ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಜೂ.21 ರಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಚರ್ಚ್ನ ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೋರವರು ಮಾತನಾಡಿ, ಯೋಗದಿಂದ ನಮ್ಮ ದೇಹಕ್ಕೆ ಆಗುವ ಲಾಭಗಳ ಬಗ್ಗೆ ಹಾಗೂ ೨೦೧೯ತ ಯೋಗ ಆಚರಣೆಗೆ ವಿಶ್ವಸಂಸ್ಥೆ ನೀಡಿರುವ ಧ್ಯೇಯವೇ ಹವಾಮಾನ ಕ್ರಿಯೆ ಎಂದು ಹೇಳಿದರು. ಶಾಲೆಯ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಉಲ್ಲಾಸ್ ಪೈಯವರು ಮಾತನಾಡಿ, ಯೋಗ ಭಾರತದಲ್ಲಿ ಪ್ರಾರಂಭವಾಗಿ ಇಂದು ವಿದೇಶದಲ್ಲೂ ಅದರ ಪ್ರಭಾವ ಪಸರಿಸಿದೆ ಎಂದರು.
ಮಕ್ಕಳ ಸುರಕ್ಷಾ ಸಮಿತಿಯ ಸಂಯೋಜಕಿ ಚಿತ್ರಾ ಪೈಯವರು ಮಾತನಾಡಿ, ಯೋಗದಿಂದ ನಮ್ಮ ಮನಸ್ಸಿನ ದುಷ್ಟ ಶಕ್ತಿಗಳನ್ನು ತಡೆಯಲು ಸಾಧ್ಯವೆಂದರು. ಶಾಲಾ ಹಿರಿಯ ಶಿಕ್ಷಕ ಇನಾಸ್ ಗೊನ್ಸಾಲ್ವಿಸ್ರವರು ದಿನನಿತ್ಯ ಯೋಗಕ್ಕೆ ವಿದ್ಯಾರ್ಥಿನಿಯರು ಸ್ವಲ್ಪ ಸಮಯವನ್ನು ಮೀಸಲಾಗಿಡಬೇಕೆಂದರು. ಯೋಗವು ವಿದ್ಯಾರ್ಥಿನಿಯರ ಕಲಿಕೆಗೆ, ಏಕಾಗ್ರತೆಗೆ ಸಹಕಾರಿಯಾಗುವುದು ಎಂದರು.
ಕು.ವರ್ಷಿಣಿ ಕೆ.ಪಿ ದಿನದ ಮಹತ್ವವನ್ನು ತಿಳಿಸಿದರು. ಕು.ಮಿಶಲ್ ಫೆರ್ನಾಂಡೀಸ್ ಸ್ವಾಗತಿಸಿ, ಕು.ರೋಶಲ್ ಡಿ’ಸಿಲ್ವ ವಂದಿಸಿದರು. ಕು.ಪೂಜಾ ಬಿ.ಕೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿನಿಯರು ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಿದರು.