧಿಸಲು ಸಿದ್ಧತೆ ನಡೆಸಿದ್ದರು. ಅಧಿಕಾರಿಗಳ ಸೂಚನೆಯಂತೆ ದಿನೇಶ್ ಪೈಯವರು ಪ್ರದೀಪ್‌ರವರಿಗೆ ಲಂಚದ ಹಣ ನೀಡಲು ತಹಶೀಲ್ದಾರ್ ಕಛೇರಿಯಲ್ಲಿ ಮುಂದಾದಾಗ ತಹಶೀಲ್ದಾರ್‌ರವರು ಕೈ ಸನ್ನೆಯ ಮೂಲಕ ಇಲ್ಲಿ ಸಿ.ಸಿ.ಕೆಮರಾ ಇದೆ ಎಂದು ತೋರಿಸಿದರು. ಅಲ್ಲದೆ, ಹೊರಗಡೆ ಹಣ ನೀಡಿ ಎಂದು ಹೇಳಿದರು. ಈ ವೇಳೆಗಾಗಲೇ ಅಲ್ಲಿ ಎ.ಸಿ.ಬಿ. ಅಧಿಕಾರಿಗಳು ಸರ್ಪಗಾವಲು ಹಾಕಿದ್ದರು. ಆದರೆ ಅಲ್ಲಿ ತಹಶೀಲ್ದಾರ್‌ರವರನ್ನು ವಶಕ್ಕೆ ಪಡೆಯಲು ಸಾಧ್ಯವಾಗಲಿಲ್ಲ. ಎ.ಸಿ.ಬಿ. ಅಧಿಕಾರಿಗಳು ಸುತ್ತುವರಿದಿರುವುದನ್ನು ಅರಿಯದ ತಹಶೀಲ್ದಾರ್‌ರವರು ಪರ್ಲಡ್ಕ ರಸ್ತೆಯಲ್ಲಿ ನಿಲ್ಲುವಂತೆ ದಿನೇಶ್ ಪೈಯವರಿಗೆ ಹೇಳಿದ್ದರು. ಅದರಂತೆ ಪರ್ಲಡ್ಕ ರಸ್ತೆಯ ಕಲ್ಲಿಮಾರ್‌ನಲ್ಲಿ ದಿನೇಶ್ ಪೈಯವರು ನಿಂತಿದ್ದರು. ಅಲ್ಲಿಗೆ ತಮ್ಮ ಇಲಾಖಾ ಜೀಪಿನಲ್ಲಿ ಚಾಲಕನೊಂದಿಗೆ ಬಂದ ತಹಶೀಲ್ದಾರ್‌ಗೆ ೧ ಲಕ್ಷದ ೨೫ ಸಾವಿರ ರೂ ನೀಡಲು ದಿನೇಶ್ ಪೈ ಮುಂದಾದದರು. ಕೈಯಲ್ಲಿ ಹಣ ತೆಗೆದುಕೊಳ್ಳಲು ನಿರಾಕರಿಸಿದ ತಹಶೀಲ್ದಾರ್‌ರವರು ಜೀಪಿನ ಡ್ಯಾಶ್ ಬೋರ್ಡ್‌ಗೆ ಹಣ ಹಾಕುವಂತೆ ಹೇಳಿದರು. ಅದರಂತೆ ಪೈ ಅಲ್ಲಿ ಹಣ ಹಾಕಿದರು. ಬಳಿಕ ತಹಶೀಲ್ದಾರ್ ಜೀಪಿನಲ್ಲಿ ಮುಂದಕ್ಕೆ ತೆರಳಿದರು. ಆ ವೇಳೆಗಾಗಲೇ ಎದುರಿನಿಂದ ಮತ್ತು ಹಿಂದಿನಿಂದ ಬಂದ ಎ.ಸಿ.ಬಿ. ಅಧಿಕಾರಿಗಳ ತಂಡ ಪರ್ಲಡ್ಕ ಬಳಿಯ ಕಲ್ಲಿಮಾರ್‌ನಲ್ಲಿ ತಹಶೀಲ್ದಾರ್ ಜೀಪಿಗೆ ಸುತ್ತುವರಿದು ತಹಶೀಲ್ದಾರ್‌ರವರನ್ನು ವಶಕ್ಕೆ ಪಡೆದುಕೊಂಡರು. ಈ ವೇಳೆ ಡ್ಯಾಶ್‌ಬೋರ್ಡ್‌ನಲ್ಲಿದ್ದ ಹಣವನ್ನು ತಹಶೀಲ್ದಾರ್ ಕೈಯಿಂದ ಹಿಡಿಸಿ ಪಡೆದುಕೊಂಡ ಅಧಿಕಾರಿಗಳು ನಂತರ ದರ್ಬೆಯಲ್ಲಿರುವ ನಿರೀಕ್ಷಣಾ ಮಂದಿರದಲ್ಲಿ ತನಿಖೆ ನಡೆಸಿದರು. `ರೆಡ್‌ಹ್ಯಾಂಡ್’ ಆಗಿ ಸಿಕ್ಕಿ ಬಿದ್ದಿರುವ ಕುರಿತು ಸಾಕ್ಷ್ಯಾಧಾರಗಳ ಸಂಗ್ರಹದೊಂದಿಗೆ ಡಾ.ಪ್ರದೀಪ್ ಕುಮಾರ್‌ರವರನ್ನು ಬಂಧನಕ್ಕೊಳಪಡಿಸುವ ಪ್ರಕ್ರಿಯೆ ನಡೆಸಿದ ಎ.ಸಿ.ಬಿ. ಅಧಿಕಾರಿಗಳು ನಂತರ ಲಂಚದ ಹಣ ಸಹಿತ ತಹಶೀಲ್ದಾರ್‌ರವರನ್ನು ಮಂಗಳೂರಿನ ೩ನೇ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಮುರಳೀದರ ಪೈಯವರ ಎದುರು ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಧೀಶರು ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್‌ಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದರು.

ರಾತ್ರಿ 11ಕ್ಕೆ ತಹಶೀಲ್ದಾರ್ ಆರೋಗ್ಯ ತಪಾಸಣೆ :
ಲಂಚ ಪಡೆದ ಆರೋಪದಲ್ಲಿ ಸಂಜೆ ವೇಳೆಗೆ ಬಂಧಿತರಾದ ತಹಶೀಲ್ದಾರ್ ಪ್ರದೀಪ್‌ಕುಮಾರ್‌ರವರನ್ನು ರಾತ್ರಿ 11ಗಂಟೆ ವೇಳೆಗೆ ಪುತ್ತೂರಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೊಳಪಡಿಸಲಾಗಿದೆ.

ಸುದ್ದಿ ವೆಬ್‌ಸೈಟ್‌ನಲ್ಲಿ ನ್ಯೂಸ್ ವೈರಲ್…. ದಿನೇಶ್ ಪೈ ದಿಟ್ಟ ಕ್ರಮಕ್ಕೆ ಮೆಚ್ಚುಗೆ
ಲಂಚ ಪಡೆದ ಆರೋಪದಡಿ ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್‌ರವರು ಬಂಧನಕ್ಕೊಳಗಾದ ಸುದ್ದಿಯನ್ನು ಪ್ರಥಮವಾಗಿ ಸಚಿತ್ರವಾಗಿ `ಸುದ್ದಿ ವೆಬ್‌ಸೈಟ್’ ಪ್ರಕಟಿಸಿತ್ತು. ವರದಿ ಪ್ರಕಟಿಸಿದ ಕೆಲವೇ ಸಮಯದಲ್ಲೇ ೧೧ ಸಾವಿರಕ್ಕೂ ಅಧಿಕ ಮಂದಿ ವರದಿ ವೀಕ್ಷಿಸಿದ್ದಾರೆ. ಅಲ್ಲದೆ, ಭ್ರಷ್ಟ ಅಧಿಕಾರಿಯನ್ನು ಬಲೆಗೆ ಕೆಡವಿದ್ದಕ್ಕಾಗಿ ದಿನೇಶ್ ಪೈಯವರ ದಿಟ್ಟ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ತಾಲೂಕು ದಂಡಾಧಿಕಾರಿಯೂ ಆಗಿರುವ ತಹಶೀಲ್ದಾರ್‌ರವರು ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದಾರೆ ಎಂಬ ವಿಚಾರ ಪ್ರಚಾರ ಆಗುತ್ತಿದ್ದಂತೆಯೇ ಇದು ಬಹು ಚರ್ಚೆಯ ವಿಷಯವಾಗಿದೆ.

ಒಟ್ಟು 2 ಲಕ್ಷದ 24 ಸಾವಿರ ರೂ ಲಂಚ
ದಿನೇಶ್ ಪೈಯವರಿಂದ 1 ಲಕ್ಷದ 25 ಸಾವಿರ ರೂ ಲಂಚ ಪಡೆದ ಆರೋಪದಡಿ ತಹಶೀಲ್ದಾರ್ ಪ್ರದೀಪ್ ಬಂಧನ ಕ್ಕೊಳಗಾಗಿದ್ದಾರೆ. ಆದರೆ, ಪ್ರದೀಪ್‌ರವರಿಗೆ ಇದಕ್ಕೂ ಮುಂಚೆ ದಿನೇಶ್ ಪೈಯವರು 99 ಸಾವಿರ ರೂ ಲಂಚ ನೀಡಿದ್ದರು. ಇದು ಸೇರಿದಂತೆ ತಹಶೀಲ್ದಾರ್‌ಗೆ ಅವರು 2ಲಕ್ಷದ 24 ಸಾವಿರ ರೂ ಲಂಚ ನೀಡಿದಂತಾಗಿದೆ. ದಿನೇಶ್ ಪೈರವರು ಮೊದಲು ನೀಡಿದ್ದ 99 ಸಾವಿರ ರೂಪಾಯಿ ಪಡೆಯುವುದಕ್ಕಾಗಿ ಎಸಿಬಿ ಅಧಿಕಾರಿಗಳು ತಹಶೀಲ್ದಾರ್‌ರವರ ಮನೆಗೂ ದಾಳಿ ಮಾಡಿ ಪರಿಶೀಲನೆ ನಡೆಸಿದರು. ಆದರೆ ಆ ಹಣ ದೊರೆತಿಲ್ಲ ಎಂದು ಮಾಹಿತಿ ಲಭ್ಯವಾಗಿದೆ.

 

About The Author

Related posts

2 Comments

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.