ಕಡಬ: ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬರುವ ನೂಜಿಬಾಳ್ತಿಲ ಗ್ರಾ.ಪಂ.ವ್ಯಾಪ್ತಿಯ ರೆಂಜಿಲಾಡಿ ವ್ಯಾಪ್ತಿಯಲ್ಲಿದ್ದ ಅಪಾಯಕಾರಿ ಮರಗಳನ್ನು ಅರಣ್ಯ ಹಾಗೂ ಮೆಸ್ಕಾಂ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಜೂ.17 ರಂದು ತೆರವುಗೊಳಿಸಿದ್ದಾರೆ.
ರೆಂಜಿಲಾಡಿ ಗ್ರಾಮದ ಪೇರಡ್ಕ ಸಮೀಪದ ಗರ್ಗಸ್ಪಾಲ್ ತಿರುವಿನಲ್ಲಿ ಹೆದ್ದಾರಿ ಅಂಚಿನಲ್ಲಿಯೇ ಮಾವು ಸೇರಿದಂತೆ ವಿವಿಧ ಜಾತಿಯ ಮರಗಳು ಬೃಹದಾಕಾರವಾಗಿ ಬೆಳೆದು ಅಪಾಯಕಾರಿ ಸ್ಥಿತಿಯಲ್ಲಿತ್ತು. ಹೆದ್ದಾರಿ ಪಕ್ಕವೇ ಮರಗಳು ಬೆಳೆದ ಪರಿಣಾಮ ವಾಹನ ಸವಾರರಿಗೂ ಅಪಾಯಕಾರಿಯಾಗಿತ್ತು. ಮಳೆಗಾಲದಲ್ಲಿ ಗಾಳಿಮಳೆಗೆ ಮರ ಹಾಗೂ ಮರದ ಗೆಲ್ಲುಗಳು ಮುರಿದು ಹೆದ್ದಾರಿಯ ಮೇಲೆಯೇ ಬೀಳುತ್ತಿದ್ದವು. ಇದರಿಂದಾಗಿ ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯ ಕ್ಷೇತ್ರ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಸುವ ಯಾತ್ರಾರ್ಥಿಗಳು, ಪ್ರಯಾಣಿಕರು ಆತಂಕದಿಂದಲೇ ಪ್ರಯಾಣ ಬೆಳೆಸುತ್ತಿದ್ದರು. ಅಪಾಯಕಾರಿಯಾಗಿರುವ ಮರಗಳನ್ನು ತೆರವುಗೊಳಿಸುವಂತೆ ಜನಸಂಪರ್ಕ ಸಭೆ, ಗ್ರಾಮ ಸಭೆಗಳಲ್ಲಿ ಗ್ರಾಮಸ್ಥರು ಒತ್ತಾಯಿಸುತ್ತಲೇ ಬಂದಿದ್ದರು. ಮರ ತೆರವಿಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂಬ ಉತ್ತರ ಅರಣ್ಯ ಇಲಾಖೆ ಅಧಿಕಾರಿಗಳು ನೀಡುತ್ತಿದ್ದರಯೇ ಹೊರತು ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಅರಣ್ಯ ಹಾಗೂ ಮೆಸ್ಕಾಂ ಇಲಾಖೆಯವರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಪಾಯಕಾರಿಯಾಗಿದ್ದ ಮರಗಳನ್ನು ತೆರವುಗೊಳಿಸಿದ್ದಾರೆ. ಮೆಸ್ಕಾಂನವರು ವಿದ್ಯುತ್ ಲೈನ್ ತೆರವುಗೊಳಿಸಿ ಸಹಕರಿಸಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಮರಗಳನ್ನು ತೆರವುಗೊಳಿಸಿದರು.
ಎ.ಸಿ.ಸೂಚನೆ:
ಹೆದ್ದಾರಿ ಬದಿಯ ಅಪಾಯಕಾರಿ ಮರವನ್ನು ತೆರವುಗೊಳಿಸುವಂತೆ ನೂಜಿಬಾಳ್ತಿಲ ಗ್ರಾಮಸಭೆ, ಜನಸಂಪರ್ಕ ಸಭೆಗಳಲ್ಲಿ ಹಲವು ವರ್ಷಗಳಿಂದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದರು. ಕಡಬದಲ್ಲಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಹೆಚ್.ಕೆ.ಕೃಷ್ಣಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿಯೂ ರೆಂಜಿಲಾಡಿ ವ್ಯಾಪ್ತಿಯಲ್ಲಿನ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಮರ ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಹಾಯಕ ಆಯುಕ್ತ ಹೆಚ್.ಕೆ. ಕೃಷ್ಣಮೂರ್ತಿಯವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ರೆಂಜಿಲಾಡಿ ವ್ಯಾಪ್ತಿಯಲ್ಲಿ ಹೆದ್ದಾರಿ ಬದಿ ಅಪಾಯಕಾರಿ ಮರಗಳಿರುವ ಬಗ್ಗೆ ಮಾಧ್ಯಮಗಳಲ್ಲಿಯೂ ವರದಿ ಪ್ರಕಟಗೊಂಡಿತ್ತು. ಇದೀಗ ಅರಣ್ಯ ಇಲಾಖೆಯವರು ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.