ಪುತ್ತೂರು: ಗ್ರಾ.ಪಂ. ಸದಸ್ಯರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಆರ್ಯಾಪು ಗ್ರಾ.ಪಂ ಪಿಡಿಓ ಜಗದೀಶ್ರವರನ್ನು ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾ.ಪಂಗೆ ವರ್ಗಾವಣೆಗೊಳಿಸಲಾಗಿದೆ.
ಕೆಲವು ಸಮಯಗಳ ಹಿಂದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರಿಯ ಎಂಬಲ್ಲಿ ಒಂದು ಬಾರಿ ನೀಡಿದ ಕಟ್ಟಡ ಪರವಾನಿಗೆಯನ್ನು ಆ ಭಾಗದ ಸದಸ್ಯರ ಗಮನಕ್ಕೆ ತಾರದೇ ರದ್ದುಗೊಳಿಸಿದ್ದ ಬಗ್ಗೆ ಸದಸ್ಯರು ಪಿಡಿಓರವರಲ್ಲಿ ವಿಚಾರಿಸಿದಾಗ ರದ್ದುಗೊಳಿಸುವಂತೆ ಒತ್ತಡ ಇದ್ದ ಕಾರಣ ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿ ಪಂಚಾಯತ್ನ ವಿಶೇಷ ಗ್ರಾಮ ಸಭೆಯಲ್ಲಿ ಸದಸ್ಯರು ಹಾಗೂ ಪಿಡಿಓ ಮಧ್ಯೆ ತೀವ್ರ ವಾಗ್ವಾದ ನಡೆದಿತ್ತು. ಕಾನೂನು ಪ್ರಕಾರ ಒಂದು ಬಾರಿ ನೀಡಿದ ಕಟ್ಟಡ ಪರವಾನಿಗೆಯನ್ನು ರದ್ದುಗೊಳಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿ ಪಿಡಿಓ ಜಗದೀಶ್ರವರ ಕಾರ್ಯವೈಖರಿ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಸದಸ್ಯ ರಮೇಶ್ ರೈ ಡಿಂಬ್ರಿ ತಿಳಿಸಿದ್ದರು. ಅಲ್ಲದೆ ಆ ವಾರ್ಡ್ನ ನಾಲ್ವರ ಸದಸ್ಯರು ತಮ್ಮ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದರು.
ಇದೇ ವಿಚಾರಕ್ಕೆ ಸಂಬಂಧಿಸಿ ರಮೇಶ್ ರೈಯವರು ಪಿಡಿಓ ಜಗದೀಶ್ ವಿರುದ್ಧ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದ್ದರು. ಬಳಿಕ ಗ್ರಾಮೀಣಾಭಿವೃದ್ಧಿ ಇಲಾSಗೂ ರಮೇಶ್ ರೈಯವರು ದೂರು ನೀಡಿದ್ದರು. ಇದೀಗ ಜಗದೀಶ್ರವರನ್ನು ವರ್ಗಾವಣೆಗೊಳಿಸುವಂತೆ ಜಿ.ಪಂಗೆ ಆದೇಶಿಸಿದೆ. ಸರಕಾರದ ಆದೇಶದಂತೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪಿಡಿಓ ಜಗದೀಶ್ರವರನ್ನು ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾ.ಪಂಗೆ ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ. ಅರಿಯಡ್ಕ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯಾಗಿರುವ ಪದ್ಮಾ ಕುಮಾರಿಯವರಿಗೆ ಅರ್ಯಾಪು ಗ್ರಾ.ಪಂ.ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಜವಾಬ್ದಾರಿ ವಹಿಸಲಾಗಿದೆ.