ಪುತ್ತೂರು: ಪುತ್ತೂರಿನ ಪ್ರಮುಖ ರಸ್ತೆಯಾದ ಎಂ.ಟಿ ರಸ್ತೆ ಬದಿಯ ಚರಂಡಿಯಲ್ಲಿ ಮಳೆ ನೀರು ನಿಂತು ದುರ್ನಾತ ಬೀರುತ್ತಿದ್ದು, ಸೊಳ್ಳೆ ಉತ್ಪಾಧನಾ ವೇದಿಕೆಯಾಗಿ ರೂಪುಗೊಂಡಿದೆ.
ಇತ್ತೀಚೆಗಷ್ಟೆ ನಗರತ್ಥೋನಾ ಅನುದಾನದಲ್ಲಿ ಎಂ.ಟಿ ರಸ್ತೆಯಲ್ಲಿ ನೂತನವಾಗಿ ಕಾಂಕ್ರಿಟೀಕರಣ ರಸ್ತೆ ನಿರ್ಮಾಣಗೊಂಡಿದೆ. ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ ರಸ್ತೆ ಬದಿಯಲ್ಲಿ ಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಚರಂಡಿಯಲ್ಲಿ ನೀರು, ತ್ಯಾಜ್ಯಗಳು ತುಂಬಿಕೊಂಡಿದೆ. ಇಲ್ಲಿಯೇ ಪರ್ಲಡ್ಕಕ್ಕೆ ಹೋಗುವ ರಿಕ್ಷಾಗಳ ಪಾರ್ಕಿಂಗ್ ಕೂಡಾ ಇದೆ. ಇದರಿಂದಾಗಿ ಈ ಭಾಗದಲ್ಲಿ ಸಾಗುವ ವಾಹನಗಳು, ಪಾರ್ಕಿಂಗ್ನಲ್ಲಿನ ರಿಕ್ಷಾ ಚಾಲಕರು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ನೀರು ನಿಂತಿರುವುದರಿಂದ ಸೊಳ್ಳೆಗಳು ಹೆಚ್ಚಾಗಿ ರೋಗ ಹರಡುವ ಭಯವೂ ಎದುರಾಗಿದೆ. ಮಳೆಗಾಲದಲ್ಲಿ ರಸ್ತೆ ಚರಂಡಿ ದುರಸ್ತಿಗೊಳಿಸಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿದ್ದರೆ ಈ ಸಮಸ್ಯೆಗಳು ಉದ್ಭವಿಸಲು ಸಾಧ್ಯವಿರಲಿಲ್ಲ. ಇನ್ನಾದರೂ ನಗರಸಭೆ ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂಬುದು ಇಲ್ಲಿನ ರಿಕ್ಷಾ ಚಾಲಕರ ಹಾಗೂ ಸ್ಥಳೀಯರ ಆಗ್ರಹವಾಗಿದೆ.