HomePage_Banner
HomePage_Banner
HomePage_Banner
HomePage_Banner

ಎಸ್‌ಎಸ್‌ಎಲ್‌ಸಿ ತುಳು ಪಠ್ಯದಲ್ಲಿ ಸಾಧಕರಿಗೆ ಸನ್ಮಾನ-‘ಚಾತುರ್ಪುದ ಮಾನಾದಿಗೆ’

ಪುತ್ತೂರು: ಜಗತ್ತಿನಲ್ಲಿ ಸುಮಾರು ಒಂದೂವರೆ ಕೋಟಿ ಜನ ತುಳು ಭಾಷೆ ಮಾತನಾಡುತ್ತಾರೆ. ತುಳು ಸಂಸ್ಕೃತಿಯನ್ನು ಮೆರೆಯುವ ನಿಟ್ಟಿನಲ್ಲಿ ತುಳು ಭಾಷೆಗೆ ಅಕಾಡೆಮಿ ಸ್ಥಾಪಿಸುವ ಮೂಲಕ ಮಾನ್ಯತೆ ನೀಡಿದೆ. ಆದರೂ ತುಳು ಭಾಷೆಗೆ ಎಲ್ಲಾ ಅರ್ಹತೆ ಇದ್ದರೂ ಇನ್ನೂ 8ನೇ ಪರಿಚ್ಛೇದದಲ್ಲಿ ಸೇರ್ಪಡೆಯಾಗಿಲ್ಲ. ಈ ಕುರಿತು ಸರಕಾರಕ್ಕೆ ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಶೋಭಾ ಕರಂದ್ಲಾಜೆ ಮೂಲಕ ಒತ್ತಡ ಹೇರಲಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಹೇಳಿದರು.

ಅಖಿಲ ಭಾರತ ತುಳು ಒಕ್ಕೂಟ, ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆ ಹಾಗೂ ಪುತ್ತೂರು ತುಳುಕೂಟದ ಆಶ್ರಯದಲ್ಲಿ ಜೂ.22ರಂದು ಕೊಂಬೆಟ್ಟು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆದ ಎಸ್‌ಎಸ್‌ಎಲ್‌ಸಿಯಲ್ಲಿ ತುಳುಭಾಷೆಯಲ್ಲಿ ನೂರಕ್ಕೆ ನೂರು ಸಾಧನೆ ಮಾಡಿದವರಿಗೆ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತುಳು ಭಾಷೆ ಪಠ್ಯ ಭಾಷೆಯಾಗಿ ಈಗಾಗಲೇ 6 ರಿಂದ 10 ನೇ ತರಗತಿ ಹಾಗೂ ಪದವಿಯಲ್ಲೂ ಸೇರ್ಪಡೆಗೊಳಿಸಲಾಗಿದೆ. ಪದವಿಪೂರ್ವ ಕಾಲೇಜುಗಳಲ್ಲೂ ಸೇರ್ಪಡೆಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ತುಳು ಒಕ್ಕೂಟ ಹಾಗೂ ಅಕಾಡೆಮಿ ಮೂಲಕ ಈಗಾಗಲೇ ತುಳು ಭಾಷೆಯನ್ನು ಇಡೀ ಜಗತ್ತಿಗೆ ಪಸರಿಸುವ ಕೆಲಸ ಮಾಡಲಾಗಿದೆ. ಈ ಮೂಲಕ ತಾಯಿ ಭಾಷೆಯಾದ ತುಳುವಿಗೆ ಕಿರೀಟ ನೀಡುವ ಕೆಲಸ ಆಗಿದೆ. ಅಲ್ಲದೆ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಜತೆ ಸ್ಕಾಲರ್‌ಶಿಪ್ ನೀಡುವ ಕೆಲವೂ ಒಕ್ಕೂಟದಿಂದ ಆಗಿದೆ ಎಂದು ಅವರು ಹೇಳಿದರು.

ಅಭಿನಂದನಾ ಭಾಷಣ ಮಾಡಿದ ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ತುಳು ಭಾಷೆಯ ಕುರಿತು ಎಲ್ಲೆಡೆ ಜಾಗೃತಿಯ ಕೆಲಸಗಳು ನಡೆಯುತ್ತಿದೆ. ತುಳುನಾಡಿನಲ್ಲಿ ತುಳು ಭಾಷೆಗೆ ಮನ್ನಣೆ ಸಿಗುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳ ಜತೆಗೆ ಆಂದೋಲನದ ಅಗತ್ಯತೆ ಇದೆ. ತುಳು ಭಾಷೆ ಕಲಿಕೆ ಕೇವಲ ಪುಸ್ತಕದ ಬದನೆಕಾಯಿ ಆಗಬಾರದು. ತುಳು ಭಾಷೆಯನ್ನು ಉಳಿಸುವಲ್ಲಿಯ ಪ್ರಯತ್ನಕ್ಕೆ ಪ್ರಸ್ತುತ ಉತ್ತರ ಸಿಗುವ ಕಾಲ ಇದೀಗ ಕೂಡಿ ಬಂದಿದೆ. ಮುಂದಿನ ವರ್ಷ ತುಳು ಭಾಷೆಯಲ್ಲಿ ನೂರಕ್ಕೆ ನೂರು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಒಂದು ಸಾವಿರ ರೂಪಾಯಿಯನ್ನು ನೀಡುವುದಾಗಿ ಘೊಷಣೆ ಮಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ ವಹಿಸಿದ್ದರು. ದೆಹಲಿ ದಕ್ಷಿಣ ಭಾರತೀಯ ಸಾಂಸ್ಕೃತಿಕ ಸಂಘದ ಸಂಚಾಲಕ ನರೇಂದ್ರ ರೈ ಎಂ.ಬಿ.,ನಗರಸಭಾ ಸದಸ್ಯ ಜಗನ್ನಿವಾಸ ರಾವ್, ವಿವಿಧ ತುಳು ಒಕ್ಕೂಟದ ಅಧ್ಯಕ್ಷರಾದ ಶೀನಪ್ಪ ಆಳ್ವ ಹಾಸನ, ವಿಜಯ ಕುಮಾಟ್ ಕುಲಶೇಖರ, ಮಹಿಳಾ ಒಕ್ಕೂಟದ ಹರಿಣಿ, ಚಂದ್ರಶೇಖರ ಸುವರ್ಣ, ಜಯಂತಿ ಬಂಗೇರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನಿರಂಜನ ರೈ ಮಠಂತಬೆಟ್ಟು, ಶ್ರೀ ರಾಮಕೃಷ್ಣ ಪ್ರೌಢಶಾಲಾ ಮುಖ್ಯ ಶಿಕ್ಷಕಿ ರೂಪಕಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ, ವಿದ್ಯಾರ್ಥಿ ವೇತನ ವಿತರಣೆ

ಬರೋಡ ತುಳು ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಬಿ. ಅವರನ್ನು ಒಕ್ಕೂಟದ ವತಿಯಿಂದ ಶಾಲು ಹೊದಿಸಿ, ಸನ್ಮಾನಪತ್ರ ನೀಡಿ ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ತುಳು ಭಾಷೆಯಲ್ಲಿ ನೂರಕ್ಕೆ ನೂರು ಸಾಧನೆ ಮಾಡಿದ ೬೫ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ವಿದ್ಯಾರ್ಥಿ ವೇತನ ನೀಡಿ ಗೌರಸಿಲಾಯಿತು.

ಅಖಿಲ ಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ, ತುಳು ಒಕ್ಕೂಟದ ಕುಂಬ್ರ ದುರ್ಗಾಪ್ರಸಾದ್ ರೈ ಸ್ವಾಗತಿಸಿದರು. ಕಾಂತಿ ಶೆಟ್ಟಿ ಬೆಂಗಳೂರು ಸನ್ಮಾನ ಪತ್ರ ವಾಚಿಸಿದರು, ಪುತ್ತೂರು ತುಳು ಕೂಟದ ಅಧ್ಯಕ್ಷ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ವಂದಿಸಿದರು. ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಈ. ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.