ಆಲಂಕಾರು: ಆರ್ಥಿಕ ಅವ್ಯವಹಾರವೆಸಗಿದ ಆರೋಪದಲ್ಲಿ ಅಮಾನತುಗೊಂಡಿದ್ದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನೌಕರರಾದ ಎನ್. ಶ್ರೀಧರ ಆಚಾರ್ ಹಾಗೂ ಜಯಂತ ಕುಮಾರ್ರವರನ್ನು ವಿಚಾರಣಾಧಿಕಾರಿಯವರ ನಿರ್ಣಯಕ್ಕನುಸಾರವಾಗಿ ಜೂ. 20ರಿಂದ ಅನ್ವಯವಾಗುವಂತೆ ಶಾಶ್ವತವಾಗಿ ಸೇವೆಯಿಂದ ವಜಾಗೊಳಿಸಿ ಆದೇಶಿಸಲಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಕಮಲಾಕ್ಷ ರೈಯವರು ತಿಳಿಸಿದ್ದಾರೆ.
ನೌಕರರಾದ ಶ್ರೀಧರ ಆಚಾರ್ ಮತ್ತು ಜಯಂತ ಕುಮಾರ್ರವರು ದೇವಳದ ಸೇವಾ ರಶೀದಿಗಳನ್ನು ಗಣಕೀಕೃತಗೊಳಿಸುವ ಸಲುವಾಗಿ ಉಜಿರೆಯ ಸಾಫ್ಟ್ವೇರ್ ತಜ್ಞರಿಂದ ಸಾಫ್ಟ್ವೇರ್ ತಯಾರಿಸಿದ್ದು ಸದ್ರಿ ಸಾಫ್ಟ್ವೇರ್ನಲ್ಲಿ ಡಿಲೀಟ್ ಆಪ್ಷನ್ ನೀಡಿ ದೇವಳದ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಕಂಡುಬಂದಿದ್ದ ಹಿನ್ನಲೆಯಲ್ಲಿ ಆಂತರಿಕ ತನಿಖೆ ನಡೆಸಲು ಅನುಮತಿ ಕೋರಿ ವ್ಯವಸ್ಥಾಪನಾ ಸಮಿತಿ ಎ. 29ಕ್ಕೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ದ.ಕ. ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿತ್ತು. ಈ ಇಬ್ಬರು ನೌಕರರು 2018ರ ಅಕ್ಟೋಬರ್, ನವಂಬರ್ ತಿಂಗಳ ಅವಧಿಯಲ್ಲಿ ಆರ್ಥಿಕ ದುರ್ವವ್ಯಹಾರ ಎಸಗಿರುವುದು ಹಾಗೂ ಕೆಲಸದ ಅವಧಿಯಲ್ಲಿ ಆಡಳಿತ ಮಂಡಳಿಯವರ ಒಪ್ಪಿಗೆಯಿಲ್ಲದೆ ಸೇವೆಗೈಯುವ ಕೌಂಟರನ್ನು ಬಿಟ್ಟುಹೋಗಿರುವುದು ಆಡಳಿತ ಮಂಡಳಿಯ ಗಮನಕ್ಕೆ ಬಂದಿತ್ತು. ದೇವಳದ ನೌಕರರ ವಿರುದ್ಧ ಕೇಳಿ ಬಂದಿರುವ ಈ ಆರೋಪದ ಬಗ್ಗೆ ಇಲಾಖಾ ನಿಯಮ 17ರಲ್ಲಿ ತಿಳಿಸಿರುವಂತೆ ವಿಚಾರಣಾಧಿಕಾರಿಯವರನ್ನು ನೇಮಕ ಮಾಡಿ ವಿಚಾರಣೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ಮೇ. 8ರಂದು ವ್ಯವಸ್ಥಾಪನಾ ಸಮಿತಿಗೆ ನಿರ್ದೇಶನ ನೀಡಿದ್ದರು.
ಈ ಹಿನ್ನೆಲೆಯಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿಯವರು ಆರ್ಥಿಕ ಅವ್ಯವಹಾರವೆಸಗಿದ ಆರೋಪ ಎದುರಿಸುತ್ತಿದ್ದ ಎನ್.ಶ್ರೀಧರ ಆಚಾರ್ ಹಾಗೂ ಜಯಂತ್ ಕುಮಾರ್ರವರನ್ನು ಮೇ.11ರಿಂದ ಅನ್ವಯವಾಗುವಂತೆ ಅಮಾನತುಗೊಳಿಸಿ ನ್ಯಾಯವಾದಿ ಪೂರ್ಣಿಮಾ ರೈಯವರನ್ನು ವಿಚಾರಣಾಧಿಕಾರಿಯಾಗಿ ನೇಮಕಗೊಳಿಸಿ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿತ್ತು. ಈ ವಿಚಾರಣಾ ಸಮಿತಿಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಉಮೇಶ್ ದೇವಾಡಿಗರನ್ನು ನೇಮಕ ಮಾಡಲಾಗಿತ್ತು. ಬಳಿಕ ಈ ಸಮಿತಿ ಅಮಾನತುಗೊಂಡಿದ್ದ ಶ್ರೀಧರ ಆಚಾರ್ ಹಾಗೂ ಜಯಂತ್ ಕುಮಾರ್ರವರಿಗೆ ಎರಡು ಬಾರಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರೂ ಇಬ್ಬರು ನೌಕರರೂ ವಿಚಾರಣೆಗೆ ಹಾಜರಾಗಿರಲಿಲ್ಲ. ನೋಟಿಸ್ಗೆ ಸಹ ಯಾವುದೇ ಲಿಖಿತ ಸಮಜಾಯಿಷಿಕೆಯನ್ನೂ ನೀಡಿರಲಿಲ್ಲ. ನೌಕರರ ವಿರುದ್ಧ ಕೇಳಿಬಂದಿದ್ದ ಆರೋಪಗಳು ವಿಚಾರಣಾಧಿಕಾರಿಯವರು ನಡೆಸಿದ ಆಂತರಿಕ ತನಿಖೆಯಲ್ಲಿ ಸಾಬೀತುಗೊಂಡಿದ್ದು ವಿಚಾರಣಾಧಿಕಾರಿಯವರ ತನಿಖಾ ನಿರ್ಣಯಕ್ಕನುಸಾರವಾಗಿ ಸೇವೆಯಿಂದ ಇಬ್ಬರು ನೌಕರರನ್ನು ಶಾಶ್ವತ ವಜಾಗೊಳಿಸಿ ಜೂ.20ರಂದು ಆದೇಶ ಹೊರಡಿಸಲಾಗಿದೆ ಎಂದು ಕಮಲಾಕ್ಷ ರೈಯವರು ತಿಳಿಸಿದ್ದಾರೆ.