HomePage_Banner
HomePage_Banner
HomePage_Banner
HomePage_Banner

ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಮೇಲೆ ವೈಯಕ್ತಿಕ ನಿಗಾ ಇರಿಸಲು ಶಾಸಕ ಮಠಂದೂರು ಸೂಚನೆ

ಪುತ್ತೂರು:ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ವಿಷಯವಾರು ಶಿಕ್ಷಕರು ಹೆಚ್ಚಿನ ಗಮನಕೊಡಬೇಕು. ಹಿಂದುಳಿದಿರುವ ವಿದ್ಯಾರ್ಥಿಗಳ ಮೇಲೆ ವೈಯಕ್ತಿಕ ನಿಗಾವಹಿಸುವಂತೆ ಶಾಸಕ ಸಂಜೀವ ಮಠಂದೂರು ಪ್ರೌಢಶಾಲಾ ಮುಖ್ಯಸ್ಥರು ಹಾಗೂ ಎಸ್‌ಡಿಎಂಸಿ ಸಭೆಯಲ್ಲಿ ಸೂಚನೆ ನೀಡಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಿದ್ದತೆ ಹಾಗೂ ಫಲಿತಾಂಶ ಉನ್ನತೀಕರಣದ ಬಗ್ಗೆ ಜೂ.26ರಂದು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮುಖ್ಯ ಶಿಕ್ಷಕರ ಹಾಗೂ ಎಸ್‌ಡಿಎಂಸಿ ಬೇಡಿಕೆ, ಸಮಸ್ಯೆಗಳನ್ನು ಆಲಿಸಿ ಅವರು ಮಾತನಾಡಿದರು. ಫಲಿತಾಂಶ ಉನ್ನತೀಕರಿಸುವ ನಿಟ್ಟಿನಲ್ಲಿ ಪ್ರಯೋಗ ಶೀಲತೆ ಹಾಗೂ ಹೊಸ ಕಾರ್ಯತಂತ್ರಗಳನ್ನು ರೂಪಿಸಬೇಕು. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿಸಬೇಕು. ಹತ್ತನೇ ತರಗತಿಯಲ್ಲಿರುವ ಹಿಂದುಳಿದ ವಿದ್ಯಾರ್ಥಿಗಳ ಮೇಲೆ ವೈಯಕ್ತಿಕ ನಿಗಾ ಇಡವುದು ಆವಶ್ಯಕ. ವಿದ್ಯಾರ್ಥಿಗಳ ಬೆಳವಣಿಗೆಯ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತರಗತಿ ಶಿಕ್ಷಕರು ಮುಖ್ಯ ಶಿಕ್ಷಕರೊಂದಿಗೆ ಚರ್ಚಿಸುವುದು. ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕರೆಸಿ ಅವರಲ್ಲಿರುವ ಹಿನ್ನಡೆಗೆ ಕಾರಣವನ್ನು ತಿಳಿದು ಪರಿಹರಿಸಿಕೊಳ್ಳಲು ಪ್ರಯತ್ನಿಸುವುದು. ಶೈಕ್ಷಣಿಕ ಬೆಳವಣಿಗೆಯಲ್ಲಿ ಎಸ್‌ಡಿಎಂಸಿ ಹಾಗೂ ಹಿರಿಯ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವುದು. ಮರು ಮೌಲ್ಯ ಮಾಪನಕ್ಕೆ ಆರ್ಥಿಕ ಅಡಚಣೆ ಇರುವ ವಿದ್ಯಾರ್ಥಿಗಳಿಗೆ ಪೂರಕ ವಾತಾರಣ ನಿರ್ಮಿಸಿಕೊಡುವುದು. ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ವಿಷಯವಾರು ಪರಣಿತ ಅಧ್ಯಾಪಕರಿಂದ ವಿಶೇಷ ಕಾರ್ಯಾಗಾರ ನಡೆಸುವಂತೆ ಅವರು ಸೂಚಿಸಿದರು.
ಕಳೆದ ಒಂದು ವರ್ಷಗಳಿಂದ ರಾಜ್ಯದಲ್ಲಿ ಶಿಕ್ಷಣ ಸಚಿವರೇ ಇಲ್ಲ. ಮುಖ್ಯ ಮಂತ್ರಿಗಳ ಬಳಿಯೇ ಹಲವಾರು ಖಾತೆಗಳಿವೆ. ಎಲ್ಲವನ್ನೂ ಅವರ ಬಳಿಯೇ ಹೇಳಿಕೊಳ್ಳಬೇಕಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಶಿಕ್ಷಣ ಸಚಿವರ ನೇಮಕವಾಗಿದ್ದು ಸರಕಾರಿ ಶಾಲಾ ಸಮಸ್ಯೆಗಳು, ಹುದ್ದೆಗಳ ಭರ್ತಿಗೊಳಿಸುವಂತೆ ಸಚಿವರ ಗಮನಕ್ಕೆ ತರಲಾಗುವುದು. ಅನುದಾನಿತ ಶಾಲೆಗಳಲ್ಲಿ 2015ರಿಂದ ಅಧ್ಯಾಪಕರ ಕೊರತೆಯಿದೆ. ಕೊಂಬೆಟ್ಟು ಪ್ರೌಢಶಾಲೆಯಲ್ಲಿ 6 ಮಂದಿಯನ್ನು ಹೆಚ್ಚುವರಿ ಶಿಕ್ಷಕಿಯಾಗಿ ಬೇರೆ ಶಾಲೆಗೆ ವರ್ಗಾವಣೆಗೊಳಿಸಿರುವ ಬಗ್ಗೆ ಶಿಕ್ಷಣ ಸಚಿವರ ಗಮನಕ್ಕೆ ತಂದು ತಡೆ ಹಿಡಿಯುವಂತೆ ತಿಳಿಸಲಾಗಿದೆ. ವರ್ಗಾವಣೆ ಮಾಡಿರುವ ಶಿಕ್ಷಕರನ್ನು ಬಿಡುಗಡೆ ಮಾಡದಂತೆ ಉಪನಿರ್ದೇಶಕರಿಗೆ ಸೂಚಿಸಲಾಗಿದೆ. ಶಾಲೆಗಳಲ್ಲಿ ಪೀಠೋಪಕರಣಗಳ ಕೊರತೆಯಿಲ್ಲ. ಕೆಲವು ಕಡೆಗಳಲ್ಲಿ ಕೊಡಿಗಳ ಕೊರತೆಯಿದೆ. ಶಿಕ್ಷಕರ ಹುದ್ದೆಯನ್ನು ಭರ್ತಿಗೊಳಿಸುವಂತೆ ಸಚಿವರ ಗಮನಕ್ಕೆ ತಂದು ಪರಿಹರಿಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಪುತ್ತೂರು ನಂಬರ್ ವನ್ ಆಗಬೇಕು:
ಶೈಕ್ಷಣಿಕವಾಗಿ ಪುತ್ತೂರು ತಾಲೂಕು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆಯಬೇಕಿದೆ. ಈ ಸಹಾಯಕ ಆಯುಕ್ತರು, ತಹಶೀಲ್ದಾರ್, ಜಿ.ಪಂ ಅಧ್ಯಕ್ಷರು, ತಾ.ಪಂ ಅಧ್ಯಕ್ಷರೊಂದಿಗೆ ತಾಲೂಕಿನ 47 ಪ್ರೌಢ ಶಾಲೆಗಳಿಗೂ ಭೇಟಿ ನೀಡಿ ಶಾಲಾ ಸಮಸ್ಯೆಗಳನ್ನು ಪರಿಶೀಲನೆ ನಡೆಸಿ ಪರಿಹರಿಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಶಾಸಕರು ಹೇಳಿದರು.
3 ತಿಂಗಳ ಬಳಿಕ ಮತ್ತೆ ಸಭೆ:
ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಎಸ್‌ಡಿಎಂಸಿ, ಮುಖ್ಯ ಶಿಕ್ಷಕರು, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಶಿಕ್ಷಕರ ಸಭೆಯನ್ನು ಮೂರು ತಿಂಗಳ ಬಳಿಕ ನಡೆಸಲಾಗುವುದು. ಈ ಸಭೆಯಲ್ಲಿ ವಿದ್ಯಾರ್ಥಿವಾರು ಹಾಗೂ ಶಾಲಾವಾರು ಸಮಸ್ಯೆ, ಬೇಡಿಕೆ ಹಾಗೂ ಪ್ರಗತಿಯ ಬಗ್ಗೆ ಕೈಗೊಂಡಿರುವ ಕಾರ್ಯಕ್ರಮಗಳು ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಭಿಪ್ರಾಯಗಳನ್ನು ತಿಳಿಸುವಂತೆ ಶಾಸಕರು ಹೇಳಿದರು.
ಶಾಲಾ ಮುಖ್ಯಸ್ಥರು ಹೇಳಿದ್ದು……
ವಿಷಯವಾರು ಹಾಗೂ ಶಾಲಾವಾರು ಫಲಿತಾಂಶಗಳ ಮೇಲೆ ಹೊಂದಾಣಿಕೆ ಮಾಡುವುದು ಸರಿಯಲ್ಲ. ಗಣಿತ ವಿಷಯಕ್ಕೆ ಸಂಬಂಧಿಸಿ ಹಳ್ಳಿ ಮಕ್ಕಳಿಗೆ ಪ್ರಗತಿಗೆ ಪೂರಕವಾದ ಗೈಡ್ ಆಗಿಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕತೆಗೆ ಪೂರಕವಾದ ಎಸ್‌ಡಿಎಂಸಿ ಆವಶ್ಯಕ. ಅಧಿಕ ಮಕ್ಕಳಿರುವ ಶಾಲೆಗಳಲ್ಲಿ ಅಧಿಕ ಫಲಿತಾಂಶ ನಿರೀಕ್ಷಿಸುವುದು ಕಷ್ಟಕರ. ಶಿಕ್ಷಕರಿಗೆ ಇತರ ವಿಷಯಗಳಗಿಂತ ಅಧಿಕ ಅವಧಿ ವಿದ್ಯಾರ್ಥಿಗಳ ಜೊತೆಗೆ ಬೆರೆಯಲು ಅವಕಾಶ ಕೊಡಬೇಕು. ಪೋಷಕರ ಅಸಹಕಾರ, ವಿದ್ಯಾರ್ಥಿಗಳ ಗೈರು ಹಾಜರಿ ಕಾರಣ. ಅನುದಾನಿತ ಶಾಲೆಗಳ ಶಿಕ್ಷಕರ ಹುದ್ದೆ ಭರ್ತಿ ಮಾಡಿ. ಪ್ರಾಥಮಿಕ ಶಿಕ್ಷಣದಲ್ಲಿ ಬೆಳವಣಿಗೆ ಆವಶ್ಯಕ. 8ನೇ ತರಗತಿ ತನಕ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವುದು. ಕೊಂಬೆಟ್ಟು ಪ್ರೌಢಶಾಲೆಯಿಂದ 6 ಮಂದಿ ಶಿಕ್ಷಕರು ಹೆಚ್ಚುವರಿಯಾಗಿ ಬೇರೆಡೆಗೆ ವರ್ಗಾವಣೆ ಸೇರಿದಂತೆ ಹಲವು ಬೇಡಿಕೆ ಹಾಗೂ ಸಮಸ್ಯೆಗಳನ್ನು ಶಾಸಕರ ಮುಂದಿಟ್ಟರು.
ಎಸ್.ಐ ಚೆಲುವಯ್ಯ ಮಕ್ಕಳ ಸುರಕ್ಷತೆ ಹಾಗೂ ವಾಹನ ಸುಕರಕ್ಷತೆಯ ಬಗ್ಗೆ ಮಾಹಿತಿ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ ಡಿ.ಎನ್ ಪ್ರಸ್ತಾವಿಕವಾಗಿ ಮಾತನಾಡಿದರು. ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ಸಮನ್ವಯಾಧಿಕಾರಿ ಮೋನಪ್ಪ ಪೂಜಾರಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಆಕಾಂಕ್ಷ ಹಾಗೂ ಸಿಂಚನ ಪ್ರಾರ್ಥಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಸ್ವಾಗತಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.