ಪುತ್ತೂರು: ಅಂಬಿಕಾ ಪದವಿ ಪೂರ್ವ ಕಾಲೇಜು ಬಪ್ಪಳಿಗೆ ಇಲ್ಲಿನ ವಿದ್ಯಾರ್ಥಿ ಸಂಘದ ಉದ್ಫಾಟನಾ ಸಮಾರಂಭವು ನೆರವೇರಿತು, ಪುತ್ತೂರಿನ ಖ್ಯಾತ ವೈದ್ಯರಾದ ಡಾ. ಗೋಪಿನಾಥ್ ಪೈ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದಾಗ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ವಿದ್ಯಾರ್ಥಿಗಳು ಗುರುಗಳನ್ನು ಗೌರವದಿಂದ ಕಾಣಬೇಕು. ಎದುರಾಗುವ ಸಮಸ್ಯೆಗಳಿಗೆ ಹೆದರದೆ ದೈರ್ಯದಿಂದ ಮುನ್ನುಗ್ಗುವ ಛಲವನ್ನು ಬೆಳೆಸಿಕೊಳ್ಳಿ ಎಂದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ವರುಣ್ ಎಮ್, ಉಪಾಧ್ಯಕ್ಷೆ ಶ್ರೀಕನ್ಯಾ, ಕಾರ್ಯದರ್ಶಿ ಪ್ರಥಮ್ ಎಸ್. ಪ್ರಭು, ಸಹಕಾರ್ಯದರ್ಶಿ ಮಾನ್ಸಿ ಮುತ್ತಮ್ಮ ಇವರಿಗೆ ಕಾಲೇಜಿನ ಪ್ರಾಂಶುಪಾಲರಾದ ಎಸ್. ಎನ್. ಭಟ್ ಇವರು ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು.
ಸಂಸ್ಥೆಯ ಸಂಚಾಲಕರಾದ ಸುಬ್ರಮಣ್ಯ ನಟ್ಟೋಜ ಮಾತನಾಡಿ ಮಕ್ಕಳು ನಾಯಕತ್ವದ ಗುಣಗಳನ್ನು ವಿದ್ಯಾರ್ಥಿ ಜೀವನದಲ್ಲೇ ಆಳವಡಿಸಿಕೊಳ್ಳಬೇಕೆಂದು ಕರೆಯಿತ್ತರು. ಆಡಳಿತ ಮಂಡಳಿಯ ಸದಸ್ಯರಾದ ಸುರೇಶ್ ಶೆಟ್ಟಿ ಹಾಗೂ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆ ಇಲ್ಲಿನ ಪ್ರಾಂಶುಪಾಲರಾದ ರಾಜಶ್ರೀ ಎಸ್. ನಟ್ಟೋಜ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಣಕಯಂತ್ರ ಉಪನ್ಯಾಸಕಿ ಜಯಂತಿ ಹೊನ್ನಮ್ಮ ನಿರೂಪಿಸಿ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಅರ್ಪಿತಾ ಮತ್ತು ದೀಕ್ಷಾ ಪ್ರಾರ್ಥಿಸಿದರು. ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕ ತಿಲೋಶ್ ಕುಮಾರ್ ವಂದಿಸಿದರು.