ನಿಡ್ಪಳ್ಳಿ; ಶ್ರೀ ಕ್ಷೇ. ಧ. ಗ್ರಾ. ಯೋಜನೆ ಬಿ.ಸಿ. ಟ್ರಸ್ಟ್ ಪುತ್ತೂರು, ಮಹಿಳಾ ಜ್ಞಾನ ವಿಕಾಸ ಕೇಂದ್ರ ಹಾಗೂ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಬೆಟ್ಟಂಪಾಡಿ ವಲಯ ಇದರ ಆಶ್ರಯದಲ್ಲಿ ಜೂ. 23ರಂದು ದೇವಸ್ಯ ಮಂಜುನಾಥ ಸಭಾಭವನದಲ್ಲಿ ಆರೋಗ್ಯ- ಅರಿವು ಮಾಹಿತಿ ಹಾಗೂ ತಪಾಸಣಾ ಶಿಬಿರ ನಡೆಯಿತು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಮಹಾಬಲ ರೈ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಅರ್ಯಾಪು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಸಂತ ದುರ್ಗಾ ಅಧ್ಯಕ್ಷತೆ ವಹಿಸಿದರು. ಪುರುಷರ ಕಟ್ಟೆ ಪ್ರಸಾದ್ ಆಯುರ್ವೇದಿಕ್ ಹೆಲ್ತ್ ಕೇರ್ ನ ಡಾ| ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಧ್ಯ, ವಯಸ್ಕ, ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ದೊಡ್ಡಡ್ಕ ಒಕ್ಕೂಟದ ಅಧ್ಯಕ್ಷೆ ಕವಿತಾ ಮತ್ತು ಕುಂಜೂರು ಪಂಜ ಒಕ್ಕೂಟದ ಅಧ್ಯಕ್ಷ ರಾಮ ನಾಯ್ಕ ಉಪಸ್ಥಿತರಿದ್ದರು. ಪುತ್ತೂರು ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿಯ ರಾಜೇಶ್ ರಕ್ತ ಪರಿಶೋಧನೆಗೆ ಸಹಕರಿಸಿದರು. ಸುಮಾರು 75 ಮಂದಿ ಫಲಾನುಭವಿಗಳು ಆರೋಗ್ಯ ತಪಾಸಣೆ ನಡೆಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.
ಸೇವಾ ಪ್ರತಿನಿಧಿ ಇಗ್ಲೇಷಿಯಸ್ ಡಿ’ಸೋಜಾ ಸ್ವಾಗತಿಸಿ, ಮನೋರಮ ವಂದಿಸಿದರು. ತಾಲೂಕು ಮಹಿಳಾ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುಜಾತ ಕಾರ್ಯಕ್ರಮ ನಿರೂಪಿಸಿದರು. ಜ್ಞಾನ ವಿಕಾಸ ಕೇಂದ್ರದ ಸದಸ್ಯರು, ಪ್ರಗತಿಬಂದು ಸ್ವಸಹಾಯ ಸಂಘದ ಸದಸ್ಯರು ಸಹಕರಿಸಿದರು.