- ತ್ಯಾಜ ವಿಲೇವಾರಿಗೆ ಸಾರ್ವಜನಿಕ ಸಹಕಾರದ ಕೊರತೆ, ಕ್ರಮ ಅನಿವಾರ್ಯ
- ಚರಂಡಿ ಬಂದ್ ಆಗಿ ರಸ್ತೆ ಮೇಲೆ ನೀರು ಹರಿದಾಡುತ್ತಿದೆ
- ಆರೋಗ್ಯ ಇಲಾಖೆಯವರಿಗೆ ಕಾಳಜಿ ಕಡಿಮೆ ಆಗಿದೆ
- ಕಿಸಾನ್ ಸಮ್ಮಾನ್ ಯೋಜನೆ ಅರ್ಜಿ ಅವಧಿ ಮುಂದೂಡಲು ಕೋರಿಕೆ
ಉಪ್ಪಿನಂಗಡಿ: ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ದಿನೇ ದಿನೇ ಏರಿಕೆಯಾಗುತ್ತಿದೆ, ಅದರ ವಿಲೇವಾರಿಗೆ ಪಂಚಾಯಿತಿ ವ್ಯವಸ್ಥೆಗಳನ್ನು ಮಾಡಿಕೊಂಡಿದೆ ಆದರೆ ಬಹಳಷ್ಟು ಮನೆಯವರು ರಸ್ತೆ ಬದಿಯಲ್ಲಿ, ನದಿ ಬದಿಗೆ ಹೀಗೆ ಎಲ್ಲೆಡೆ ತ್ಯಾಜ್ಯಗಳನ್ನು ಎಸೆಯುವಂತದ್ದು ನಡೆಯುತ್ತಲೇ ಇರುವುದರಿಂದಾಗಿ ಸಾರ್ವಜನಿಕರ ಸಹಕಾರದ ಕೊರತೆಯಿಂದಾಗಿ ಸಮಸ್ಯೆ ತಲೆದೋರಿದೆ, ಇದನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಅನಿವಾರ್ಯವಾಗಿದ್ದು, ಈ ನಿಟ್ಟನಲ್ಲಿ ಬೈಲದಲ್ಲಿ ಅಡಕವಾಗಿರುವಂತೆ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.
ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್ ಅಧ್ಯಕ್ಷತೆಯಲ್ಲಿ ಜೂನ್ 27ರಂದು ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರುಗಳು ಕೆಲ ಸಮಯಗಳಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆ ಸರಿಯಾಗಿ ಇತ್ತು, ಆದರೆ ಇದೀಗ ಮತ್ತೆ ಸಮಸ್ಯೆ ಎದುರಾಗುತ್ತಿದೆ, ಕೆಲವರು ತಮ್ಮ ಮನೆ ಬಾಗಿಲಿಗೆ ತ್ಯಾಜ್ಯ ಸಂಗ್ರಹದ ವಾಹನ ಬಂದರೂ ಅದಕ್ಕೆ ನೀಡದೆ ಎಲ್ಲೆಡೆ ಎಸೆಯುವ ಕೃತ್ಯ ನಡೆಯಲಾರಂಭಿಸಿದೆ, ಕೆಲವರ ಅಸಹಕಾರದಿಂದಾಗಿ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದಿರುತ್ತದೆ ಅಂತಹವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.
ಚರಂಡಿ ಬಂದ್ ಆಗಿ ರಸ್ತೆ ಮೇಲೆ ನೀರು ಹರಿದಾಡುತ್ತಿದೆ:
ಪುಳಿತ್ತಡಿಯಿಂದ ಅಂಬೇಡ್ಕರ್ ಭವನಕ್ಕೆ ಹೋಗುವ ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ಬಂದ್ ಆಗಿದೆ. ಕೆಲವು ಮನೆಯವರು ತಮ್ಮ ಮನೆಗೆ ವಾಹನ ಹೋಗಲೆಂದು ಚರಂಡಿಗೆ ಮಣ್ಣು ಹಾಕಿ ರಸ್ತೆಯಿಂದ ಮನೆಗೆ ಸಂಪರ್ಕ ಕಲ್ಪಿಸಿಕೊಂಡಿದ್ದಾರೆ. ಇದೀಗ ಮಳೆ ನೀರು ಚರಂಡಿಯಲ್ಲಿ ಹರಿಯಲಾರದೆ ರಸ್ತೆ ಮೇಲೆ ಹರಿದಾಡುತ್ತಿದೆ, ನಡೆದುಕೊಂಡು ಹೋಗುವವರು ರಸ್ತೆಯಲ್ಲಿ ಕೆಸರು ನೀರಿನ ಮೇಲೆ ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದ್ದು, ಚರಂಡಿ ದುರಸ್ತಿಗೆ ಕ್ರಮಕೈಗೊಳ್ಳುವಂತೆ ಆಗ್ರಹ ವ್ಯಕ್ತವಾಯಿತು.
ಆರೋಗ್ಯ ಇಲಾಖೆಯವರಿಗೆ ಕಾಳಜಿ ಕಡಿಮೆ ಆಗಿದೆ:
ಮಳೆಗಾಲ ಆರಂಭ ಆಗುತ್ತಿದ್ದಂತೆ ಆರೋಗ್ಯ ಇಲಾಖೆ ಸ್ವಚ್ಚತೆ ಬಗ್ಗೆ ಮತ್ತು ಪರಿಸರದ ಸುತ್ತ ಫಾಗಿಂಗ್ ಮಾಡಿ ರೋಗ ಬರದಂತೆ ಮುಂಜಾಗ್ರತಾ ಕ್ರಮ ಅನುಸರಿಸುತ್ತಾರೆ. ಆದರೆ ಈ ಬಾರಿ ಆರೋಗ್ಯ ಇಲಾಖೆಯವರಿಗೆ ಆರೋಗ್ಯ ಕಾಳಜಿ ಇದ್ದಂತೆ ಕಾಣುತ್ತಿಲ್ಲ, ಕಡಬ ಪರಿಸರದಲ್ಲಿ ಶಂಕಿತ ಡೆಂಗ್ಯೂ ಜ್ವರ ಇದ್ದು, ಉಪ್ಪಿನಂಗಡಿ ಪರಿಸರದಲ್ಲಿ ಅಂತಹ ಸಮಸ್ಯೆ ಕಾಡುವ ಮುನ್ನ ಆರೋಗ್ಯ ಇಲಾಖೆಯವರಿಗೆ ಸೂಚನೆ ನೀಡುವ ಬಗ್ಗೆ ಸದಸ್ಯರು ಸಭೆಯ ಗಮನಕ್ಕೆ ತಂದರು.
ಕಿಸಾನ್ ಸಮ್ಮಾನ್ ಯೋಜನೆ ಅವಧಿ ಮುಂದೂಡಲು ಕೋರಿಕೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿಗಳು ಅರ್ಜಿ ಸಲ್ಲಿಸಲು ಕೆಲ ದಿನಗಳು ಮಾತ್ರ ಬಾಕಿ ಇದ್ದು, ಆದರೆ ರೈತರು ಅರ್ಜಿ ಸಲ್ಲಿಸಲು ತೀರಾ ಸಮಸ್ಯೆ ಎದುರಿಸುವಂತಾಗಿದೆ, ಆಧಾರ್ ಕಾರ್ಡು ಮತ್ತು ಅರ್ಜಿ ಸಲ್ಲಿಸಲು ಸೈಬರ್ಗೆ ಹೋದರೆ ಅಲ್ಲಿ ಸರ್ವರ್ ಸರಿ ಇಲ್ಲ ಮೊದಲಾದ ಕಾರಣಗಳಿಂದಾಗಿ ಫಲಾನುಭವಿಗಳು ಸೂಚಿಸಿದ
ದಿನಗಳ ಒಳಗಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ, ಆದ ಕಾರಣ ಇದರ ಅರ್ಜಿ ಸಲ್ಲಿಕೆ ಅವಧಿಯನ್ನು ಜುಲೈ ಕೊನೆ ತನಕ ಮುಂದೂಡಬೇಕು ಎಂದು ಸರ್ಕಾರವನ್ನು ಕೋರಿ ನಿರ್ಣಯ ಅಂಗೀಕರಿಸಲಾಯಿತು.
ಸಭೆಯಲ್ಲಿ ಪಂಚಾಯಿತಿ ಸದಸ್ಯರುಗಳಾದ ಸುರೇಶ್ ಅತ್ರಮಜಲು, ಚಂದ್ರಶೇಖರ ಮಡಿವಾಳ, ಯು.ಟಿ. ತೌಶೀಫ್, ಗೋಪಾಲ ಹೆಗ್ಡೆ, ಸುನಿಲ್ ದಡ್ಡು, ರಮೇಶ್ ಬಂಡಾರಿ, ಯು.ಕೆ. ಇಬ್ರಾಹಿಂ ಮಾತನಾಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಹೇಮಲತಾ ಶೆಟ್ಟಿ, ಸದಸ್ಯರುಗಳಾದ ಉಮೇಶ್ ಗೌಡ, ಝರೀನ ಇಕ್ಬಾಲ್, ಚಂದ್ರಾವತಿ ಹೆಗ್ಡೆ, ಸುಂದರಿ, ಕವಿತಾ, ಚಂದ್ರಾವತಿ, ಭಾರತಿ, ಯೋಗಿನಿ, ಜಮೀಳ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾಧವ ಸ್ವಾಗತಿಸಿ, ಕಾರ್ಯದರ್ಶಿ ಮರಿಯಮ್ಮ ವಂದಿಸಿದರು.