ಉಪ್ಪಿನಂಗಡಿ: ಯಕ್ಷಗಾನವು ಮಾನವನ ಬುದ್ಧಿಭಾವನೆಗಳನ್ನು ಅರಳಿಸುವ ಕಲೆಯಾಗಿದೆ. ಇಲ್ಲಿ ಸೃಜನಶಿಲತೆಗೆ ವಿಪುಲ ಅವಕಾಶವಿದೆ. ಆದ್ದರಿಂದ ಆರೋಗ್ಯ ಪೂರ್ಣ ಬದುಕಿಗೆ ಯಕ್ಷಗಾನ ಪೂರಕ ಎಂದು ಯಕ್ಷಗಾನ ಕಲಾವಿದ, ನಾಟ್ಯಗುರು ಎಡಮಂಗಲ ಲಕ್ಷ್ಮಣ ಆಚಾರ್ಯ ಹೇಳಿದರು. ಅವರು ಕಾಂಚನ ಪ್ರೌಢಶಾಲೆಯಲ್ಲಿ ಯಕ್ಷನಂದನ ಕಲಾಸಂಘ ಗೋಕುಲನಗರ ಇವರು ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಕತ್ವದಲ್ಲಿ ನಡೆಸುತ್ತಿರುವ ನಾಟ್ಯ ತರಬೇತಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ಮುರಳಿಕೃಷ್ಣ ಬಡಿಲ ಮಾತನಾಡಿ, ಸಂಘದ ವತಿಯಿಂದ ಪರಿಸರದ ವಿವಿಧೆಡೆಗಳಲ್ಲಿ ಯಕ್ಷಗಾನ ನಾಟ್ಯ ತರಬೇತಿಗಳನ್ನು ನಡೆಸುವ ಮೂಲಕ ಹೊಸ ತಲೆಮಾರಿನಲ್ಲಿ ಸದಭಿರುಚಿಯ ಕಲಾವಿದರನ್ನು ಸಿದ್ಧಗೊಳಿಸುವ ಕಾರ್ಯ ಕಳೆದ ಹದಿನೈದು ವರ್ಷಗಳಿಂದ ನಡೆಯುತ್ತಿದೆ. ಪೋಷಕರ ಪ್ರೋತ್ಸಾಹವೂ ಗಣನೀಯವಾಗಿ ಹೆಚ್ಚಿದೆ ಎಂದರು. ಕಲಾಪೋಷಕ, ಮೃದಂಗ ವಿದ್ವಾನ್ ಕಾಂಚನ ವಸಂತ ಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಹರಿಕಿರಣ್ ಕೊಯಿಲ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಭಾಸ್ಕರ ಬಟ್ಟೋಡಿ ವಂದಿಸಿದರು. ಗೌರವಾಧ್ಯಕ್ಷ ಗಣರಾಜ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.