- ವಿದ್ಯಾರ್ಥಿಗಳ ಸಹಿತ ಹಲವರಿಗೆ ಗಾಯ
- ಬಿಗಿ ಪೊಲೀಸ್ ಬಂದೋಬಸ್ತು
ವಿಟ್ಲ: ಬೈಕ್ ಗಳಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಖಾಸಗಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಜೂ.25ರಂದು ವಿಟ್ಲ ಹಾಗೂ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಘಟನೆಯಿಂದಾಗಿ ಒಟ್ಟು ಏಳು ಬಸ್ಸುಗಳಿಗೆ ಹಾಗೂ ಅದರಲ್ಲಿದ್ದ ಕೆಲ ಪ್ರಯಾಣಿಕರ ಸಹಿತ ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಮಂಗಳೂರು ಕಡೆಯಿಂದ ಮಾಣಿ ಮೂಲಕ ಪುತ್ತೂರು ಕಡೆಗೆ ತೆರಳುವ ಸೆಲಿನಾ ಹಾಗೂ ಸೇಫ್ ವೇ ಸೇರಿದಂತೆ ಏಳು ಖಾಸಗಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದ ಬಗ್ಗೆ ವರದಿಯಾಗಿದೆ . ಘಟನೆಯಲ್ಲಿ ಬಸ್ ಗಳ ಗಾಜು ಸಂಪೂರ್ಣ ಧ್ವಂಸಗೊಂಡಿದೆ. ಬಸ್ಸಿನಲ್ಲಿ ಶಾಲಾ ವಿದ್ಯಾರ್ಥಿಗಳು ಸೇರಿ ಅನೇಕ ಮಂದಿ ಪ್ರಯಾಣಿಸುತ್ತಿದ್ದು, ಕಿಟಕಿ ಗಾಜು ಹಾಗೂ ಕಲ್ಲಿನೇಟಿಗೆ ಮೂವರು ವಿದ್ಯಾರ್ಥಿಗಳಿಗೆ ತಲೆಭಾಗಕ್ಕೆ ಏಟಾಗಿದೆ ಎಂದು ತಿಳಿದುಬಂದಿದೆ.
ವಿಟ್ಲ ಠಾಣಾ ವ್ಯಾಪ್ತಿಯ ಸೂರಿಕುಮೇರ್, ಹಾಗೂ ಬಂಟ್ವಾಳ ಠಾಣಾ ವ್ಯಾಪ್ತಿಯ ಕುದ್ರೆಬೆಟ್ಟುನಲ್ಲಿ ಕಲ್ಲು ತೂರಾಟ ನಡೆದಿದ್ದು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.\
ಕರ್ನಾಟಕದಿಂದ ಕೇರಳ ಭಾಗಕ್ಕೆ ದನ ಸಾಗಾಟ ಮಾಡುತ್ತಿದ್ದ ವಾಹನವನ್ನು ಕಾರಿನಲ್ಲಿ ಬಂದ ತಂಡವೊಂದು ಬದಿಯಡ್ಕ ಠಾಣಾ ವ್ಯಾಪ್ತಿಯ ಮಂಜಿನಡ್ಕ ಎಂಬಲ್ಲಿ ತಡೆದು ನಿಲ್ಲಿಸಿ ಪಿಕಪ್ ವಾಹನ, ಅದರಲ್ಲಿದ್ದ ಮೂರು ದನ ಹಾಗೂ ನಗದನ್ನು ದರೋಡೆ ಮಾಡಲಾಗಿದೆ ಎಂದು ಪಿಕಪ್ ಚಾಲಕ ಪುತ್ತೂರು ತಾಲೂಕಿನ ಪರ್ಪುಂಜ ನಿವಾಸಿ ಹಂಝರವರು ಬದಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ವಿಟ್ಲ ಪ್ರಖಂಡ ಬಜರಂಗದಳ ಸಂಚಾಲಕ ಅಕ್ಷಯ್ ರಜಪೂತ್ ಕಲ್ಲಡ್ಕ ಸೇರಿದಂತೆ ಆರು ಮಂದಿಯ ವಿರುದ್ಧ ದರೋಡೆ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಹಿಂದೂ ಮುಖಂಡನ ಮೇಲೆ ಪ್ರಕರಣ ದಾಖಲಾಗಿರುವುದನ್ನು ಖಂಡಿಸಿ ಬಸ್ಸುಗಳ ಮೇಲೆ ಕಲ್ಲೆಸೆತ ನಡೆದಿರಬೇಕೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ವಿಟ್ಲ ಮತ್ತು ಬಂಟ್ವಾಳ ಠಾಣಾ ವ್ಯಾಪ್ತಿಯಲ್ಲಿ ಬಸ್ಸುಗಳ ಮೇಲೆ ಕಲ್ಲುತೂರಾಟ ನಡೆಯುತ್ತಿದ್ದಂತೆ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಾಂತ ಭಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸ್ವಯಂಪ್ರೇರಿತ ಬಂದ್ ಮೆಸೆಜ್…
ಪಿಕಪ್ ವಾಹನವನ್ನು ತಡೆದ ವಿಚಾರವಾಗಿ ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣ ದಾಖಾಲಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು ಮಾತ್ರವಲ್ಲದೆ ಜೂ.25ರಂದು ವಿಟ್ಲ ಬಜರಂಗದಳ ಪ್ರಖಂಡದಲ್ಲಿ ಸ್ವಯಂಪ್ರೇರಿತ ಬಂದ್ ನಡೆಸಲಾಗುವುದು, ಹಾಗೂ ಹಿಂದೂ ಮುಂಖಂಡನ ಮೇಲೆ ಕೇಸು ದಾಖಲಿಸಿರುವುದನ್ನು ಖಂಡಿಸಬೇಕೆಂಬುದಾಗಿ ಸಂದೇಶಗಳು ರವಾನೆಯಾಗಿತ್ತು.
ಸರಕಾರಿ ಬಸ್ಸುಗಳ ಮೇಲೂ ಕಲ್ಲು ತೂರಾಟ
ಪುತ್ತೂರಿನಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ಎರಡು ಕೇರಳ ರಾಜ್ಯ ಸರಕಾರಿ ಬಸ್ಸು ಹಾಗೂ ಕಾಸರಗೋಡಿನಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಒಂದು ಕರ್ನಾಟಕ ರಾಜ್ಯ ಸರಕಾರಿ ಬಸ್ಸಿನ ಮೇಲೆ ಬೆಳಗ್ಗೆ ಕಲ್ಲೆಸೆತ ನಡೆದಿದೆ. ಕೇರಳ ರಾಜ್ಯ ಸರಕಾರಿ ಬಸ್ಸಿಗೆ ಉರಿಮಜಲು ಹಾಗೂ ಕೇಪು ಸಮೀಪದ ಮೈರ ಎಂಬಲ್ಲಿ ಹಾಗೂ ಕರ್ನಾಟಕ ರಾಜ್ಯ ಸರಕಾರಿ ಬಸ್ಸಿಗೆ ವಿಟ್ಲ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದ ಸಮೀಪವೇ ಕಲ್ಲೆಸೆತ ನಡೆದಿದೆ.