ಕಾವು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ವತಿಯಿಂದ ಮಂಗಳೂರು ನೆಹರು ಯುವ ಕೇಂದ್ರ, ಅರಣ್ಯ ಇಲಾಖೆ ಪುತ್ತೂರು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಯುವ ಆದರ್ಶ ಗ್ರಾಮ ವಿಕಾಸ ಯೋಜನೆ ಮತ್ತು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತುಡರ್ ನಡಿಗೆ-ಪರಿಸರದ ಕಡೆಗೆ ಎಂಬ ಧ್ಯೇಯವಾಕ್ಯದೊಂದಿಗೆ ನೆಲ-ಜಲ ಸಮೃದ್ಧಿಗಾಗಿ ಮನೆ ಮನೆಗೆ ತೆರಳಿ ಗಿಡನಾಟಿ ಮಾಡುವ ತುಡರ್ ವೃಕ್ಷಾಭಿಯಾನವು ಜೂ.೨೩ರಂದು ಕಾವು ಬದಿಯಡ್ಕ ಕುಶಾಲಪ್ಪ ಗೌಡರವರ ಮನೆಯಲ್ಲಿ ಉದ್ಘಾಟನೆಗೊಳ್ಳಲಿದೆ.
10 ಸಾವಿರ ಗಿಡ ನೆಡುವ ಗುರಿ:
ಮಕ್ಕಳ ತಜ್ಞ, ಪರಿಸರ ಪ್ರೇಮಿ ಡಾ. ಶ್ರೀಕಾಂತ್ ರಾವ್ರವರ ಅಭಿಲಾಷೆಯಂತೆ ವೃಕ್ಷಾಭಿಯಾನದಲ್ಲಿ ತುಡರ್ ಯುವಕ ಮಂಡಲದ ಸದಸ್ಯರು ಊರವರ ಸಹಕಾರದೊಂದಿಗೆ ಗ್ರಾಮವ್ಯಾಪ್ತಿಯ ಮನೆ ಮನೆಗೆ ತೆರಳಿ ಸುಮಾರು ೧೦ ಸಾವಿರ ಗಿಡನಾಟಿ ಮಾಡುವ ಗುರಿಯನ್ನು ಇಟ್ಟುಕೊಂಡು ಆಗಸ್ಟ್ ತಿಂಗಳವರೆಗೆ ಅಭಿಯಾನ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ. ಡಾ. ಶ್ರೀಕಾಂತ್ ರಾವ್ರವರು ಗಿಡ ನೆಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಅಭಿಯಾನದ ಪ್ರಥಮ ಹಂತವಾಗಿ ಜೂ.23ರಂದು ಮಾಡ್ನೂರು ಗ್ರಾಮದ ಮಳಿ, ಬದಿಯಡ್ಕ, ಅಮ್ಚಿನಡ್ಕ, ಬಿಂತೋಡಿ ಭಾಗದ ಮನೆಗಳಲ್ಲಿ ಗಿಡನಾಟಿ ನಡೆಯಲಿದೆ ಎಂದು ಯುವಕ ಮಂಡಲದ ಅಧ್ಯಕ್ಷ ಸುನೀಲ್ ನಿಧಿಮುಂಡರವರು ತಿಳಿಸಿದ್ದಾರೆ.