ಯೋಗಕ್ಕೆ ಯಾವುದೇ ಜಾತಿ-ಮತ, ಲಿಂಗ-ಬೇಧವಿರದು – ಡಾ.ಚೇತನಾ
ಪುತ್ತೂರು: ವಿಶ್ವದಾದ್ಯಂತ ಯೋಗದಿನವನ್ನು ಆಚರಿಸಲಾಗುತ್ತಿದ್ದು, ಯಾವುದೇ ಜಾತಿ-ಮತ, ಲಿಂಗ-ಬೇಧ ಮರೆತು ಜನರು ಇಂದು ಯೋಗವನ್ನು ಆಭ್ಯಾಸ ಮಾಡುತ್ತಿದ್ದಾರೆ. ಮಾನವನ ದೈಹಿಕ, ಬೌದ್ಧಿಕ, ಅಧ್ಯಾತ್ಮಿಕತೆ, ಮಾನಸಿಕ ಸಾಮಾರ್ಥ್ಯವನ್ನು ಹೆಚ್ಚಿಸಲು ಯೋಗವು ಪರಿಪೂರ್ಣ ಸಾಧನವಾಗಿದೆ ಎಂದು ಪುತ್ತೂರಿನ ಸಿಟಿ ಹಾಸ್ಪಿಟಲ್ ಇದರ ಆಯುರ್ವೇದ ಮತ್ತು ಯೋಗ ಕನ್ಸಲ್ಟೆಂಟ್ ಡಾ|ಚೇತನಾರವರು ಹೇಳಿದರು.
ಅವರು ಜೂ.21 ರಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜು ಮತು ಪದವಿ ಪೂರ್ವ ಕಾಲೇಜ್ನ ಜಂಟಿ ಆಶ್ರಯದಲ್ಲಿ ಕಾಲೇಜ್ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಬೆಳಿಗ್ಗೆ 19ಕರ್ನಾಟಕ ಬೆಟಾಲಿಯನ್ ಮಡಿಕೇರಿ ಇದರ ನಿರ್ದೇಶನದಲ್ಲಿ ಜರಗಿದ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಆರೋಗ್ಯದಲ್ಲಿನ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಯೋಗವು ಮುಖ್ಯ ರಹದಾರಿಯಾಗಿದ್ದು, ವಿಶ್ವದಾದ್ಯಂತ ಇಂದು ಯೋಗಕ್ಕೆ ಮನ್ನಣೆ ಲಭಿಸಿದೆ. ಮನುಷ್ಯನಿಗೆ ಸಣ್ಣ ವಯಸ್ಸಿನಿಂದಲೇ ಸಮಸ್ಯೆಗಳು ಕಾಣಸಿಗುತ್ತಿದ್ದು, ಇದಕ್ಕೆ ಚಿಕ್ಕಂದಿನಿಂದಲೇ ಪ್ರತಿ ದಿನದ ಅರ್ಧ ಗಂಟೆ ಯೋಗಾಭ್ಯಾಸ ಮಾಡಿದರೆ ಸಮಸ್ಯೆ ನಿವಾರಣೆಯಾಗಬಲ್ಲುದು. ಯೋಗದಲ್ಲಿ ಅನೇಕ ಆಸನಗಳಿದ್ದು, ಇವುಗಳಲ್ಲಿ ಪ್ರಾಣಾಯಾಮವು ಮಾನವನಿಗೆ ಬಹಳ ಪ್ರಯೋಜನಕಾರಿಯಾಗಿದ್ದು, ಇದು ಮಾನವನ ಮೆದುಳಿಗೆ ಆಕ್ಸಿಜನ್ ರವಾನಿಸಬಲ್ಲುದಾಗಿದೆ ಎಂದ ಅವರು ಯೋಗ ದಿನಾಚರಣೆಯನ್ನು ಕೇವಲ ಒಂದು ದಿನಕ್ಕೆ ಸೀಮಿತವಾಗಿಸದೆ ಇದು ನಿರಂತರವಾಗಿರಲಿ. ಯೋಗವನ್ನು ಆಭ್ಯಸಿಸುವುದರಿಂದ ಮಾನವನ ಕಾನ್ಫಿಡೆನ್ಸ್ ಲೆವೆಲ್ ಉತ್ತಮವಾಗಿರುಸುತ್ತದೆ ಮತ್ತು ಸೋಮಾರಿತನವನ್ನು ಹೋಗಲಾಡಿಸಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ಕಾಲೇಜಿನ ಕ್ಯಾಂಪಸ್ ಇನ್-ಚಾರ್ಜ್ ವಂ|ಡಾ| ಆಂಟನಿ ಪ್ರಕಾಶ್ ಮೊಂತೆರೊರವರು ಮಾತನಾಡಿ, ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿಯೇ ಋಷಿಮುನಿಗಳು ಯೋಗಾಭ್ಯಾಸವನ್ನು ಮಾಡುವ ಮೂಲಕ ಯೋಗವನ್ನು ಪರಿಚಯಿಸಿದ್ದರು. ಯೋಗ ಮಾಡುವುದರಿಂದ ಯೋಗದಿಂದ ಆಗುವ ಒಳಿತಿನ ಬಗ್ಗೆ ಅಂದೇ ಋಷಿಮುನಿಗಳಿಗೆ ತಿಳಿದಿತ್ತು. ಮನುಷ್ಯನಿಗೆ ಬೌದ್ಧಿಕ, ಭೌತಿಕ, ಮಾನಸಿಕ, ಆಧ್ಯಾತ್ಮಿಕ, ಭಾವನಾತ್ಮಕತೆಯ ಆಯಾಮಗಳನ್ನು ಧರ್ಮಾತೀತವಾಗಿ ಬೆಳೆಯುವ ನಿಟ್ಟಿನಲ್ಲಿ ಯೋಗವು ಬಹಳ ಸಹಕಾರಿಯಾಗಿದೆ ಮಾತ್ರವಲ್ಲದೆ ಮನುಷ್ಯನನ್ನು ನಿಜವಾದ ಮಾನವತೆಯತ್ತ ಬೆಳೆಯಲು ಮತ್ತು ದೇಹದ ಆರೋಗ್ಯವನ್ನು ಸಮತೋಲನದಲ್ಲಿ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಫಿಲೋಮಿನಾ ಪುರುಷರ ಹಾಸ್ಟೆಲ್ನ ವಾರ್ಡನ್ ವಂ|ರಿತೇಶ್ ರೊಡ್ರಿಗಸ್, ಮಹಿಳೆಯರ ಹಾಸ್ಟೆಲ್ನ ವಾರ್ಡನ್ ಸಿಸ್ಟರ್ ಫ್ಲೋರಾ ಮಚಾದೋ, ಕಾಲೇಜಿನ ಎನ್ಸಿಸಿ ಅಧಿಕಾರಿ ಲೆಪ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೇರಾ, ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಕಾಶ್ ಡಿ’ಸೋಜ, ರಾಜೇಶ್ ಮೂಲ್ಯ, ರೋವರ್ಸ್-ರೇಂಜರ್ಸ್ ಅಧಿಕಾರಿ ಹರ್ಷದ್ ಇಸ್ಮಾಯಿಲ್ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪದವಿ ಪೂರ್ವ ಕಾಲೇಜ್ನ ಪ್ರಾಂಶುಪಾಲ ವಂ|ವಿಜಯ್ ಲೋಬೊರವರು ಸ್ವಾಗತಿಸಿ, ಪದವಿ ಪೂರ್ವ ಕಾಲೇಜ್ನ ಉಪನ್ಯಾಸಕಿ ಡಾ|ಆಶಾ ಸರಸ್ವತಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜುಗಳ ಎನ್ಸಿಸಿ ಕೆಡೆಟ್ಗಳು, ಕ್ರೀಡಾಪಟುಗಳು, ರೋವರ್ಸ್-ರೇಂಜರ್ಸ್ ಹಾಗೂ ಕಾಲೇಜಿನ ಪುರುಷ ಮತ್ತು ಮಹಿಳಾ ವಸತಿ ನಿಲಯದ ಸುಮಾರು ೩೦೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಾಣಾಯಾಮದೊಂದಿಗೆ ತರಗತಿ ಆರಂಭಿಸಿ… ದಿನವಿಡೀ ಉಲ್ಲಾಸಭರಿತರಾಗಿರುತ್ತೀರಾ…
ಫಿಲೋಮಿನಾ ವಿದ್ಯಾಸಂಸ್ಥೆಯು ಅಂದಿನಿಂದ ಇಂದಿನವರೆಗೆ ಕ್ರೀಡೆಗೆ ಬಹಳ ಪ್ರಸಿದ್ಧಿ ಪಡೆದ ವಿದ್ಯಾಸಂಸ್ಥೆಯಾಗಿದೆ. ಫಿಲೋಮಿನಾ ವಿದ್ಯಾಸಂಸ್ಥೆಯ ಕ್ರೀಡಾಪಟುಗಳು ಇಂದು ಸಮಾಜದ ಉನ್ನತ ಸ್ಥಾನದಲ್ಲಿ ರಾರಾಜಿಸುತ್ತಿರುವುದು ಅಭಿಮಾನದ ವಿಷಯವಾಗಿದೆ. ವ್ಯಾಯಾಮವು ಮಾನವನ ದೈಹಿಕ ಸಾಮಾರ್ಥ್ಯವನ್ನು ಮಾತ್ರ ವೃದ್ಧಿಸಲು ಸಹಕಾರಿಯಾಗಬಲ್ಲುದು. ಆದರೆ ಯೋಗವು ಮಾನವನ ಮಾನಸಿಕ, ದೈಹಿಕ ಸ್ಥಿರತೆಯನ್ನು ಕಾಪಾಡುವಲ್ಲಿ ತುಂಬಾ ಪ್ರಯೋಜನಕಾರಿ ಎನಿಸಿದೆ. ಆದ್ದರಿಂದ ಬೆಳಿಗ್ಗೆ ಕಾಲೇಜ್ ಆರಂಭವಾಗುವ ಮುನ್ನ ಹತ್ತು ನಿಮಿಷ ಪ್ರಾಣಾಯಾಮವನ್ನು ಮಾಡಿ ಬಳಿಕ ಆರಂಭಿಸಿದಾಗ ವಿದ್ಯಾರ್ಥಿಗಳು ದಿನವಿಡೀ ಉಲ್ಲಾಸಭರಿತರಾಗಿ ಇರಲು ಸಾಧ್ಯವಾಗುತ್ತದೆ –ಡಾ.ಚೇತನಾ, ಆಯುರ್ವೇದ ಮತ್ತು ಯೋಗ ಕನ್ಸಲ್ಟೆಂಟ್, ಪುತ್ತೂರು ಸಿಟಿ ಆಸ್ಪತ್ರೆ
ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಸಾಧನೆಯನ್ನು ಮಾಡಿ `ಯೋಗ ಕುಮಾರಿ’ ಪ್ರಶಸ್ತಿ ಪಡೆದ ವಿದ್ಯಾರ್ಥಿನಿ, ಪ್ರಸ್ತುತ ಕಾಲೇಜ್ನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿರುವ ಯೋಗ ಪ್ರತಿಭೆ ಪ್ರಣಮ್ಯ ಅಗಳಿರವರು ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ನಡೆಸಿಕೊಟ್ಟರು ಮಾತ್ರವಲ್ಲದೆ ಯೋಗಾಭ್ಯಾಸದ ಕೊನೆಗೆ ಪ್ರಣಮ್ಯ ಅಗಳಿರವರು ಹತ್ತು ನಿಮಿಷ ತಾನು ಆಭ್ಯಸಿಸಿದ ಯೋಗದ ಕಷ್ಟಕರವುಳ್ಳ ಪ್ರಮುಖ ಆಸನಗಳನ್ನು ಮಾಡುತ್ತಾ ನೋಡುಗರನ್ನು ನಿಬ್ಬೆರೆರನ್ನಾಗಿಸಿದ್ದರು.
Commendable beginning. Let this be a regular part of College curriculum