ಪುತ್ತೂರು: ಆದಷ್ಟು ರೈಲ್ವೇ ಟ್ರ್ಯಾಕ್ಗಳಲ್ಲಿರುವ ಎಲ್ಲಾ ಗೇಟ್ಗಳನ್ನು ತೆಗೆಯಬೇಕು ಎಂಬ ಕೇಂದ್ರ ಸರಕಾರದ ಯೋಜನೆಯಂತೆ ರೈಲ್ವೇ ಅಂಡರ್ಪಾಸ್ ಅಥವಾ ಓವರ್ ಬ್ರಿಡ್ಜ್ ಗಳ ನಿರ್ಮಾಣ ಶೀಘ್ರ ನಡೆಯಲಿದೆ. ಈ ನಿಟ್ಟಿನಲ್ಲಿ ಪುತ್ತೂರಿನಲ್ಲೂ ಎಪಿಎಂಸಿ ರೈಲ್ವೇ ಗೇಟ್ನಲ್ಲಿ ಅಂಡರ್ ಪಾಸ್ ಕಾಮಗಾರಿ ನಡೆಯಲಿದೆ. ಜೊತೆಗೆ ವಿವೇಕಾನಂದ ಕಾಲೇಜಿಗೆ ಹೋಗುವ ಭಾಗದಲ್ಲಿರುವ ಬ್ರಿಡ್ಜ್ಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಜೂ. 23ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಅಭಿನಂದನಾ ಸಮಾರಂಭದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪುತ್ತೂರು ಎಪಿಎಂಸಿ ಸಂಪರ್ಕ ರಸ್ತೆಯಲ್ಲಿನ ರೈಲ್ವೇ ಗೇಟ್ಗೆ ಪರ್ಯಾಯವಾಗಿ ಶೇ. 50ರ ಅನುದಾನದಲ್ಲಿ ಕೆಳ ಸೇತುವೆ ನಿರ್ಮಾಣವಾಗಲಿದೆ. ವಿವೇಕಾನಂದ ಕಾಲೇಜ್ ರಸ್ತೆಯ ಅಗಲ ಕಿರಿದಾದ ರೈಲ್ವೇ ಮೇಲ್ಸೇತುವೆಗೆ ಪರ್ಯಾಯವಾಗಿ ನೂತನ ಸೇತುವೆ ನಿರ್ಮಾಣ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಲು ಪ್ರಯತ್ನ ಮಾಡಲಾಗುವುದು ಎಂದರು. ಹಾರಾಡಿಯಿಂದ ರೈಲ್ವೇ ನಿಲ್ದಾಣಕ್ಕೆ ಬರುವ ರಸ್ತೆಗೆ ಈಗಾಗಲೇ ಅನುದಾನ ಬಿಡುಗಡೆ ಆಗಿದೆ. ಹಾಗಾಗಿ ಈ ಭಾಗದ ರೈಲ್ವೇ ಬೇಡಿಕೆ ಈಡೇರಿಕೆ ಆಗಿದೆ. ಮುಂದೆ ರಾಜ್ಯದಲ್ಲಿ ವಿಶೇಷ ಸಭೆಯಲ್ಲೂ ಹಲವಾರು ಪ್ರಸ್ತಾಪ ಇರಿಸಲಾಗಿದೆ. ಮಂಗಳೂರು-ಮೀರಜ್ ನಡುವಣ ಮೀಟರ್ಗೇಜ್ ಹಳಿಗಳಲ್ಲಿ ಓಡಾಟ ನಡೆಸುತ್ತಿದ್ದ ಪ್ರಯಾಣಿಕ ರೈಲು ಓಡಾಟವನ್ನು ನಂತರ ನಿಲುಗಡೆ ಗೊಳಿಸಲಾಗಿತ್ತು. ಇದೀಗ ಮಂಗಳೂರು-ಮೀರಜ್ ಪ್ರಯಾಣಿಕ ರೈಲು ಬಂಡಿಯ ಆರಂಭಕ್ಕೆ ಪ್ರಯತ್ನಗಳನ್ನು ನಡೆಸಲಾಗಿದ್ದು, ಖಚಿತವಾಗಿ ಈ ರೈಲು ಬಂಡಿಯ ಓಡಾಟ ಪುನರಾರಂಭ ಆಗಲಿದೆ. ರೈಲ್ವೇ ಸಂಪರ್ಕ ಅಭಿವೃದ್ಧಿಯ ದೃಷ್ಟಿಯಿಂದ ಮಂಗಳೂರು- ಗುರುವಾಯೂರು, ಸುಬ್ರಹ್ಮಣ್ಯರಸ್ತೆ -ಕೊಲ್ಲೂರು, ಮಂಗಳೂರು- ತಿರುಪತಿ ನಡುವಣ ನೂತನ ರೈಲು ಬಂಡಿಗಳ ಆರಂಭಕ್ಕೆ ರೈಲ್ವೇ ಸಚಿವರಿಗೆ ಪ್ರಸ್ತಾವನೆ ಸಲ್ಲಸಿದ್ದೇನೆ. ರೈಲ್ವೇ ಸಚಿವರನ್ನು ಭೇಟಿ ಮಾಡಿ ದ.ಕ.ಜಿಲ್ಲೆಯಿಂದ ಹೊರ ರಾಜ್ಯಗಳ ತೀರ್ಥಕ್ಷೇತ್ರಗಳಿಗೆ, ವಾಣಿಜ್ಯ ಪಟ್ಟಣಗಳಿಗೆ ರೈಲು ಸಾರಿಗೆ ಕಲ್ಪಿಸುವಂತೆ ಒತ್ತಾಯಿಸುತ್ತೇನೆ ಎಂದರು.
ಪ್ಲಾಸ್ಟಿಕ್ ಬದಲು ಬಾಳೆ ಎಲೆ ಬಳಸಿ: ಹೊಟೇಲ್ಗಳಲ್ಲಿ ಪ್ಲಾಸ್ಟಿಕ್ ಬದಲು ಬಾಳೆ ಎಲೆಯನ್ನು ಬಳಸುವಂತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆರಂಭಿಸಿದ ಆಭಿಯಾನವನ್ನು ಯಶಸ್ವಿ ಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದ ಸಂಸದರು ದೇವಳದಲ್ಲೂ ಪ್ರಸಾದವನ್ನು ಬಾಳೆ ಎಲೆಯಲ್ಲಿ ನೀಡಿದರೆ ಅದಕ್ಕೆ ಮಹತ್ವ ಇದೆ. ಜೊತೆಗೆ ಬಾಳೆ ಕೃಷಿಗೂ ಬೇಡಿಕೆ ಹೆಚ್ಚಾಗಲಿದೆ ಎಂದರು. ಈ ಸಂದರ್ಭ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಆರ್.ಸಿ. ನಾರಾಯಣ ಉಪಸ್ಥಿತರಿದ್ದರು.
ನಂಬಿಕೆ ವಿರುದ್ಧ ಬಿಜೆಪಿ ನಡೆಯುವುದಿಲ್ಲ
ಶಬರಿಮಲೆ ಕ್ಷೇತ್ರಕ್ಕೆ ಹತ್ತಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರು ಮತ್ತು 50 ವರ್ಷ ವಯಸ್ಸು ದಾಟಿದ ಮಹಿಳೆಯರು ಪ್ರವೇಶಿಸಲು ಹಿಂದಿನಿಂದಲೂ ಅವಕಾಶವಿದೆ. ಬಿಜೆಪಿಯು ಈ ಸಂಪ್ರದಾಯವನ್ನು ಬೆಂಬಲಿಸುತ್ತದೆ. ನಂಬಿಕೆಯ ವಿರುದ್ಧವಾಗಿ ಬಿಜೆಪಿ ನಡೆದು ಕೊಳ್ಳುವುದಿಲ್ಲ ಎಂದು ಸಂಸದರು ಹೇಳಿದರು.