ಪುತ್ತೂರು: ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಮಾರ್ಗ ಬದಿಯಲ್ಲೋ, ಅಂಗಡಿ ಮುಂದೆಯೂ, ಬಿಸಿಲಲ್ಲೋ, ಮಳೆಯಲ್ಲೋ ನಿಲ್ಲುವುದನ್ನು ತಪ್ಪಿಸಲು ಅಲ್ಲಲ್ಲಿ ಬಸ್ಸು ತಂಗುದಾಣ ನಿರ್ಮಿಸಲಾಗುತ್ತದೆ. ಆದರೆ ಇಲ್ಲೊಂದು ಬಸ್ಸು ತಂಗುದಾಣ ಸಂಪೂರ್ಣ ಕೆಸರುಮಯವಾಗಿ ಪ್ರಯಾಣಿಕರು ಒಳಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಟ್ಟಂಪಾಡಿ ಗ್ರಾಮದ ರೆಂಜ ಜಂಕ್ಷನ್ ಅತ್ತ ಸುಳ್ಯಪದವು ರಸ್ತೆ ಮತ್ತು ಪಾಣಾಜೆ ರಸ್ತೆಯನ್ನು ವಿಭಜಿಸಲ್ಪಟ್ಟು ಇಲ್ಲಿ ನಿತ್ಯ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿರುತ್ತಾರೆ. ಬೇಸಿಗೆಗಾಲದಲ್ಲಿ ಪ್ರಯಾಣಿಕರಿಗೆ ಉಪಯೋಗವಾಗಿದ್ದ ಇಲ್ಲಿನ ತಂಗುದಾಣ ಮಳೆಗಾಲ ಆರಂಭವಾಗುತ್ತಿದ್ದಂತೆ ಕೆಸರು, ಕಸ ಕಡ್ಡಿಗಳ ತಂಗುದಾಣವಾಗಿ ಪರಿಣಮಿಸಿದೆ.
ಏನು ಕಾರಣ..?
ಬಸ್ಸು ತಂಗುದಾಣ ಮತ್ತು ಸಾರ್ವಜನಿಕ ಶೌಚಾಲಯದ ಮಧ್ಯೆ ನೀರು ಹರಿದು ಹೋಗಲು ಜಾಗವಿತ್ತು. ಈ ಕಟ್ಟಡಗಳ ಹಿಂಬದಿ ಪ್ರದೇಶ ಖಾಸಗಿ ಒಡೆತನದಲ್ಲಿದ್ದು, ಅವರು ನೀರು ಹರಿದು ಹೋಗದಂತೆ ಅವರ ಜಮೀನಿನಲ್ಲಿ ತಡೆ ನಿರ್ಮಿಸಿದ್ದಾರೆ. ಇದ್ದ ಒಂದು ಇಳಿಜಾರು ತಡೆಯುಂಟಾದ ಹಿನ್ನೆಲೆಯಲ್ಲಿ ಕೆಸರು ತುಂಬಿದ ನೀರು ಬಸ್ಸು ತಂಗುದಾಣದೊಳಗೆ ಪ್ರವೇಶಿಸಿದೆ. ಇದರಿಂದಾಗಿ ತಂಗುದಾಣ ಕೆಸರು ತ್ಯಾಜ್ಯಗಳಿಂದ ತುಂಬಿ ಹೋಗಿದೆ.
ಸ್ವಚ್ಛತೆಯ ಬೋರ್ಡ್
ಈ ಬಸ್ಸು ತಂಗುದಾಣದ ಒಳಗೆ ಹೊರಗೆ ಗೋಡೆಗಳಲ್ಲಿ ಸ್ವಚ್ಛತೆಯ ಸ್ಲೋಗನ್ಗಳನ್ನು ಬರೆಯಲಾಗಿದೆ. `ಸ್ವಚ್ಛತೆಯೆಡೆಗೆ ನಮ್ಮ ನಡೆ’ ಎಂದು ಬರೆದಿದ್ದರೂ, ಕೊನೇ ಪಕ್ಷ ಬಸ್ಸು ತಂಗುದಾಣದ ಒಳಗಾದರೂ ನಡೆಯಲು ಸಾಧ್ಯವಿರುತ್ತಿದ್ದರೆ ಸ್ಲೋಗನ್ ಬರೆದಿರುವುದಕ್ಕೆ ಸಾರ್ಥಕವಾಗುತ್ತಿತ್ತು. ಇದರ ಪಕ್ಕದಲ್ಲಿಯೇ ಕಸದಬುಟ್ಟಿಯನ್ನೂ ಇರಿಸಲಾಗಿದ್ದು, ಅದು ತುಂಬಿ ತುಳುಕಿ ರಸ್ತೆ ಬದಿಯಲ್ಲಿ ತ್ಯಾಜ್ಯಗಳು ಎಸೆಯಲ್ಪಟ್ಟಿವೆ. ಇಡೀ ಗ್ರಾಮವನ್ನು ಸ್ವಚ್ಛವಾಗಿರಿಸುವ ಸಂಕಲ್ಪ ಮಾಡಬೇಕಾದ ಈ ಸಂದರ್ಭದಲ್ಲಿ ಕೊನೇ ಪಕ್ಷ ಸಾರ್ವಜನಿಕ ಪ್ರದೇಶಗಳಲ್ಲಿಯಾದರೂ ಬರೀ ಸ್ಲೋಗನ್ಗಳಿಗೆ ಸೀಮಿತವಾಗದೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಎಲ್ಲರಲ್ಲೂ ಇದೆ ಎಂಬುದನ್ನು ಇಲ್ಲಿ ಮತ್ತೊಮ್ಮೆ ನೆನಪಿಸಿಕೊಳ್ಳಬೇಕಾಗಿದೆ.
ಉಪಯುಕ್ತವನ್ನಾಗಿ ಮಾಡಿ..
ಮಳೆಗಾಲದಲ್ಲಿ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗುವ ಈ ಬಸ್ಸು ತಂಗುದಾಣವನ್ನು ಮತ್ತೆ ಸಾರ್ವಜನಿಕ ಉಪಯೋಗಕ್ಕೆ ಬರುವಂತೆ ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.