ನೂತನ ಸಂಸದರಿಗೆ, ಬಿಜೆಪಿ ಗೆಲುವಿಗೆ ಕಾರಣಕರ್ತರಾದ ಮತದಾರರಿಗೆ, ಕಾರ್ಯಕರ್ತರಿಗೆ ಅಭಿನಂದನಾ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಹೊಸ ಮತದಾರರನ್ನು ಸೇರ್ಪಡೆಗೊಳಿಸಬೇಕು: ನಾವೆಷ್ಟು ಬೆಳೆದಿದ್ದೇವೆಯೋ ಅದೇ ರೀತಿಯಲ್ಲಿ ವಿರೋಧಿ ಮತಗಳೂ ಬೆಳೆಯುತ್ತವೆ. ಪ್ರತಿ ವರ್ಷ ವಿರೋಧಿ ಮತಗಳು ಹೆಚ್ಚಾಗುವ ಪರಿಸ್ಥಿತಿ ಇದೆ, ಬೇರೆ ಬೇರೆ ರಾಜ್ಯದಿಂದ ಅವರನ್ನು ಕರೆದು ಇಲ್ಲಿ ನೆಲೆಗೊಳಿಸಿ ಮತ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಕಳೆದ ವರ್ಷ ರಾಜ್ಯದಲ್ಲಿ ಬಿಜೆಪಿ 80 ಲಕ್ಷ ಸದಸ್ಯರನ್ನು ಮಾಡಿದ್ದೇವೆ. ಈ ಬಾರಿ 50 ಲಕ್ಷ ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಂದು ಬೂತಿನಲ್ಲಿಯೂ ಕನಿಷ್ಠ ಪಕ್ಷ 200 ಸದಸ್ಯರನ್ನು ಮಾಡಬೇಕು. ಹೊಸ ಮತದಾರರನ್ನು ಹುಡುಕಿ ಅವರನ್ನು ಬಿಜೆಪಿಗೆ ಕರೆ ತರುವ ಪ್ರಯತ್ನ ಮಾಡಬೇಕೆಂದು ಶೋಭಾ ಕರಂದ್ಲಾಜೆ ಹೇಳಿದರು.

ಪುತ್ತೂರು: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿಗೆ ಕಾರಣಕರ್ತರಾದ ಮತದಾರರಿಗೆ, ಕಾರ್ಯಕರ್ತರಿಗೆ ಮತ್ತು ಜನಪ್ರತಿನಿಧಿಗಳಾಗಿ ಚುನಾಯಿತರಾಗಿರುವ ಕೇಂದ್ರ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಡಿ.ವಿ.ಸದಾನಂದ ಗೌಡ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ಬಿಜೆಪಿ ಸಂಸದೀಯ ಸಮಿತಿ ಮುಖ್ಯ ಸಚೇತಕಿ ಶೋಭಾ ಕರಂದ್ಲಾಜೆ ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಬಿಜೆಪಿ ಸಂಸದೀಯ ಸಮಿತಿ ಸಹ ಸಚೇತಕ ನಳಿನ್ ಕುಮಾರ್ ಕಟೀಲ್‌ರವರಿಗೆ ಅಭಿನಂದನಾ ಸಭೆ ಜೂ. 23ರಂದು ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಸನ್ಮಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರವರು ಕಾರ್ಯಕ್ರಮಕ್ಕೆ ಗೈರಾಗಿದ್ದರು. ಅನ್ಯ ಕಾರ್ಯಕ್ರಮದ ನಿಮಿತ್ತ ಡಿ.ವಿ. ಸದಾನಂದ ಗೌಡರವರಿಗೆ ನಮ್ಮ ಈ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಪುತ್ತೂರು ಶಾಸಕ ಸಂಜೀವ ಮಠಂದೂರು ಸಭೆಯಲ್ಲಿ ತಿಳಿಸಿದರು.

ದೇಶದ ಆರ್ಥಿಕ ಪರಿಸ್ಥಿತಿ, ರೈತರ ಆದಾಯ ದುಪ್ಪಟ್ಟಿನ ಗುರಿ-ಶೋಭಾ ಕರಂದ್ಲಾಜೆ: ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ಮಾತನಾಡಿ ದೇಶದ ರಕ್ಷಣೆ, ಅಭಿವೃದ್ಧಿ, ಭ್ರಷ್ಟಾಚಾರ ರಹಿತವಾದ ಆಡಳಿತವನ್ನು ಕೊಡುವಂತಹ ಸಂಕಲ್ಪವನ್ನು ನರೇಂದ್ರ ಮೋದಿ ಸರಕಾರ ಮಾಡಿದೆ. 2ನೇ ಇನ್ನಿಂಗ್ಸ್ ಈಗಷ್ಟೇ ಆರಂಭವಾಗಿದೆ. ಪ್ರಪಂಚದಲ್ಲೇ ಈ ದೇಶದ ಆರ್ಥಿಕ ಪರಿಸ್ಥಿತಿಯನ್ನು ಉನ್ನತಗೊಳಿಸಬೇಕು. ರೈತರ ಆದಾಯವನ್ನು ದುಪ್ಪಟ್ಟು ಮಾಡಬೇಕು ಎಂಬ ಗುರಿಯನ್ನು ಇಟ್ಟುಕೊಂಡು ಆಡಳಿತ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೊಡ ಮಾಡಲ್ಪಡುವ ಬಹಳಷ್ಟು ಯೋಜನೆಗಳನ್ನು ನಾವು ವ್ಯಾಪಕವಾಗಿ ಪ್ರಚಾರ ಮಾಡಬೇಕಾಗಿದೆ ಎಂದರು. ಮುಂದಿನ 10 ತಿಂಗಳೊಳಗೆ ಗ್ರಾ.ಪಂ ಚುನಾವಣೆ, 20 ತಿಂಗಳಲ್ಲಿ ಜಿ.ಪಂ ಚುನಾವಣೆ ಬರುವಂತಹ ಸಂದರ್ಭದಲ್ಲಿ ನಾವು ಮತ್ತೊಮ್ಮೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದ ಅವರು ಭ್ರಷ್ಟಾಚಾರ ನಿಲ್ಲಿಸುವ ಪ್ರಯತ್ನ, ದೇಶದ ಕೃಷಿಕರಿಗೆ ಗೌರವ, ಬಿಟ್ಟು ಹೊದ ಅಭಿವೃದ್ಧಿ ಕೆಲಸಕ್ಕೆ ಚಾಲನೆ, ವಿದೇಶದಲ್ಲೂ ದೇಶಕ್ಕೆ ಗೌರವ ಸಿಗುವಂತೆ ಮಾಡುವುದನ್ನು ಕಳೆದ 5 ವರ್ಷದಲ್ಲಿ ಸಾಧನೆ ಮಾಡಿದ್ದೇವೆ ಎಂದರು. ಯುರೋಪ್, ಜರ್ಮನಿ, ರಷ್ಯಾ, ಅಮೇರಿಕಾದ ಬಲಿಷ್ಠ ರಾಜಕಾರಣದ ನಡುವೆ ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ಪ್ರಪಂಚದ ಅತ್ಯಂತ ಪ್ರಭಾವಶಾಲಿ ರಾಜಕಾರಣ ಎಂದರೆ ಭಾರತ ಎಂದು ಸಮೀಕ್ಷೆಯಿಂದ ಸಾಬೀತಾಗಿದೆ. ಇದು ದೇಶಕ್ಕೆ ಸಂದ ಗೌರವ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಅಡಿಕೆ ನಿಷೇಧಿಸದಂತೆ ಮರು ಸಂಶೋಧನೆಗೆ ಮನವಿ: ಅಡಿಕೆಗೆ ಸಂಬಂಧಿಸಿ ಅವೈಜ್ಞಾನಿಕ ಪ್ರಯೋಗ ಮಾಡಿ ಅಡಿಕೆಯಲ್ಲಿ ಹಾನಿಕಾರಕ ವಸ್ತು ಇದೆ ಎಂದು ವರದಿ ಕೊಟ್ಟಿದ್ದು ಆಗಿನ ಯುಪಿಎ ಸರಕಾರ. ಇದರಿಂದ ಸುಪ್ರಿಂಕೋರ್ಟ್ ವರದಿಯನ್ನು ಎತ್ತಿ ಹಿಡಿದಿದೆ. ಆದರೆ ಈ ಕುರಿತು ಕಳೆದ ಬಾರಿಯ ಲೋಕಸಭೆಯಲ್ಲಿ ನಮ್ಮ ಭಾಗದ ಸಂಸದರು ಪ್ರಧಾನಿಯವರನ್ನು ಭೇಟಿ ಮಾಡಿ ಅಡಿಕೆಯ ಪಾರಂಪರಿಕ ಮತ್ತು ವಿಷಕಾರಿ ಪದಾರ್ಥ ಇರುವುದು ಸುಳ್ಳು ಎಂದು ತಿಳಿಸಿ, ವರದಿಯನ್ನು ಮರು ಸಂಶೋಧನೆ ಮಾಡಲು ಮನವಿ ಮಾಡಿದ್ದೇವೆ. ಇದಕ್ಕೆ ಸೂಕ್ತ ಪ್ರೋತ್ಸಾಹ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು ಸುಪ್ರಿಂಕೋರ್ಟ್‌ಗೆ ಒಳ್ಳೆಯ ವಕೀಲರ ಮೂಲಕ ಇನ್ನೊಮ್ಮೆ ಪ್ರಸ್ತಾಪ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದ ಶೋಭಾ ಕರಂದ್ಲಾಜೆಯವರು ಅಡಿಕೆಗೆ ಕೆಮಿಕಲ್ ಹಾಕಿ ಅದನ್ನು ಗುಟ್ಕಾ ಮಾಡಿದಾಗ ಅದು ವಿಷ. ಒರಿಜಿನಲ್ ಅಡಿಕೆ ವಿಷವಲ್ಲ ಎಂದು ಹೇಳಿದರು.

ಸಾರ್ಕ್ ಒಪ್ಪಂದ ದುರುಪಯೋಗಕ್ಕೆ ತಡೆ: ಅಡಿಕೆ ಬೇರೆ ಬೇರೆ ದೇಶದಿಂದ ನಮ್ಮ ದೇಶಕ್ಕೆ ಬರುವುದು ಕೂಡಾ ಯುಪಿಎ ಸರಕಾರದ ಪ್ರಸಾದ. ಸಾರ್ಕ್ ಆಹಾರ ಒಪ್ಪಂದ ಮಾಡಿಕೊಂಡದ್ದು ಯುಪಿಎ ಸರಕಾರ. ಆ ಒಪ್ಪಂದದ ಪ್ರಕಾರ ಅಡಿಕೆಯೂ ಆಮದು ಆಗುತ್ತಿದೆ. ಆದರೆ ಈ ಕುರಿತು ಕಳೆದ ಬಾರಿ ನಾವು ಸಚಿವೆ ನಿರ್ಮಲಾ ಸೀತಾರಾಮ್‌ರವರಲ್ಲಿ ಮನವಿ ಮಾಡಿದಾಗ ಸಾರ್ಕ್ ಒಪ್ಪಂದದ ದುರುಪಯೋಗ ತಡೆದು ನೇಪಾಳದಿಂದ ಆಮದಾಗುತ್ತಿದ್ದ ಅಡಿಕೆಯನ್ನು ನಿಲ್ಲಿಸಿದ್ದೇವೆ. ಜೊತೆಗೆ ಸಾರ್ಕ್ ಒಪ್ಪಂದದ ಪ್ರಕಾರ ಇತರ ಕಡೆಯಿಂದ ಬರುವ ಅಡಿಕೆಯನ್ನು ಪೂರ್ಣ ಮಟ್ಟದಲ್ಲಿ ನಿಷೇಧ ಮಾಡಲು ಆಗದಂತಹ ಸಂದರ್ಭದಲ್ಲಿ ಇಂಪೋರ್ಟ್ ಡ್ಯೂಟಿ ಜಾಸ್ತಿ ಮಾಡಿಸಿದ್ದಲ್ಲದೆ ಅಡಿಕೆಗೆ ಬೆಸ್ಟ್ ಪ್ರೈಸ್ ಉಳಿಸಿಕೊಂಡಿದ್ದೇವೆ ಎಂದರು.

ಎಪಿಎಂಸಿ ಅಂಡರ್‌ಪಾಸ್ ಶೀಘ್ರ: ರೈಲ್ವೆಗೆ ಸಂಬಂಧಿಸಿ ಪುತ್ತೂರು ಎಪಿಎಂಸಿ ಅಂಡರ್ ಪಾಸ್ ಆದಷ್ಟು ಬೇಗೆ ಆಗಬೇಕೆಂದು ನೀಡಿದ ಮನವಿಗೆ ಸ್ಪಂದಿಸಿದ ಶೋಭಾ ಕರಂದ್ಲಾಜೆಯವರು ತಕ್ಷಣ ಈ ಕುರಿತು ಪ್ರಯತ್ನ ಮಾಡಲಿದ್ದೇನೆ. ಅಂಡರ್‌ಪಾಸ್ ಯೋಜನೆಯಲ್ಲಿ ಹೆಚ್ಚಿನ ಕಡೆ ನೀರು ನಿಂತು ಸಮಸ್ಯೆ ಉಂಟಾಗಿರುವುದು ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ಸರಿಯಾಗಿ ಸರ್ವೆ ಕಾರ್ಯ ಯೋಜನೆ ಸಿದ್ಧಪಡಿಸುವಂತೆ ತಿಳಿಸಬೇಕೆಂದು ಹೇಳಿದರು. ಕಸ್ತೂರಿ ರಂಗನ್ ವರದಿಯಲ್ಲೂ ರೈತರಿಗೆ ನ್ಯಾಯ ದೊರಕುವ ವ್ಯವಸ್ಥೆ ಪ್ರಧಾನಿ ಮಾಡಿದ್ದಾರೆ ಎಂದು ಅವರು ಹೇಳಿದರು.

ಕೇಂದ್ರದ ಯೋಜನೆ ಅನುಷ್ಠಾನ ಮಾಡುವ ತಾಕತ್ತು ಕಾರ್ಯಕರ್ತರಿಗಿದೆ-ಕೋಟ ಶ್ರೀನಿವಾಸ ಪೂಜಾರಿ: ರಾಜ್ಯ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿಯವರು ಮಾತನಾಡಿ ಕೇಂದ್ರ ಸರಕಾರದ ಯೋಜನೆಗಳನ್ನು ರಾಜ್ಯ ಸರಕಾರ ಅನುಷ್ಠಾನ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ನಮ್ಮ ತಾ.ಪಂ, ಜಿ.ಪಂ ಜನಪ್ರತಿನಿಧಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಾಗಿದೆ. ಕೇಂದ್ರ ಸರಕಾರದ ಅನುದಾನವನ್ನು ನೇರ ಜನರಿಗೆ ಮುಟ್ಟಿಸುವ ಮತ್ತು ಯೋಜನೆಯನ್ನು ಅನುಷ್ಠಾನಗೊಳಿಸುವ ತಾಕತ್ತು ಎಂಬುದು ಇದ್ದರೆ ಅದು ಜನಪ್ರತಿನಿಧಿಗಳು ಮತ್ತು ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಎಂದರು. ಬಿಜೆಪಿ ಕಾರ್ಯಕರ್ತರು ತಮ್ಮ ತಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ಕೇಂದ್ರ ಸರಕಾರದ ಪ್ರತಿಯೊಂದು ಯೋಜನೆಯನ್ನು ಅನುಷ್ಠಾನ ಮಾಡುವ ಅಗತ್ಯವಿದೆ ಎಂದು ಅವರು ಹೇಳಿದರು.

ನಿಮ್ಮ ಭಾವನೆಗೆ ಧಕ್ಕೆ ಬಾರದ ರೀತಿಯಲ್ಲಿ ಆಡಳಿತ-ನಳಿನ್ ಕುಮಾರ್: ಸಂಸದ ನಳಿನ್ ಕುಮಾರ್ ಕಟೀಲ್‌ರವರು ಮಾತನಾಡಿ ರಾಷ್ಟ್ರ ಪ್ರೇಮದ ರಾಜಕಾರಣ ಬೇಕೆಂದು ಭಾರತಿಯ ಜನಸಂಘಕ್ಕೆ ಮೊಳಕೆ ಹಾಕಿದ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಬಲಿದಾನ ದಿನವಾದ ಇವತ್ತು ಅವರು ಕಂಡಿರುವ ಕನಸನ್ನು ಪ್ರಧಾನಿ ನರೇಂದ್ರ ಮೋದಿಯವರು ನನಸಾಗಿಸಿದ್ದಾರೆ. ಇವತ್ತು ನಮಗೆ ಸಲ್ಲಿಸಿದ ಅಭಿನಂದನೆ ಬಿಜೆಪಿ ವಿಚಾರಧಾರೆಯನ್ನು ಮನೆ ಮನೆಗೆ ತಲುಪಿಸಿದ ಕಾರ್ಯಕರ್ತರಿಗೆ ಸಲ್ಲುತ್ತದೆ ಎಂದರು. ಕಳೆದ 5 ವರ್ಷದಲ್ಲಿ ಮೋದಿಯವರ ಆಡಳಿತ, ಸಿದ್ಧಾಂತವನ್ನು ನೋಡಿ ಒಪ್ಪಿ, ಅಪ್ಪಿ ಮತದಾರ ಮತ ಹಾಕಿದ್ದಾರೆ. ಮೋದಿಯವರಿಂದ ಜಿಲ್ಲೆಗೆ ಮಾಡಿರುವ ಕಾರ್ಯ, ಅನುದಾನ ನೋಡಿ ನನಗೂ ಮತ ನೀಡಿದ್ದೀರಿ. ಇನ್ನೂ 5 ವರ್ಷ ಕಾರ್ಯಕರ್ತರ, ಮತದಾರರ ಭಾವನೆಗೆ ಧಕ್ಕೆ ಬಾರದ ರೀತಿಯಲ್ಲಿ ರಾಜಕಾರಣ ಮಾಡುತ್ತೇನೆ ಎಂದ ಅವರು, ಪುತ್ತೂರಿನಲ್ಲಿ ಹೆಚ್ಚಿನ ವೈದ್ಯರು, ಇಂಜಿನಿಯರ್‌ಗಳು, ವಕೀಲರು ಸೇರಿಕೊಂಡು ನಾನಾ ರೀತಿಯಲ್ಲಿ ಮೋದಿಯವರ ಆಡಳಿತವನ್ನು ಬೆಂಬಲಿಸಿದ್ದಾರೆ. ಇವರೆಲ್ಲರ ಭಾವನೆಗೆ ತಕ್ಕಂತೆ ಆಡಳಿತ ನಡೆಸುತ್ತೇನೆ ಎಂದು ಹೇಳಿದರು.

ಯಡಿಯೂರಪ್ಪ ಮಂತ್ರಿಯಾದಾಗ ರಸ್ತೆಯಲ್ಲೇ ವಿಜಯೋತ್ಸವ-ಸಂಜೀವ ಮಠಂದೂರು: ಬಿಜೆಪಿ ಜಿಲ್ಲಾಧ್ಯಕ್ಷರಾದ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ ಜನಸಂಘದ ಶ್ಯಾಮ್‌ಪ್ರಸಾದ್ ಮುಖರ್ಜಿಯವರ ಬಲಿದಾನ ವ್ಯರ್ಥ ಆಗಬಾರದು ಎಂದು ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪುತ್ತೂರಿನಿಂದ ಮೂವರು ಸಂಸದರನ್ನು ಪಾರ್ಲಿಮೆಂಟ್‌ಗೆ ಕಳುಹಿಸಿಕೊಟ್ಟಿದ್ದೇವೆ. ಇವರ ಸಂಘಟನೆ, ಅಭಿವೃದ್ಧಿ ಸಮಾಜ ಸೇವೆ ಮುಂದೆ ನೂರಾರು ಕಾರ್ಯಕರ್ತರು ಪುತ್ತೂರಿನಿಂದ ದೇಶಕ್ಕೆ ಕೊಡುಗೆಯಾಗಿ ಹೋಗಬೇಕೆಂದು ಉದ್ದೇಶಿಸಿ ಈ ಕಾರ್ಯಕ್ರಮ ಆಯೋಜಿಸಿದ್ದೆವು. ಆದರೆ ಬಹುತೇಕ ಮಂದಿ ಕಾರ್ಯಕರ್ತರಿಗೆ ಕುಣಿದು ಕುಪ್ಪಳಿಸುವ ಜೋಶ್ ಇತ್ತು. ಮಳೆಯ ಅಡ್ಡಿಯಿಂದ ಇವತ್ತು ಅದನ್ನು ಮಾಡಲು ಆಗಲಿಲ್ಲ. ಆದರೆ ಮುಂದೆ ಸಮ್ಮಿಶ್ರ ಸರಕಾರದ ಪತನ ಅತಿ ಶೀಘ್ರದಲ್ಲಿ ಆಗಲಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ತಕ್ಷಣ ರಸ್ತೆಯಲ್ಲೇ ವಿಜಯೋತ್ಸವ ಮಾಡಲಿದ್ದೇವೆ ಎಂದರು. ಮುಂದೆ ಬರುವ ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಅಭೇದ್ಯ ಕೋಟೆ ಎಂದು ತೋರಿಸಿಕೊಡಬೇಕಾಗಿದೆ ಎಂದು ಅವರು ಹೇಳಿದರು.

ರೈತರ ಬೇಡಿಕೆ ಈಡೇರಿಕೆಗೆ ಮನವಿ: ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ಮಾತನಾಡಿ ಬಿಜೆಪಿ ದೇಶದಲ್ಲಿ ಜಯಭೇರಿ ಸಾಧಿಸಿದಂತೆ ಪುತ್ತೂರಿನ ಜನತೆಗೆ ನಮ್ಮ ಭಾಗದ ಮೂರು ಮುತ್ತುಗಳು ದೆಹಲಿಗೆ ಪ್ರವೇಶ ಮಾಡಿರುವುದು ಸಂತೋಷದ ವಿಚಾರ. ಈಗಾಗಲೇ ಈ ಭಾಗದ ರೈತರ ಬೇರೆ ಬೇರೆ ಸಮಸ್ಯೆಗಳಿಗೆ ಸಾಕಷ್ಟು ಹೋರಾಟ ಮಾಡಿರುವ ಸಂಸದರಲ್ಲಿ ಬರ್ಮಾದಿಂದ ಆಮದಾಗುತ್ತಿರುವ ಅಡಿಕೆಯನ್ನು ನಿಲ್ಲಿಸುವಂತೆ ಇನ್ನೊಂದು ಬೇಡಿಕೆ ರೈತರು ಮುಂದಿಟ್ಟಿದ್ದಾರೆ. ಜೊತೆಗೆ ಅಡಿಕೆ ಹಾನಿಕಾರಕ ಅಲ್ಲ ಎಂಬ ಕುರಿತು ಇನ್ನೊಮ್ಮೆ ಸಂಶೋಧನೆ ನಡೆಸುವಂತೆ ಮನವಿ ಮಾಡಿದ್ದಾರೆ ಎಂದು ಹೇಳಿದರು.

ಅಭಿನಂದನೆಗಳ ಜೊತೆ ಮನವಿಗಳು: ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಶೋಭಾ ಕರಂದ್ಲಾಜೆಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರಿಗೆ, ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ, ಮಹಿಳಾ ಮೋರ್ಛಾ, ಅಲ್ಪಸಂಖ್ಯಾತ ಮೋರ್ಛಾ ಸೇರಿದಂತೆ ಪಕ್ಷದ ವಿವಿಧ ಘಟಕಗಳಿಂದ ಅಭಿಂದನೆ ನಡೆಯಿತು. ಅಂಗನವಾಡಿ ತಾಲೂಕು ಮತ್ತು ಜಿಲ್ಲಾ ಸಮಿತಿ ಘಟಕದ ಕಾರ್ಯಕರ್ತರು, ಸಹಾಯಕರು, ಪುತ್ತೂರು ಬಾರ್ ಎಸೋಸಿಯೇಶನ್, ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಲ, ಡಾ. ಅಶೋಕ್ ಪಡಿವಾಳ್ ಮತ್ತು ಡಾ. ಸುರೇಶ್ ಪುತ್ತೂರಾಯರವರು ಮಹಾವೀರ ಆಸ್ಪತ್ರೆ ಪರವಾಗಿ ಅಭಿನಂದನೆ ಸಲ್ಲಿಸಿ ಮನವಿ ಸಲ್ಲಿಸಿದರು. ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕರವರು ಪುತ್ತೂರಿಗೆ ವೈದ್ಯಕೀಯ ಕಾಲೇಜು ಮಂಜೂರಾತಿಗೆ ಅಗತ್ಯ ಶಿಫಾರಸ್ಸು ಮಾಡುವಂತೆ ಮನವಿ ಸಲ್ಲಿಸಿದರು.

ಮಾಜಿ ಅಧ್ಯಕ್ಷ, ಕಾರ್ಯದರ್ಶಿಗಳಿಗೆ ಗೌರವ: ಪುತ್ತೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಸಮಿತಿಯಲ್ಲಿ ಅಧ್ಯಕ್ಷ, ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ ಮೊಗೆರೋಡಿ ಬಾಲಕೃಷ್ಣ ರೈ, ಅಪ್ಪಯ್ಯ ಮಣಿಯಾಣಿ ಎಸ್, ಯು.ಪೂವಪ್ಪ, ನನ್ಯ ಅಚ್ಚುತ ಮೂಡೆತ್ತಾಯ, ಗುತ್ತು ರಂಗನಾಥ ರೈ, ಗೋಪಾಲಕೃಷ್ಣ ಹೇರಳೆಯವರಿಗೆ ಪಕ್ಷದ ಶಾಲು ಮತ್ತು ಹೂ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬೂತ್‌ ಮಟ್ಟದಲ್ಲಿ ಜವಾಬ್ದಾರಿ ವಹಿಸಿದ ಬೂತ್ ಅಧ್ಯಕ್ಷ, ಕಾರ್ಯದರ್ಶಿಗಳನ್ನೂ ಗೌರವಿಸಲಾಯಿತು.

ಮೊಳಗಿದ ಬ್ಯಾಂಡ್, ಕಹಳೆ ನಾದ: ಮುಖ್ಯ ಅತಿಥಿಗಳು, ಪಕ್ಷದ ಹಿರಿಯರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಸಭಾಭವನದ ದ್ವಾರದ ಬಳಿ ಬ್ಯಾಂಡ್, ವಾದ್ಯ, ಕಹಳೆಯಿಂದ ಸ್ವಾಗತಿಸಲಾಯಿತು. ಸನ್ಮಾನ ಸಂದರ್ಭವೂ ಬ್ಯಾಂಡ್ ವಾದ್ಯ, ಕಹಳೆ ಮತ್ತು ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ವೇದಿಕೆಯಲ್ಲಿ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಬಿಜೆಪಿ ಲೋಕಸಭಾ ಚುನಾವಣೆ ಜಿಲ್ಲಾ ಸಂಚಾಲಕ ಗೋಪಾಲಕೃಷ್ಣ ಹೇರಳೆ ಉಪಸ್ಥಿತರಿದ್ದರು. ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಗೌರಿ ಬನ್ನೂರು `ವಂದೇ ಮಾತರಂ’ ಹಾಡಿದರು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿ, ನಗರ ಮಂಡಲದ ಅಧ್ಯಕ್ಷ ಜೀವಂಧರ್ ಜೈನ್ ವಂದಿಸಿದರು. ನಗರಸಭೆ ಮಾಜಿ ಸದಸ್ಯ ರಾಜೇಶ್ ಬನ್ನೂರು ಮತ್ತು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಪೂರ್ಣ ನೇರ ಪ್ರಸಾರವನ್ನು ಸುದ್ದಿ ಬಿಡುಗಡೆ ಯೂ ಟ್ಯೂಬ್‌ನಲ್ಲಿ ಮಾಡಲಾಗಿತ್ತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.