Home_Page_Advt
Home_Page_Advt
Home_Page_Advt

ಎ.ಸಿ.ಬಿ. ಬಲೆಗೆ ಬಿದ್ದ ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್‌ಗೆ ನ್ಯಾಯಾಂಗ ಬಂಧನ

Puttur_Advt_NewsUnder_1
Puttur_Advt_NewsUnder_1
  • ಅನಾರೋಗ್ಯದ ಕಾರಣ ನೀಡಿ ಆಸ್ಪತ್ರೆಗೆ ದಾಖಲಿಸುವಂತೆ ಒತ್ತಾಯಿಸಿದ್ದ ತಹಶೀಲ್ದಾರ್-ವೈದ್ಯರ ನಿರಾಕರಣೆ
  • ತಹಶೀಲ್ದಾರ್ ಪರ ಮಧ್ಯ ರಾತ್ರಿ ನ್ಯಾಯಾಧೀಶರ ಮನೆಗೆ ಹಾಜರಾದ ವಕೀಲ-ಜಾಮೀನು ನಿರಾಕರಣೆ

ಪಶುವೈದ್ಯರಾಗಿದ್ದ ಪ್ರದೀಪ್‌ರವರು ಜನವರಿಯಲ್ಲಿ ಪುತ್ತೂರಿಗೆ…
ಮೂಲತಃ ಬೀದರ್‌ನವರಾದ ಡಾ. ಪ್ರದೀಪ್ ಕುಮಾರ್‌ರವರು ಪಶುವೈದ್ಯರಾಗಿದ್ದರು. ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜ್‌ನಲ್ಲಿ ಉಪನ್ಯಾಸಕರಾಗಿದ್ದ ಇವರು ಬಳಿಕ ಕೆ.ಎ.ಎಸ್.ಪರೀಕ್ಷೆ ಬರೆದು ಪ್ರೊಬೆಷನರಿ ತಹಶೀಲ್ದಾರ್ ಆಗಿ ಆಯ್ಕೆಯಾಗಿ ಪುತ್ತೂರಿನಲ್ಲಿ 2019ರ ಜನವರಿ 11ರಂದು ಕರ್ತವ್ಯಕ್ಕೆ ಹಾಜರಾಗಿದ್ದರು.

ತಹಶೀಲ್ದಾರ್ ಕಛೇರಿಯಲ್ಲಿ ಮಹಜರು: ಡಿ.ಸಿ. ಕಛೇರಿಯಲ್ಲಿ ಕಡತ ಪರಿಶೀಲನೆ
ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್‌ರವರು ಎಸಿಬಿ ಬಲೆಗೆ ಬಿದ್ದಿರುವ ಹಿನ್ನೆಲೆಯಲ್ಲಿ ತನಿಖೆಯ ಮುಂದುವರಿದ ಭಾಗವಾಗಿ ಡಾ. ಪ್ರದೀಪ್ ಕುಮಾರ್‌ರವರು ಕಾರ್ಯ ನಿರ್ವಹಿಸುತ್ತಿದ್ದ ಪುತ್ತೂರು ಮಿನಿವಿಧಾನ ಸೌಧದ ತಹಶೀಲ್ದಾರ್ ಸಭಾಂಗಣದಲ್ಲಿ ಜೂ.೨೧ರಂದು ಸಂಜೆ ಭ್ರಷ್ಟಾಚಾರ ನಿಗ್ರಹದಳದ ಡಿವೈಎಸ್‌ಪಿ ಮಂಜುನಾಥ್ ಕೌರಿಯವರು ಮಹಜರು ನಡೆಸಿದ್ದಾರೆ. ಅವರು ಬಳಸುತ್ತಿದ್ದ ಡ್ರಾಯರ್‌ಗಳನ್ನು ಡಿ.ವೈ.ಎಸ್.ಪಿ.ಪರಿಶೀಲನೆ ನಡೆಸಿದ್ದಾರೆ. ಎಸಿಬಿಯ ಇನ್ನೊಂದು ತಂಡ ಮಂಗಳೂರಿನಲ್ಲಿರುವ ದ.ಕ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಡಾ.ಪ್ರದೀಪ್ ಕುಮಾರ್‌ರವರು ನಿರ್ವಹಿಸಿದ ಕಡತಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಿದ್ದಾರೆ.

ಪುತ್ತೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಊಟ ಹಾಗೂ ಉಪಹಾರ ಒದಗಿಸಿದ್ದ ಪರ್ಲಡ್ಕದ ಪೈ ಕೆಟರಿಂಗ್ ಮಾಲಕ ದಿನೇಶ್ ಪೈಯವರಿಗೆ 9 ಲಕ್ಷದ 39 ಸಾವಿರ ರೂ ಶುಲ್ಕವನ್ನು ಸರಕಾರದಿಂದ ಮಂಜೂರು ಮಾಡಿಸಲು ೧ ಲಕ್ಷದ ೨೫ ಸಾವಿರ ರೂಪಾಯಿ ಲಂಚ ಸ್ವೀಕರಿಸಿದ ಆರೋಪದಡಿ ಜೂನ್ 20ರಂದು ಸಂಜೆ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳ ಬಲೆಗೆ ಬಿದ್ದಿರುವ ಪುತ್ತೂರು ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್‌ರವರಿಗೆ ಮಂಗಳೂರಿನ ಮೂರನೇ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ ಪೈಯವರು ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಈ ಮಧ್ಯೆ ತನಗೆ ತೀವ್ರ ಅನಾರೋಗ್ಯ ಉಂಟಾಗಿದೆ ಎಂದು ತಿಳಿಸಿ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಲು ಪ್ರಯತ್ನಿಸಿದ್ದ ತಾಲೂಕು ದಂಡಾಧಿಕಾರಿಯೂ ಆಗಿರುವ ತಹಶೀಲ್ದಾರ್ ಪ್ರದೀಪ್ ಕುಮಾರ್‌ರವರಿಗೆ ಈ ವಿಚಾರದಲ್ಲಿ ಹಿನ್ನಡೆಯಾಗಿದ್ದು ಅವರ ಪರ ವಕೀಲ ಲಮಾಣಿ ಎಂಬವರು ಸಲ್ಲಿಸಿದ್ದ ಜಾಮೀನು ಅರ್ಜಿಯೂ ವಜಾಗೊಂಡಿದೆ. ಈ ಹಿನ್ನೆಲೆಯಲ್ಲಿ ಡಾ. ಪ್ರದೀಪ್‌ರವರು ಸದ್ಯ ಮಂಗಳೂರಿನ ಕಾರಾಗೃಹದಲ್ಲಿ ಇರುವಂತಾಗಿದೆ.

ತಹಶೀಲ್ದಾರ್ ಪರ ಮಧ್ಯರಾತ್ರಿ ನ್ಯಾಯಾಧೀಶರ ಮನೆಗೆ ಹಾಜರಾದ ವಕೀಲ; ಎಪ್ರಿಲ್ 18ರಂದು ನಡೆದ ದ.ಕ.ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಮಾರ್ಚ್ 30ರಿಂದ ಎಪ್ರಿಲ್ 18ರವರೆಗೆ ನಡೆದ ಪುತ್ತೂರು ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯದಲ್ಲಿ ಭಾಗವಹಿಸಿದ್ದ ಕಂದಾಯ ಇಲಾಖೆಯೂ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪ್ರತೀ ಹಗಲು ರಾತ್ರಿ ಊಟ, ಉಪಹಾರ ಪೂರೈಸಿದ್ದಪರ್ಲಡ್ಕದ ಪೈ ಕೆಟರಿಂಗ್‌ನವರಿಗೆ ಸರಕಾರದಿಂದ ನೀಡಬೇಕಾದ 9 ಲಕ್ಷದ 39 ಸಾವಿರ ರೂಪಾಯಿ ಪಾವತಿಸಲು ಕೆಟರಿಂಗ್ ಮಾಲಕ ದಿನೇಶ್ ಪೈಯವರಿಂದ ಲಂಚ ಪಡೆದ ಆರೋಪದಲ್ಲಿ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್‌ರವರನ್ನು ದರ್ಬೆಯ ನಿರೀಕ್ಷಣಾ ಮಂದಿರದಲ್ಲಿ ಬಂಧಿಸಿ ರಾತ್ರಿ 11 ಗಂಟೆಯ ವೇಳೆಗೆ ಪುತ್ತೂರಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಈ ವೇಳೆ ತಹಶೀಲ್ದಾರ್‌ರವರು ತನಗೆ ಜ್ವರ ಬರುತ್ತಿದೆ, ತಲೆನೋವು ಆಗುತ್ತಿದೆ. ಸುಸ್ತು ಆಗುತ್ತಿದೆ, ಎದೆ ಬಡಿತ ಜೋರಾಗುತ್ತಿದೆ ಎಂದು ಹೇಳಿದರಲ್ಲದೆ ತನ್ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಬೇಕು ಎಂದು ಕೇಳಿಕೊಂಡಿದ್ದರು. ಆದರೆ, ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಆಕ್ಷೇಪ ಸೂಚಿಸಿದ್ದರಲ್ಲದೆ ಇದೆಲ್ಲವನ್ನೂ ಎಲ್ಲಾ ತಪ್ಪಿತಸ್ಥರು ಮಾಡುತ್ತಾರೆ, ತಹಶೀಲ್ದಾರ್‌ರವರು ಆರೋಗ್ಯಯುತರಾಗಿದ್ದಾರೆ ಎಂದು ವೈದ್ಯರಿಗೆ ತಿಳಿಸಿದ್ದರು. ನಂತರ ತಪಾಸಣೆಗೊಳಪಡಿಸಿದ ವೈದ್ಯೆ ಡಾ.ವೀಣಾರವರು ತಹಶೀಲ್ದಾರ್ ಆರೋಗ್ಯವಾಗಿದ್ದಾರೆ ಎಂದು ದೃಢಪಡಿಸಿದರು. ಬಳಿಕ ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್‌ರವರನ್ನು ಮಂಗಳೂರಿಗೆ ಅಧಿಕಾರಿಗಳು ಕರೆದುಕೊಂಡು ಹೋಗಿದ್ದರು. ಈ ವೇಳೆ ಡಾ. ಪ್ರದೀಪ್ ಕುಮಾರ್‌ರವರ ಅಧಿಕಾರಿ ಸ್ನೇಹಿತರು, ಕಾಲೇಜು ಸಹಪಾಠಿಗಳು ನ್ಯಾಯಾಧೀಶರ ಮನೆ ಮುಂದೆ ಜಮಾಯಿಸಿದ್ದರು. ಎ.ಸಿ.ಬಿ. ಜಿಲ್ಲಾ ವರಿಷ್ಠಾಧಿಕಾರಿ ಉಮಾಪ್ರಶಾಂತ್‌ರವರ ನಿರ್ದೇಶನದಂತೆ ತಹಶೀಲ್ದಾರ್‌ರವರನ್ನು ಬಂಧಿಸಿದ್ದ ಡಿವೈಎಸ್‌ಪಿ ಮಂಜುನಾಥ್ ಕೌರಿ, ಇನ್ಸ್‌ಪೆಕ್ಟರ್‌ಗಳಾದ ಯೋಗೀಶ್ ಕುಮಾರ್ ಮತ್ತು ಮೋಹನ್ ಕೊಟ್ಟಾರಿರವರು ಮಧ್ಯ ರಾತ್ರಿ 3 ಗಂಟೆ ವೇಳೆಗೆ ನ್ಯಾಯಾಧೀಶ ಮುರಳೀಧರ ಪೈಯವರ ಮನೆಯೊಳಗೆ ಹೋಗಿ ಪ್ರದೀಪ್ ಕುಮಾರ್‌ರವರನ್ನು ಹಾಜರುಪಡಿಸುತ್ತಿದ್ದಂತೆಯೇ ಅಲ್ಲಿ ವಕೀಲ ಲಮಾಣಿಯವರು ಹಾಜರಾಗಿ ತಹಶೀಲ್ದಾರ್‌ಗೆ ಜಾಮೀನು ಮಂಜೂರು ಮಾಡುವಂತೆ ವಾದಿಸಿದರು. ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಜಾಮೀನು ನೀಡುವುದಕ್ಕೆ ತೀವ್ರ ಆಕ್ಷೇಪ ಸೂಚಿಸಿದರಲ್ಲದೆ ಇದೊಂದು ಗಂಭೀರ ಪ್ರಕರಣವಾಗಿರುವುದರಿಂದ ಜಾಮೀನು ನೀಡಬಾರದು ಎಂದು ಪ್ರತಿವಾದ ಮಂಡಿಸಿದರು. ಬಳಿಕ ನ್ಯಾಯಾಧೀಶ ಮುರಳೀಧರ ಪೈಯವರು ಡಾ. ಪ್ರದೀಪ್ ಕುಮಾರ್‌ಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದರು. ನಂತರ ಎ.ಸಿ. ಬಿ. ಅಧಿಕಾರಿಗಳು ಮುಂಜಾನೆ ೪.೩೦ರ ವೇಳೆಗೆ ಡಾ. ಪ್ರದೀಪ್ ಕುಮಾರ್‌ರವರನ್ನು ಮಂಗಳೂರು ಕಾರಾಗ್ರಹಕ್ಕೆ ಒಪ್ಪಿಸಿದ್ದಾರೆ.

ಎ.ಸಿ.ಯವರ ಬುದ್ಧಿ ಮಾತು ಕೇಳಿದ್ದರೆ ಹೀಗಾಗುತ್ತಿರಲಿಲ್ಲ…
ಲಂಚ ಪಡೆದು ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್‌ರವರು ತನಗೆ ಹಿರಿಯ ಅಧಿಕಾರಿ ಹೇಳಿದ್ದ ಬುದ್ಧಿ ಮಾತು ಕೇಳಿಸಿಕೊಂಡಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಸಾರ್ವಜನಿಕರಿಂದ ದೂರು ಬರುತ್ತಿದ್ದ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿಯವರು ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್‌ರವರಿಗೆ ಮೂರ್‍ನಾಕು ಬಾರಿ ಬುದ್ಧಿ ಮಾತು ಹೇಳಿದ್ದರು. ಏಳು ತಿಂಗಳ ಹಿಂದೆಯಷ್ಟೇ ಪುತ್ತೂರಿಗೆ ಬಂದು ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರದೀಪ್‌ರವರು ಲಂಚಕ್ಕೆ ಪೀಡಿಸುತ್ತಾರೆ, ಹಣ ನೀಡದೇ ಇದ್ದರೆ ಸಾರ್ವಜನಿಕರನ್ನು ಸತಾಯಿಸುತ್ತಾರೆ ಎಂದು ವ್ಯಾಪಕ ದೂರು ಕೇಳಿ ಬರುತ್ತಿತ್ತು. ಈ ವಿಚಾರ ಕೃಷ್ಣಮೂರ್ತಿಯವರ ಗಮನಕ್ಕೂ ಬಂದಿತ್ತು. ಈ ಹಿನ್ನೆಲೆಯಲ್ಲಿ ತನ್ನ ಛೇಂಬರ್‌ಗೆ ಕರೆಸಿಕೊಂಡಿದ್ದ ಎ.ಸಿ.ಯವರು ತಹಶೀಲ್ದಾರ್‌ಗೆ ಬುದ್ಧಿ ಮಾತು ಹೇಳಿದ್ದರು. ಸರಿಯಾಗಿ ಕಾರ್ಯ ನಿರ್ವಹಿಸಿ ಎಂದು ಹೇಳಿದ್ದರು. ಅಲ್ಲದೆ ಸ್ವಲ್ಪ ಖಡಕ್ ಆಗಿ ವಾರ್ನಿಂಗ್ ನೀಡಿದ್ದರು. ಅಧಿಕೃತ ದೂರು ಬಂದರೆ ಸುಮ್ಮನಿರಲ್ಲ ಎಂದೂ ಎಚ್ಚರಿಸಿದ್ದರು. ತಹಶೀಲ್ದಾರ್‌ರವರೂ ಸಹಾಯಕ ಆಯುಕ್ತರ ಮಾತಿಗೆ ತಲೆಯಾಡಿಸಿದ್ದರು. ಅದಾದ ಕೆಲವೇ ದಿನಗಳಲ್ಲಿ ಲಂಚ ಪಡೆದು ತಹಶೀಲ್ದಾರ್ ಜೈಲು ಪಾಲಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.