ಪುತ್ತೂರು: ಈ ಹಿಂದೆ ಪುತ್ತೂರಿನಲ್ಲಿ ತಹಶೀಲ್ದಾರ್ ಆಗಿದ್ದು ಪ್ರಸ್ತುತ ದ.ಕ. ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಶಿಷ್ಟಾಚಾರ ತಹಶೀಲ್ದಾರ್ ಆಗಿರುವ ಅನಂತ ಶಂಕರ್ರವರನ್ನು ಪುತ್ತೂರಿನ ಪ್ರಭಾರ ತಹಶೀಲ್ದಾರ್ ಆಗಿ ಕರ್ತವ್ಯಕ್ಕೆ ನಿಯೋಜಿಸಿ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ. ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿಯವರ ಉಲ್ಲೇಖಿತ ಪತ್ರದ ಪ್ರಕಾರ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.
‘ಪುತ್ತೂರು ಸಹಾಯಕ ಆಯುಕ್ತರ ಉಲ್ಲೇಖಿತ ಪತ್ರದಲ್ಲಿ ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್ರವರನ್ನು ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ಉಪಅಧೀಕ್ಷಕ್ಷರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತಾರೆ, ಆದ್ದರಿಂದ ಡಾ. ಪ್ರದೀಪ್ ಕುಮಾರ್ರವರ ಮೇಲೆ ನಿಯಮಾನುಸಾರ ಕ್ರಮಕ್ಕೆ ವರದಿ ಸಲ್ಲಿಸಿರುತ್ತಾರೆ, ಅದರಂತೆ ತಹಶೀಲ್ದಾರ್ ಹುದ್ದೆ ತೆರವಾಗಿರುತ್ತದೆ. ಆದ್ದರಿಂದ ಆಡಳಿತ ದೃಷ್ಠಿಯಿಂದ ಪುತ್ತೂರು ತಹಶೀಲ್ದಾರ್ ಪ್ರಭಾರ ಹುದ್ದೆಯನ್ನು ತಕ್ಷಣದಿಂದ ಜಾರಿಗೆ ಬರುವವರೆಗೆ ಮತ್ತು ಮುಂದಿನ ಆದೇಶದವರೆಗೆ ಅನಂತ ಶಂಕರ್ರವರಿಗೆ ವಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿಯವರು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.