- ಬೇಡಿಕೆ ಈಡೇರಿಕೆಗೆ 10 ದಿನಗಳ ಗಡುವು ನೀಡಿದ ಗ್ರಾಮಸ್ಥರು
- ತಪ್ಪಿದ್ದಲ್ಲಿ ಫೋನ್ ಕಾಲ್ ಅಭಿಯಾನ, ಗ್ರಾ.ಪಂ.ಗೆ ಬೀಗ ಜಡಿಯುವ ಎಚ್ಚರಿಕೆ
ಉಪ್ಪಿನಂಗಡಿ: ೩೪ನೇ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಚರಂಡಿ ಹಾಗೂ ದಾರಿ ದೀಪ ಕಾಮಗಾರಿ ಶೀಘ್ರವಾಗಿ ನಡೆಸಬೇಕು ಎಂದು ನಮ್ಮೂರು- ನೆಕ್ಕಿಲಾಡಿ ಸಂಘಟನೆಯು ಗ್ರಾಮಸ್ಥರನ್ನು ಕ್ರೂಢೀಕರಿಸಿಕೊಂಡು ಗುರುವಾರ ಪ್ರತಿಭಟನೆ ನಡೆಸಿದ್ದು, ಕಾಮಗಾರಿ ನಡೆಸಲು ನಿರ್ಲಕ್ಷ್ಯ ವಹಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಂದ `ಫೋನ್ ಕಾಲ್ ಅಭಿಯಾನ’ ಹಾಗೂ ಪಂಚಾಯತ್ಗೆ ಬೀಗ ಜಡಿಯುವಂತಹ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಸಿದೆ.
೩೪ನೇ ನೆಕ್ಕಿಲಾಡಿ ಗ್ರಾ.ಪಂ. ಕಚೇರಿಯ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ನಮ್ಮೂರು- ನೆಕ್ಕಿಲಾಡಿ ಅಧ್ಯಕ್ಷ ಅಬ್ದುರ್ರಹ್ಮಾನ್ ಯುನಿಕ್, ಪಂಚಾಯತ್ ರಾಜ್ ಕಾಯ್ದೆಯಲ್ಲಿ ಪಂಚಾಯತ್ಗಳು ಮಾಡಬೇಕಾದ ಕರ್ತವ್ಯಗಳನ್ನು ೩೪ನೇ ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಗಾಳಿಗೆ ತೂರಲಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ಇಲ್ಲಿ ಅನುಷ್ಠಾನವಾಗುತ್ತಿಲ್ಲ. ಮಳೆಗಾಲ ಆರಂಭವಾದರೂ ಪಂಚಾಯತ್ ವ್ಯಾಪ್ತಿಯಲ್ಲಿ ಚರಂಡಿ ನಿರ್ಮಾಣವೂ ಆಗಿಲ್ಲ. ಚರಂಡಿ ನಿರ್ವಹಣೆಯೂ ಆಗಿಲ್ಲ. ಇದರಿಂದ ಮಳೆನೀರು ಎಲ್ಲೆಂದರಲ್ಲಿ ಹರಿದು ಹೋಗುತ್ತಿದ್ದು, ಜನಸಾಮಾನ್ಯರಿಗೆ ಸಮಸ್ಯೆಯಾಗುವಂತಾಗಿದೆ. ಅಲ್ಲದೇ, ಪಂಚಾಯತ್ ವ್ಯಾಪ್ತಿಯಲ್ಲಿ ಶೇ. ೯೦ರಷ್ಟು ಬೀದಿ ದೀಪಗಳು ಉರಿಯದೇ ವರ್ಷವಾದರೂ ಇದರ ದುರಸ್ತಿಗೆ ಗ್ರಾ.ಪಂ. ಮುಂದಾಗದೆ ನಿರ್ಲಕ್ಷ್ಯ ವಹಿಸಿದೆ. ಮುಂದಿನ ೧೦ ದಿನಗಳೊಳಗೆ ಈ ಕಾಮಗಾರಿಗಳನ್ನು ನಡೆಸಲು ಗ್ರಾ.ಪಂ. ಮುಂದಾಗದಿದ್ದಲ್ಲಿ ಚರಂಡಿ ಹಾಗೂ ದಾರಿದೀಪ ಕಾಮಗಾರಿಯನ್ನು ಶೀಘ್ರವಾಗಿ ನಡೆಸುವಂತೆ ಒತ್ತಾಯಿಸಿ ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪಂಚಾಯತ್ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ನಿರಂತರವಾಗಿ ಗ್ರಾಮಸ್ಥರು ಕರೆ ಮಾಡಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸುವ ಮೂಲಕ `ಫೋನ್ ಕಾಲ್ ಅಭಿಯಾನ’ವನ್ನು ನಡೆಸಲಿದ್ದೇವೆ. ಬಳಿಕವೂ ಸ್ಪಂದನೆ ಸಿಗದಿದ್ದಲ್ಲಿ ಪಂಚಾಯತ್ಗೆ ಬೀಗ ಜಡಿದು ಉಗ್ರ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಎಸ್ಡಿಪಿಐ ಉಪ್ಪಿನಂಗಡಿ ವಲಯಾಧ್ಯಕ್ಷ ಅಬ್ದುರ್ರಝಾಕ್ ಸೀಮಾ ಮಾತನಾಡಿ, ೩೪ನೇ ನೆಕ್ಕಿಲಾಡಿ ಗ್ರಾ.ಪಂ.ಗೆ ಜನರು ಆಯ್ಕೆ ಮಾಡಿ ಕಳುಹಿಸಿದ ಜನಪ್ರತಿನಿಧಿಗಳು ಗ್ರಾಮದ ಅಭಿವೃದ್ಧಿಯನ್ನು ಮರೆತಿದ್ದಾರೆ. ಇಲ್ಲಿ ಜನಸಾಮಾನ್ಯರ ದುಡ್ಡು ದುರುಪಯೋಗವಾಗುತ್ತಿದೆಯೇ ಹೊರತು ಯಾವುದೇ ಅಭಿವೃದ್ಧಿಯ ಕಾರ್ಯಗಳಾಗುತ್ತಿಲ್ಲ. ಪಂಚಾಯತ್ನೊಳಗೆ ಅಧಿಕಾರಿಗಳು ಹಾಗೂ ಸದಸ್ಯರು ಹೊಂದಾಣಿಕೆ ಮಾಡಿಕೊಂಡು ಲಂಚವತಾರವನ್ನು ಸೃಷ್ಟಿ ಮಾಡಿದ್ದಾರೆ. ಇವರ ಈ ನಡೆ ಗ್ರಾಮಕ್ಕೆ ಕಳಂಕ ಎಂದರಲ್ಲದೆ, ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯದ ನಿರ್ವಹಣೆ ಹಾಗೂ ವಿಲೇವಾರಿ ಸಮರ್ಪಕವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಹಿಂದೆ ಎಸ್ಡಿಪಿಐ ಪಕ್ಷವು ಕಸ ವಿಲೇವಾರಿಗೆ ಸಹಕಾರ ನೀಡುವುದಾಗಿ ಗ್ರಾ.ಪಂ.ಗೆ ತಿಳಿಸಿತ್ತಲ್ಲದೆ, ವಾರದಲ್ಲಿ ಎರಡು ದಿನ ತ್ಯಾಜ್ಯ ವಿಲೇವಾರಿಗೆ ಪಿಕಾಫ್ ವಾಹನ ಹಾಗೂ ಇಬ್ಬರು ಜನರನ್ನು ನಮ್ಮ ಲೆಕ್ಕದಲ್ಲಿ ಕೆಲಸಕ್ಕೆ ಕೊಡುತ್ತೇವೆಂದು ತಿಳಿಸಿದ್ದೆವು. ಆದರೆ ಈವರೆಗೂ ಇದಕ್ಕೆ ಗ್ರಾ.ಪಂ. ಆಸಕ್ತಿ ತೋರಿಲ್ಲ. ಗ್ರಾಮಸ್ಥರೇ ಸಹಕಾರಕ್ಕೆ ಮುಂದಾದಾಗ ಅದನ್ನು ಗ್ರಾಮ ಪಂಚಾಯತ್ನವರು ಕಡೆಗಣಿಸುತ್ತಿದ್ದಾರೆ ಎಂದಾದರೆ ಅವರಿಗೆ ಎಷ್ಟು ಗ್ರಾಮಾಭಿವೃದ್ಧಿಯಲ್ಲಿ ಎಷ್ಟು ಆಸಕ್ತಿ ಇದೆ ಎಂಬುದನ್ನು ನಾವೆಲ್ಲಾ ಅರಿತುಕೊಳ್ಳಬೇಕು ಎಂದರು.
ನಮ್ಮೂರು- ನೆಕ್ಕಿಲಾಡಿಯ ನಿಕಟಪೂರ್ವಾಧ್ಯಕ್ಷ ಎ. ಜತೀಂದ್ರ ಶೆಟ್ಟಿ ಮಾತನಾಡಿ, ನಾವು ಗ್ರಾ.ಪಂ.ಗೆ ಪ್ರತಿನಿಧಿಗಳನ್ನು ಆರಿಸಿ ಕಳುಹಿಸುವುದು ಅಲ್ಲಿ ಕೂತು ಕಾಲಹರಣ ಮಾಡಲಲ್ಲ. ಗ್ರಾಮದ ಅಭಿವೃದ್ಧಿ ಬಗ್ಗೆ ಯೋಜನೆಗಳನ್ನು ರೂಪಿಸಿ, ಅನುಷ್ಠಾನಿಸುವ ಮೂಲಕ ಜನರ ಸೇವೆ ಮಾಡಲು. ಈ ಕೆಲಸ ನಿಮ್ಮಿಂದ ಆಗದಿದ್ದರೆ ಸದಸ್ಯರು ರಾಜೀನಾಮೆ ಕೊಟ್ಟು ಹೊರನಡೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ನ ಸುಭಾಷ್ನಗರ ಬೂತ್ ಅಧ್ಯಕ್ಷ ಶಾಹುಲ್ ಹಮೀದ್ ಮಾತನಾಡಿ, ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳನ್ನು ನಡೆಸುವಲ್ಲಿ ನಿರ್ಲಕ್ಷ್ಯ ತೋರಿದರೆ, ಅವರನ್ನು ಕೆಲಸ ಮಾಡಿಸುವಲ್ಲಿ ಸದಸ್ಯರೂ ಉದಾಸೀನತೆ ತೋರಿದ್ದಾರೆ. ಇದರಿಂದಾಗಿ ೩೪ನೇ ನೆಕ್ಕಿಲಾಡಿ ಗ್ರಾ.ಪಂ.ಗೆ ಕತ್ತಲು ಕವಿದಿದೆ. ಗ್ರಾಮದ ಅಭಿವೃದ್ಧಿ ನಿರ್ಲಕ್ಷ್ಯಿಸಿದ ಇವರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದೇವೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ದ.ಕ. ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ್ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ೩೪ ನೆಕ್ಕಿಲಾಡಿ ಗ್ರಾ.ಪಂ. ಕೊನೆಯ ಸಾಲಿನಲ್ಲಿದೆ. ಇದು ನಮ್ಮ ಗ್ರಾಮಕ್ಕೆ ನಾಚಿಕೆಗೇಡಿನ ಸಂಗತಿ. ಇಲ್ಲಿ ಅಧಿಕಾರಿಗಳು ಸದಸ್ಯರೊಂದಿಗೆ ಶಾಮೀಲಾಗಿ ಪ್ರತಿಯೊಂದು ವಿಷಯದಲ್ಲೂ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ. ಇಂತಹ ಜಡತ್ವದ ಗ್ರಾ.ಪಂ. ನಮಗೆ ಅಗತ್ಯವಿಲ್ಲ. ಇದಕ್ಕೆ ಬೀಗ ಜಡಿದು ೩೪ನೇ ನೆಕ್ಕಿಲಾಡಿ ಗ್ರಾ.ಪಂ. ಅನ್ನು ಉಪ್ಪಿನಂಗಡಿಯೊಂದಿಗೆ ವಿಲೀನಗೊಳಿಸಿ ಪಟ್ಟಣ ಪಂಚಾಯತ್ ಮಾಡುವ. ಆಗಲಾದರೂ ನಮ್ಮ ಗ್ರಾಮ ಅಭಿವೃದ್ಧಿಯನ್ನು ಕಾಣಬಹುದು ಎಂದು ತಿಳಿಸಿದರು.
ನಮ್ಮೂರು- ನೆಕ್ಕಿಲಾಡಿಯ ಜೊತೆ ಕಾರ್ಯದರ್ಶಿ ಅಝೀಝ್ ಪಿ.ಟಿ. ಮಾತನಾಡಿ, ಪ್ರತಿಭಟನೆ ಮೂಲಕ ಅಭಿವೃದ್ಧಿ ಕೆಲಸಗಳನ್ನು ತರಬೇಕಾದ ದುಸ್ಥಿತಿ ನೆಕ್ಕಿಲಾಡಿ ಗ್ರಾ.ಪಂ.ಗೆ ಬಂದಿದ್ದು, ಗ್ರಾಮಸ್ಥರ ದುರಂತ. ಜನರ ಸಮಸ್ಯೆಗಳನ್ನು ನಿರ್ಲಕ್ಷ್ಯಿಸುವ ಗ್ರಾ.ಪಂ. ಇದ್ದೇನು ಸುಖ ಎಂದು ಪ್ರಶ್ನಿಸಿದರು.
ಜೇಸಿಐ ನೆಕ್ಕಿಲಾಡಿ ಘಟಕದ ಅಧ್ಯಕ್ಷ ವಿನೀತ್ ಶಗ್ರಿತ್ತಾಯ ಮಾತನಾಡಿ, ಗ್ರಾ.ಪಂ. ಕಚೇರಿ ಮುಂದುಗಡೆನೇ ಇದ್ದ ಹಳೆ ಸೇತುವೆ ರಸ್ತೆಯನ್ನು ಖಾಸಗಿ ವ್ಯಕ್ತಿಗಳು ಮಣ್ಣು ಹಾಕಿ ಮುಚ್ಚಿದ್ದಾರೆ. ಇದರಿಂದ ಗ್ರಾ.ಪಂ. ಕಚೇರಿಗೆ ಬರುವ ದಾರಿಯಲ್ಲೇ ಸಂಚಾರಕ್ಕೆ ಕಷ್ಟಸಾಧ್ಯವಾಗಿದೆ. ಈ ಮಾರ್ಗದಿಂದ ಹೋಗುತ್ತಿದ್ದ ಶಾಲಾ ಮಕ್ಕಳಿಗೂ ತೊಂದರೆಯಾಗಿದೆ. ಆದರೂ ಈ ಬಗ್ಗೆ ಗ್ರಾ.ಪಂ. ಚಕಾರವೆತ್ತದೆ ಮೌನವಾಗಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿರುವ ರಸ್ತೆಗೆ ಖಾಸಗಿ ವ್ಯಕ್ತಿಗಳು ಮಣ್ಣು ತುಂಬಿಸಿ ಮೂಲ ರಸ್ತೆಯನ್ನು ಮುಚ್ಚಿದರೂ ಈ ಬಗ್ಗೆ ಪಂಚಾಯತ್ ಮೌನವಾಗಿರುವುದರ ಹಿಂದಿನ ಮರ್ಮವೇನು ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ನಮ್ಮೂರು- ನೆಕ್ಕಿಲಾಡಿಯ ಖಲಂದರ್ ಶಾಫಿ, ಯೂಸುಫ್ ಬೇರಿಕೆ, ಗ್ರಾಮಸ್ಥರಾದ ಶರೀಫ್ ಕರ್ವೇಲು, ಪವಾಝ್ ಬೊಳ್ಳಾರ್, ಉಸ್ಮಾನ್ ಯು.ಕೆ. ಕೊಡಿಪ್ಪಾಡಿ, ಸಲೀಂ ಕೊಡಿಪ್ಪಾಡಿ, ಖೈರುನ್ನಿಸಾ ಯುನಿಕ್, ಸುಮಯ್ಯ, ಕಮರು ನೆಕ್ಕಿಲಾಡಿ, ಫಯಾಝ್ ನೆಕ್ಕಿಲಾಡಿ ಹಾಗೂ ಎಸ್ಡಿಪಿಐ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.