ಕಡಬ: ಕಳೆದ ಕೆಲ ದಿನಗಳಿಂದ ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಕೋಡಿಂಬಾಳ ಗ್ರಾಮದ ಕುಕ್ಕೆರೆಬೆಟ್ಟು ನಿವಾಸಿ ಆನಂದ ನಾಕ್ ಅವರ ಪತ್ನಿ ವೀಣಾ (೪೩ವ.) ಅವರು ಜೂ.೨೬ರಂದು ಮುಂಜಾನೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕೆಲದಿನಗಳಿಂದ ಕಡಬದ ಖಾಸಗಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಳಿಕ ಜ್ವರ ಉಲ್ಬಣಗೊಂಡು ಜೂ. 24 ರಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಮೃತರು ಪತಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಜನರಲ್ಲಿ ಆತಂಕ: ಕಳೆದ 2 ತಿಂಗಳಿನಿಂದ ಕಡಬದ ನೂಜಿಬಾಳ್ತಿಲ, ರೆಂಜಿಲಾಡಿ, ೧೦೨ ನೆಕ್ಕಿಲಾಡಿ ಹಾಗೂ ಕೋಡಿಂಬಾಳ ಗ್ರಾಮದ ಕೆಲ ಪ್ರದೇಶಗಳಲ್ಲಿ ಜನರು ವ್ಯಾಪಕವಾಗಿ ಶಂಕಿತ ಡೆಂಗ್ಯೂ ಜ್ವರ ಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಡಿಂಬಾಳದ ವೀಣಾ ಅವರು ಶಂಕಿತ ಡೆಂಗ್ಯೂಗೆ ಬಲಿಯಾದ ಸುದ್ದಿಯಿಂದಾಗಿ ಸಾರ್ವಜನಿಕ ವಲಯದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಕೋಡಿಂಬಾಳದ ಪಾಲಪ್ಪೆ, ಮುಳಿಯ, ಕೊಠಾರಿ, ಉದೇರಿ, ನೆಲ್ಲಿಪಡ್ಡು, ಕುಕ್ಕೆರೆಬೆಟ್ಟು ಪ್ರದೇಶಗಳ ಸುಮಾರು 50 ಮನೆಗಳಲ್ಲಿ ಬಹುತೇಕ ಎಲ್ಲರೂ ಜ್ವರದ ಬಾಧೆಗೆ ಒಳಗಾಗಿದ್ದಾರೆ. ಕೆಲವು ಮಂದಿ ರೋಗಿಗಳು ಮಂಗಳೂರು ಹಾಗೂ ಪುತ್ತೂರಿನ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಡಿಂಬಾಳದ ಕುಂಜತ್ತೋಡಿಯ ಲೀಲಾವತಿ ಅಮ್ಮು ಶೆಟ್ಟಿ, ಗುಲಾಬಿ ಪಾಲಪ್ಪೆ, ಭಾರತಿ ಉದೇರಿ ಹಾಗೂ ಮನೋಹರ ಉದೇರಿ ಅವರು ಜ್ವರ ಉಲ್ಬಣಗೊಂಡು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.