ಪುತ್ತೂರು: ಪುತ್ತೂರು ನಗರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 13 ಮಂದಿ ಸಿಬಂದಿಗಳಿಗೆ ಟೆಂಡರ್ ಅವಧಿಯ ಕೊನೆಗೊಂಡ ಹಿನ್ನೆಲೆಯಲ್ಲಿ ವೇತನ ಪಾವತಿಯಾಗದ ಮತ್ತು ಮುಂದೆ ಕೆಲಸಕ್ಕೆ ತೊಂದರೆ ಆಗಿರುವ ಘಟನೆ ನಡೆದಿದ್ದು, ಸಿಬಂದಿಗಳು ಜೂ. 28ರಂದು ಶಾಸಕ ಸಂಜೀವ ಮಠಂದೂರು ಅವರಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನಾವು ೧೩ ಮಂದಿ ಪುತ್ತೂರು ನಗರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸುಮಾರು ೧೦ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಹೊರಗುತ್ತಿಗೆ ಪದ್ಧತಿಯು ಟೆಂಡರ್ ಮೂಲಕ ನಡೆಯುತ್ತಿದ್ದು, ಪ್ರಸ್ತುತ ಕರೆದಿರುವ ಟೆಂಡರ್ ನ ಅವಧಿ ಕಳೆದ ಫೆ.2019ರಲ್ಲಿ ಕೊನೆಗೊಂಡಿದೆ. ಈ ನಿಟ್ಟಿನಲ್ಲಿ ಹೊಸದಾಗಿ ಟೆಂಡರ್ ಕರೆಯಲು ಬೆಂಗಳೂರಿನಲ್ಲಿರುವ ಪೌರಾಡಳಿತ ನಿರ್ದೇಶನಾಲಯಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಪ್ರಸ್ತಾವನೆ ಅನುಮೋದನೆಯಾಗಿ ಬರುವ ತನಕ ಅವಧಿ ಮುಗಿದ ಟೆಂಡರನ್ನು ಮುಂದುವರೆಸಲು ಜಿಲ್ಲಾಧಿಕಾರಿಗೂ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ ಜಿಲ್ಲಾಧಿಕಾರಿಯವರ ಕಚೇರಿಯಿಂದ ಈ ಕುರಿತು ಯಾವುದೇ ವರದಿ ಬಂದಿಲ್ಲ. ಇದರಿಂದಾಗಿ ಟೆಂಡರಿನಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬಂದಿಗಳಾದ ನಮಗೆ ಮಾ. ೨೦೧೯ ರಿಂದ ಈ ತನಕ ವೇತನ ಪಾವತಿಯಾಗಿಲ್ಲ. ಇದೀಗ ವೇತನವಿಲ್ಲದೆ ಜೀವನ ನಿರ್ವಹಣೆಗೆ ದಿಕ್ಕೇ ತೋಚದಂತಾಗಿದೆ. ಆದ್ದರಿಂದ ತಾವು ದಯವಿಟ್ಟು ಈ ಕುರಿತು ಗಮನಹರಿಸಿ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಚರ್ಚಿಸಿ, ನಮ್ಮ ಸಮಸ್ಯೆಗೆ ಪರಿಹಾರ ನೀಡಬೇಕಾಗಿ ಮನವಿಯಲ್ಲಿ ತಿಳಿಸಿದ್ದಾರೆ. ಹೊರಗುತ್ತಿಗೆದಾರರ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಭಾಗಿರಥಿ, ಶಿಲ್ಪಾ ಎಂ, ವಾಣಿ ಪಿ, ಅನುರಾಧಾ, ಸುಶೀಲಾ, ಗೀತಾ, ದಿವ್ಯ, ಸುಷ್ಮಾ, ನಾಗೇಶ್, ಅಣ್ಣು, ಅಶ್ವಿನಿ, ಮೇಘ, ಮಲ್ಲಿಕಾ ಮನವಿ ನೀಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.