ಉಪ್ಪಿನಂಗಡಿ: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕರಾಯ ಘಟಕ ಹಾಗೂ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಸಮಿತಿ ಕರಾಯ ಇದರ ಜಂಟಿ ಆಶ್ರಯದಲ್ಲಿ ಕರಾಯ ಶ್ರೀ ಮಹಾಲಿಂಗೇಶ್ವರ ದೇವಳದ ಎದುರು ಗದ್ದೆಯಲ್ಲಿ ಕೆಸರು ಗದ್ದೆಯಲ್ಲಿ ಕ್ರೀಡೋತ್ಸವ ನಡೆಯಿತು.
ಧಾರ್ಮಿಕ ವಿಧಿವಿಧಾನಗಳಿಗೆ ಅಗತ್ಯವಾದ ಭತ್ತದ ಪೈರುಗಳನ್ನು ದೇವಳದ ಗದ್ದೆಯಲ್ಲೇ ಬೆಳೆಸುವ ಉದ್ದೇಶದಿಂದ ಪ್ರಾರಂಭಿಸಲಾದ ಈ ಗದ್ದೆಯನ್ನು ಹದ ಮಾಡುವ ಕಾರ್ಯಕ್ರಮದ ನೆಲೆಗಟ್ಟಿನಲ್ಲಿ ಗದ್ದೆಯಲ್ಲೇ ಕ್ರೀಡಾಕೂಟವನ್ನು ಆಯೋಜಿಸಿ ಮಹಿಳೆಯರು, ಮಕ್ಕಳು, ಪುರುಷರು ಎಂದೆನಿಸಿದೆ ಎಲ್ಲರೂ ಗದ್ದೆಗಿಳಿದು ಮೈಮೇಲೆಲ್ಲಾ ಕೆಸರು ಮೆತ್ತಿಕೊಂಡು ಬಗೆ ಬಗೆಯ ಕ್ರೀಡಾಕೂಟದಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಹಗ್ಗ ಜಗ್ಗಾಟ, ಓಟ, ಮೂರು ಕಾಲಿನ ಓಟ, ಅಡಿಕೆ ಮರದ ಹಾಳೆಯಿಂದ ಎಳೆಯುವುದು, ಮಡಿಕೆ ಒಡೆಯುವುದು, ಲಿಂಬೆ ಚಮಚ, ಸಂಗೀತ ಕುರ್ಚಿಯಂತಹ ಕ್ರೀಡೆಗಳನ್ನು ಕೆಸರು ತುಂಬಿದ ಗದ್ದೆಯಲ್ಲಿ ಆಡಿ ಸಂಭ್ರಮಿಸಿದರು.
ಊರಿನ ಹಿರಿಯರಾದ ಜಾರಪ್ಪ ಗೌಡ, ಉಮನ ಗೌಡ, ವೆಂಕಪ್ಪ ನಾಯ್ಕ, ವಿಶ್ವ ಹಿಂದೂಪರಿಷತ್ ಮುಂದಾಳು ರಾಜಶೇಖರ್, ಕ್ರೀಡಾಕೂಟದ ಸಮಿತಿಯ ಮುಂದಾಳು ಬೂದಪ್ಪರವರ ಕಲ್ಪನೆಯಲ್ಲಿ ಈ ಕ್ರೀಡಾಕೂಟ ಆಯೋಜಿಸಲ್ಪಟ್ಟಿತು. ದೇಗುಲದ ಮುಂಭಾದ ಪ್ರಾಂಗಣದಲ್ಲಿ ನೇಜಿ ಬಿತ್ತನೆ ಕಾರ್ಯ ನಡೆದಿದ್ದು, ಕ್ರೀಡಾಕೂಟದಿಂದ ಹದಗೊಂಡ ಗದ್ದೆಯಲ್ಲಿ ಮುಂದಿನ ಬುಧವಾರದಂದು ಮಾನವ ಶ್ರಮದ ಮೂಲಕ ನೇಜಿ ನೆಡುವ ಕಾರ್ಯವನ್ನು ಮಾಡಲಾಗುತ್ತದೆ. ಹೀಗೆ ಬೆಳೆದ ಭತ್ತದ ಪೈರನ್ನು ಮುಂಬರುವ ತೆನೆ ಹಬ್ಬದಂದು ದೇಗುಲಕ್ಕೆ ಬಳಸಲು ಸಂಕಲ್ಪಿಸಲಾಗಿದೆ.
ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ:
ಕಾರ್ಯಕ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿಂದೂಪರ ಸಂಘಟನೆಗಳ ಮುಂದಾಗಳುಗಳಾದ ಶರಣ್ ಪಂಪುವೆಲ್, ಅರುಣ್ ಕುಮಾರ್ ಪುತ್ತಿಲ, ಭಾಸ್ಕರ್ ಧರ್ಮಸ್ಥಳ ಭಾಗವಹಿಸಿದ್ದು, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ಉದಯಕುಮಾರ್, ನಿವೃತ್ತ ಶಿಕ್ಷಕರಾದ ಬೊಮ್ಮಯ್ಯ ಬಂಗೇರ, ಗೋಪಾಲಕೃಷ್ಣ ಪೈ, ಕರಾಯ ರಾಘವೇಂದ್ರ ನಾಯಕ್, ಯು. ರಾಜೇಶ್ ಪೈ, ಅನಿಲ್ ಮೊದಲಾದ ಪ್ರಮುಖರು ಭಾಗವಹಿಸಿದ್ದರು.