ಕೆಯ್ಯೂರು: ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಪೋಷಕರ ಸಭೆ

ಕೆಪಿಎಸ್ ಶಾಲಾಭಿವೃದ್ಧಿಗೆ ಎರಡು ಕೋಟಿ ರೂ.ಅನುದಾನ ಮಂಜೂರು: ಸಂಜೀವ ಮಠಂದೂರು

ಪುತ್ತೂರು: ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರಿನಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದ ಸಂಯುಕ್ತ ಪೋಷಕರ ಸಭೆ ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸ್ಮಾರ್ಟ್ ಕ್ಲಾಸನ್ನು ಉದ್ಘಾಟಿಸಿದ ಶಾಸಕರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ಮಗು ಎಲ್ಲೇ ಕಲಿಯಲಿ ತಂದೆ-ತಾಯಿ ಇಬ್ಬರೂ ಜವಾಬ್ದಾರಿ ವಹಿಸಬೇಕು. ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಲಭಿಸಬೇಕೆಂದು ಸರ್ಕಾರ ಕೆಪಿಎಸ್ ಎಂಬ ಶಾಲೆಗಳನ್ನು ಆರಂಭಿಸಿದೆ. ಸರ್ಕಾರದ ಸೌಲಭ್ಯಗಳು ಪ್ರತಿಯೊಬ್ಬ ಮಗುವಿಗೂ ಸಿಗುವಂತಾಗಬೇಕು. ಶಾಲಾ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಎಲ್ಲರೂ ಪ್ರಯತ್ನಿಸಬೇಕು. ಈಗ 684ಇರುವ ಸಂಸ್ಥೆಯ ವಿದ್ಯಾರ್ಥಿಗಳ ಸಂಖ್ಯೆ ಮುಂದಿನ ವರ್ಷ ಸಾವಿರದ ಗಡಿ ದಾಟಬೇಕು ಎಂದರು. ಈ ವರ್ಷ ಸರ್ಕಾರದಿಂದ ಸಂಸ್ಥೆಗೆ ಎರಡು ಕೋಟಿ ಅನುದಾನ ಮಂಜೂರಾಗಿದ್ದು ಅದಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯಲ್ಲಿ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದ ಶಾಸಕರು ಜೊತೆಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ ಹತ್ತು ಲಕ್ಷ ರೂಪಾಯಿಗಳ ಅನುದಾನ ಮಂಜೂರು ಮಾಡಲಾಗಿದ್ದು ಸಂಸ್ಥೆಯ ತೀರಾ ಅಗತ್ಯವಿರುವ ಕೆಲಸಗಳಿಗೆ ಬಳಸಲಾಗುವುದು ಎಂದರು. ಪದವಿಪೂರ್ವ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳಿಗೆ ಹೊಸ ವಿಷಯ ಸಂಯೋಜನೆಗಳನ್ನು ಪ್ರಾರಂಭಿಸುವ ಬಗ್ಗೆ ಕಾರ್ಯತತ್ಪರನಾಗುತ್ತೇನೆಂದು ಹೇಳಿದರು. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿಯವರು ನವೀಕರಣಗೊಂಡ ಆಂಗ್ಲಮಾಧ್ಯಮ ತರಗತಿ ಕೋಣೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ತಾಲೂಕು ಪಂಚಾಯತಿ ಸದಸ್ಯೆ ಭವಾನಿ ಚಿದಾನಂದ್, ಕೆಯ್ಯೂರು ಗ್ರಾಮ ಪಂಚಾಯತಿ ಅಧ್ಯಕ್ಷ ಬಾಬು ಬಿ, ಉಪಾಧ್ಯಕ್ಷ ರಾಧಾಕೃಷ್ಣ ಗೌಡ, ಕೆಯ್ಯೂರು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶಶಿಧರ್ ರಾವ್ ಬೊಳಿಕ್ಕಳ, ಪ್ರೌಢಶಾಲಾ ಕಾರ್ಯಾಧ್ಯಕ್ಷ ಎಸ್.ಬಿ. ಜಯರಾಮ ರೈ, ನಾಮನಿರ್ದೇಶಿತ ಸದಸ್ಯ ಮೋಹನ್ ರೈ ಬೇರಿಕೆ, ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪ್ರಫುಲ್ಲಚಂದ್ರ ದಟ್ಟ, ಪ್ರಾಥಮಿಕ ಶಾಲಾ ಮುಖ್ಯಗುರು ಜಯಲತಾ ಉಪಸ್ಥಿತರಿದ್ದರು. ಮೂರೂ ಸಂಸ್ಥೆಗಳ ಎಸ್‌ಡಿಎಂಸಿ ಸದಸ್ಯರು ಮತ್ತು ವಿದ್ಯಾರ್ಥಿಗಳ ಪೋಷಕರು, ಕೆಯ್ಯೂರು ಗ್ರಾಮ ಪಂಚಾಯತಿ ಸದಸ್ಯರು, ಶಿಕ್ಷಕರು ಹಾಗೂ ಉಪನ್ಯಾಸಕರು ಸಭೆಯಲ್ಲಿ ಭಾಗವಹಿಸಿದ್ದರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರಾಂಶುಪಾಲೆ ಗೀತಾ ಬಿ ಸ್ವಾಗತಿಸಿ, ಉಪಪ್ರಾಂಶುಪಾಲ ಕೆ.ಎಸ್.ವಿನೋದ್ ಕುಮಾರ್ ವಂದಿಸಿದರು. ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ವಿಶ್ವೇಶ್ವರ ಭಟ್ ಪಿ ಕಾರ್ಯಕ್ರಮ ನಿರ್ವಹಿಸಿದರು.

ಪೋಷಕರಿಂದ ಬಂದ ಸಲಹೆಗಳು:
ಶಾಲೆಯಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಯೋಗ, ಸಂಗೀತ, ನೃತ್ಯ, ಕರಾಟೆ ಹಾಗೂ ಕಂಪ್ಯೂಟರ್ ನಂತಹ ವಿಶೇಷ ತರಗತಿಗಳನ್ನು ಪ್ರಾರಂಭಿಸಬೇಕು. ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆಯನ್ನು ಸಂಸ್ಥೆಯ ವತಿಯಿಂದ, ದಾನಿಗಳ ವತಿಯಿಂದ ಅಥವಾ ಇಲಾಖೆ ವತಿಯಿಂದ ಒದಗಿಸಿದಲ್ಲಿ ಹೆಚ್ಚು ಅನುಕೂಲವಾಗುತ್ತದೆ.

ಕಾಲೇಜಿನಲ್ಲಿ ಪ್ರಸ್ತುತ ಇರುವ ಉಪನ್ಯಾಸಕರ ಕೊರತೆಯನ್ನು ನೀಗಿಸಬೇಕು ಹಾಗೂ ಸಂಸ್ಥೆ ಈಗ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿರುವುದರಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಹಾಲಿ ಇರುವ ಶಿಕ್ಷಕರನ್ನು ಹೆಚ್ಚುವರಿಯೆಂದು ಪರಿಗಣಿಸಬಾರದು ಎಂದು ಪೋಷಕರು ಕೇಳಿಕೊಂಡರು.

ಶಾಸಕರ ಉತ್ತರ
ಯಾವ್ಯಾವ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆ ಅಗತ್ಯವಿದೆ, ಆಯಾ ಪ್ರದೇಶದ ಎಷ್ಟು ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನವಾಗುತ್ತದೆ ಎಂಬ ಮಾಹಿತಿಯನ್ನು ಎರಡು ದಿನಗಳೊಳಗೆ ಸಂಗ್ರಹಿಸಿ ಕಚೇರಿಗೆ ಸಲ್ಲಿಸುವಂತೆ ಮೂರೂ ವಿಭಾಗಗಳ ಮುಖ್ಯಸ್ಥರಿಗೆ ಸೂಚಿಸಿದರು. ಸಂಗೀತ, ನೃತ್ಯ ಇತ್ಯಾದಿ ವಿಶೇಷ ತರಗತಿಗಳಲ್ಲಿ ಯಾವ ವಿಷಯದ ಬಗ್ಗೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಪರಿಶೀಲಿಸಿ ಆ ವಿಷಯಗಳ ತರಗತಿಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಕಾಲೇಜು ವಿಭಾಗದಲ್ಲಿ ಹಾಲಿ ಇರುವ ಉಪನ್ಯಾಸಕರು ಹಾಗೂ ಅತಿಥಿ ಉಪನ್ಯಾಸಕರನ್ನು ಹೊರತುಪಡಿಸಿ ಬೇರೆ ವಿಷಯಗಳ ಉಪನ್ಯಾಸಕರ ಅಗತ್ಯವಿದ್ದಲ್ಲಿ ಬೇಡಿಕೆ ಸಲ್ಲಿಸಿ ಅದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಬಾರಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳವಾಗಿರುವುದರಿಂದ ಮತ್ತು ಸಂಸ್ಥೆ ಕೆಪಿಎಸ್ ಆಗಿರುವುದರಿಂದ ಹೆಚ್ಚುವರಿ ಶಿಕ್ಷಕರ ಸಮಸ್ಯೆ ಉಂಟಾಗದಂತೆ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಶಾಸಕರು ಪೋಷಕರ ಪ್ರಶ್ನೆಗಳಿಗೆ ಉತ್ತರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.