ಪಡಿತರ ಚೀಟಿದಾರರ ಇ-ಕೆವೈಸಿ(ಆಧಾರ್ ದೃಢೀಕರಣ) ತಾತ್ಕಾಲಿಕ ಸ್ಥಗಿತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪಡಿತರ ಚೀಟಿದಾರರ ಪಡಿತರ ಸಾಮಾಗ್ರಿಗಳನ್ನು ಪಡೆದುಕೊಳ್ಳಲು ಕಡ್ಡಾಯಗೊಳಿಸಿದ್ದ ಕುಟುಂಬದ ಸದಸ್ಯರ ಆಧಾರ್ ದೃಢೀಕರಣ (ಇ-ಕೆವೈಸಿ) ಮಾಡುವುದನ್ನು ಜುಲೈ ೧೫ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಇಲಾಖೆ ಮಾಹಿತಿ ನೀಡಿದೆ. ಇದರಿಂದಾಗಿ ನಾಗರಿಕರು ಕೊಂಚ ನಿಟ್ಟುಸಿರುವ ಬಿಡುವಂತಾಗಿದೆ.

ಎಪಿಎಲ್, ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರ ಕುಟುಂಬ ಸದಸ್ಯರ ಆಧಾರ್ ದೃಢೀಕರಣವನ್ನು ನ್ಯಾಯಬೆಲೆ ಅಂಗಡಿ ಹಂತದಲ್ಲಿ ಆನ್‌ಲೈನ್ ಮೂಲಕ ಮಾಡಿಕೊಳ್ಳುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸೂಚನೆ ನೀಡಿತ್ತು. ಜುಲೈ 31ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳದ ಸದಸ್ಯರಿಗೆ ಪಡಿತರ ವಿತರಣೆ ನಿಲ್ಲಿಸುವುದಾಗಿ ಆದೇಶಿಸಲಾಗಿತ್ತು. ಇದರಿಂದಾಗಿ ಪಡಿತರ ಸಾಮಾಗ್ರಿ ಜೊತೆಗೆ ಆಧಾರ್

ದೃಢೀಕರಣಕ್ಕಾಗಿ ಜನರು ನ್ಯಾಯಬೆಲೆ ಅಂಗಡಿಯಲ್ಲಿ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಇ-ಕೆವೈಸಿ ನೋಂದಣಿಯನ್ನು ಜುಲೈ 15ರವರೆಗೆ ನ್ಯಾಯಬೆಲೆ ಅಂಗಡಿ ಹಂತದಲ್ಲಿ ಸಂಗ್ರಹಿಸುವುದನ್ನು ನಿಲ್ಲಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ಸರ್ವರ್ ಸಮಸ್ಯೆ ಕಾರಣ: ಗ್ರಾಮಾಂತರ ಪ್ರದೇಶಗಳಲ್ಲಿ ಸಹಕಾರಿ ಸಂಘದ ನ್ಯಾಯಬೆಲೆ ಅಂಗಡಿಗಳ ಮೂಲಕ ಇ-ಕೆವೈಸಿ ಮತ್ತು ಪಡಿತರ ವಿತರಣೆಯನ್ನು ಒಂದೇ ಸಮಯದಲ್ಲಿ ಮಾಡುತ್ತಿದ್ದ ಕಾರಣ ತಾಂತ್ರಿಕ ದೋಷ (ಸರ್ವರ್‌ಡೌನ್) ಕಂಡು ಬಂದಿತ್ತು. ಇದರಿಂದ ಪಡಿತರ ಚೀಟಿದಾರರು ಪಡಿತರಕ್ಕಾಗಿ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ತಾಂತ್ರಿಕ ದೋಷದ ಸಮಸ್ಯೆ ಸರಿಪಡಿಸುವಂತೆ ರಾಜ್ಯ ಪಡಿತರ ವಿತರಕರ ಸಂಘದ ಸದಸ್ಯರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತರಲ್ಲಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇ-ಕೆವೈಸಿ ನೋಂದಣಿ ಮತ್ತು ಪಡಿತರ ವಿತರಣೆ ಅವಧಿಯಲ್ಲಿ ಬದಲಾವಣೆ ಮಾಡಿ ಆದೇಶಿಸಲಾಗಿದೆ.

ಇ-ಕೆವೈಸಿ ಉದ್ದೇಶ: ಹಲವು ವರ್ಷಗಳ ಹಿಂದೆಯೇ ಪಡಿತರ ಸದಸ್ಯರ ಆಧಾರ್ ನಂಬರ್ ಲಿಂಕ್ ಒಂದು ಬಾರಿ ಮಾಡಲಾಗಿತ್ತು. ಇದರ ಆಧಾರದಲ್ಲಿಯೇ ಆಹಾರ ಧಾನ್ಯ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಚೀಟಿಯಲ್ಲಿರುವ ಕುಟುಂಬದ ಸದಸ್ಯರ ಪೈಕಿ ಮೃತರ, ಪರಸ್ಥಳದಲ್ಲಿ ನೆಲೆಸಿದವರ, ಮದುವೆಯಾಗಿ ಗಂಡನ ಮನೆಗೆ ತೆರಳಿದವರ ಹೀಗೆ ನಾನಾ ರೀತಿಯಲ್ಲಿ ಊರಲ್ಲಿ ಇಲ್ಲದವರ ಹೆಸರುಗಳನ್ನು ಕಾರ್ಡಿನಿಂದ ತೆಗೆದು ಹಾಕಿಲ್ಲ. ಈ ಕಾರಣಕ್ಕೆ ಅವರ ಹೆಸರಿನಲ್ಲಿಯೂ ಆಹಾರ ಸರಬರಾಜಾಗುತ್ತಿದ್ದು, ಸರಕಾರಕ್ಕೆ ಹೊರೆಯಾಗುತ್ತಿದೆ. ಹೀಗಾಗಿ ಕಾರ್ಡ್‌ನ ಪ್ರತಿ ಸದಸ್ಯರ ಬೆರಳಚ್ಚು (ಬಯೋಮೆಟ್ರಿಕ್)ಪಡೆಯಲಾಗುತ್ತಿದೆ. ಕಾರ್ಡ್‌ನಲ್ಲಿ ಹೆಸರಿರುವ ಎಷ್ಟು ಸದಸ್ಯರು ಬೆರಳಚ್ಚು ಕೊಡುತ್ತಾರೋ ಅಷ್ಟು ಸದಸ್ಯರಿಗೆ ಮಾತ್ರ ರೇಷನ್ ಕೊಡಲು ನಿರ್ಧರಿಸಲಾಗಿತ್ತು. ಇ-ಕೆವೈಸಿ ಅಪ್‌ಡೇಟ್ ವ್ಯವಸ್ಥೆಯು ಒಂದು ಬಾರಿ ಮಾತ್ರ ನಡೆಯಲಿದ್ದು, ಎಲ್ಲ ಸದಸ್ಯರು ಬೆರಳಚ್ಚು ನೀಡಿದ ಬಳಿಕ ಪ್ರತಿ ತಿಂಗಳು ಕುಟುಂಬದ ಯಾರಾದರೂ ಒಬ್ಬ ಸದಸ್ಯ ಬಂದು ಬೆರಳಚ್ಚು ನೀಡಿ ಪಡಿತರ ಪಡೆಯಬಹುದಾಗಿದೆ.

ಪಡಿತರ ಸಾಮಾಗ್ರಿ ಎಂದಿನಂತೆ
ಪಡಿತರ ಸಾಮಾಗ್ರಿಗಳನ್ನು ವಿತರಿಸುವ ಸಂದರ್ಭದಲ್ಲಿ ಕುಟುಂಬ ಸದಸ್ಯರ ಇ-ಕೆವೈಸಿ ಮಾಡುವುದನ್ನು ಜು.15ರ ತನಕ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು. ಪಡಿತರ ಸಾಮಾಗ್ರಿಗಳನ್ನು ಎಂದಿನಂತೆ ವಿತರಿಸುವಂತೆ ತಾಲೂಕಿನಲ್ಲಿರುವ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಸುತ್ತೋಲೆಯನ್ನು ಕಳುಹಿಸಲಾಗಿದೆ ಎಂದು ತಾಲೂಕು ಕಛೇರಿಯ ಆಹಾರ ಇಲಾಖೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.