ಪುತ್ತೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್, ತಾಲೂಕು ಪಂಚಾಯತ್ ಇವುಗಳ ಸಹಕಾರದೊಂದಿಗೆ ಅರಿಯಡ್ಕ ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಛ ಮೇವ ಜಯತೆ ಆಂದೋಲನದ ಅಂಗವಾಗಿ ಜೂ.28 ರಂದು ರಸ್ತೆ ಬದಿಗಳಲ್ಲಿ ಸ್ವಚ್ಛತೆ ಮಾಡುವ ಮೂಲಕ ಆಚರಿಸಲಾಯಿತು. ಕುಂಬ್ರ ಬೆಳ್ಳಾರೆ ರಸ್ತೆಯಲ್ಲಿ ಕೊಲ್ಲಾಜೆಯಿಂದ ತ್ಯಾಗರಾಜನಗರದ ತನಕ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಹಾಕಲಾಗಿದ್ದ ಕಸಕಡ್ಡಿಗಳನ್ನು ತೆರವುಗೊಳಿಸುವ ಮೂಲಕ ಸ್ವಚ್ಛತೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸತೀಶ್ ರೈ ಅಮೈ ಎಂಬವರ ಮನೆಯಲ್ಲಿ ಅಳವಡಿಸಲಾಗಿರುವ ಮಳೆಕೊಯ್ಲು ಪದ್ಧತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಸವಿತಾ ಎಸ್, ಕಾರ್ಯದರ್ಶಿ ಕೃಷ್ಣರಾಜ್, ಸದಸ್ಯರುಗಳಾದ ರಾಜೇಶ್ ಮಣಿಯಾಣಿ, ಹೇಮಾವತಿ, ಧರ್ಮಾಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಆನಂದ ರೈ ಮಠ ಹಾಗೂ ಸದಸ್ಯರುಗಳು, ಆಶಾ ಕಾರ್ಯಕರ್ತೆ ಲೀಲಾವತಿ, ಅಂಗನವಾಡಿ ಕೇಂದ್ರ ಮಜ್ಜಾರಡ್ಕ ,ನವೋದಯ ಸ್ವಸಹಾಯ ಸಂಘ ಪಯಂದೂರು, ಅಮೈ, ಕೊಂಬರಡ್ಕ, ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಸ್ವಸಹಾಯ ಸಂಘಗಳಾದ ಕೊಲ್ಲಾಜೆ, ಕೊಂಬರಡ್ಕ, ಮಜ್ಜಾರಡ್ಕ ಮತ್ತು ಪ್ರಗತಿ ಬಂಧು ತಂಡಗಳಾದ ಮಜ್ಜಾರಡ್ಕ ಇತ್ಯಾದಿ ಸಂಘಗಳ ಸದಸ್ಯರುಗಳು, ಪದಾಧಿಕಾರಿಗಳು ಸ್ವಚ್ಚತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಂಚಾಯತ್ ಸಿಬ್ಬಂದಿಗಳಾದ ಪ್ರಭಾಕರ, ಶಶಿಕುಮಾರ್ ಸಹಕರಿಸಿದ್ದರು.
1 ಲೋಡ್ ಕಸ ಸಂಗ್ರಹ
ಕುಂಬ್ರ-ಬೆಳ್ಳಾರೆ ರಸ್ತೆಯಲ್ಲಿ ಕೊಲ್ಲಾಜೆಯಿಂದ ತ್ಯಾಗರಾಜನಗರ ನಗರ ತನಕ ಅಲ್ಲಲ್ಲಿ ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹಾಕಲಾಗಿತ್ತು. ಕೆಲವೊಂದು ಕಡೆಗಳಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ರಾಶಿ ರಾಶಿ ಕಸ ಹಾಕಲಾಗಿತ್ತು. ಇವುಗಳನ್ನು ಗ್ರಾಪಂ ವತಿಯಿಂದ ಸಂಪೂರ್ಣ ಸ್ವಚ್ಛ ಮಾಡಲಾಯಿತು.ಪಿಕ್ಅಪ್ ವಾಹನದಲ್ಲಿ ಒಂದು ಲೋಡ್ ಕಸ ಸಂಗ್ರಹವಾಗಿದೆ. ಹೀಗೆ ಸಂಗ್ರಹವಾದ ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲಾಯಿತು.
ಕಸ ಹಾಕದಂತೆ ಗ್ರಾಪಂ ಎಚ್ಚರಿಕೆ!
ರಸ್ತೆ ಬದಿಗಳಲ್ಲಿ ಕಸ, ತ್ಯಾಜ್ಯ ಇತ್ಯಾದಿಗಳನ್ನು ಹಾಕುವವರು ವಿರುದ್ಧ ಪೊಲೀಸ್ ಇಲಾಖೆಯ ಜೊತೆ ಸೇರಿ ಗ್ರಾಪಂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ. ಯಾರೂ ಕೂಡ ರಸ್ತೆ ಬದಿಗಳಲ್ಲಿ ಕಸ ಹಾಕಬಾರದು ಎಂದು ಗ್ರಾಪಂ ಅಧ್ಯಕ್ಷೆ ಸವಿತಾ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹೆಚ್ಚಾಗಿ ರಾತ್ರಿ ಸಮಯದಲ್ಲಿ ಕಸ, ಕೋಳಿ ತ್ಯಾಜ್ಯ ಇತ್ಯಾದಿಗಳನ್ನು ತಂದು ಹಾಕಲಾಗುತ್ತಿದ್ದು ಈ ಬಗ್ಗೆ ಸಾರ್ವಜನಿಕರು ಕೂಡ ಎಚ್ಚರದಿಂದಿರಬೇಕು, ಕಸ,ತ್ಯಾಜ್ಯ ಹಾಕುವವರ ಬಗ್ಗೆ ಗೊತ್ತಾದಲ್ಲಿ ಕೂಡಲೇ ಪಂಚಾಯತ್ಗೆ ಅಥವಾ ಆಯಾ ವಾರ್ಡ್ನ ಸದಸ್ಯರಿಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಕೇಳಿಕೊಂಡರು.