ಹಿಡಿಯಲು ಹೋದ ಉಮ್ಮರ್ಗೆ ಕಡಿತ; ಆಸ್ಪತ್ರೆಗೆ ದಾಖಲು
ನೆಲ್ಯಾಡಿ: ಇಲ್ಲಿನ ಪತ್ರಿಕೆ ಮಾರಾಟದ ಅಂಗಡಿಯೊಳಗೆ ದಿಢೀರ್ ಆಗಿ ನಾಗರಹಾವೊಂದು ಕಾಣಿಸಿಕೊಂಡು ಜನರನ್ನು ಬೆಚ್ಚಿಬೀಳಿಸಿದ ಘಟನೆ ಜೂ.28ರಂದು ಬೆಳಿಗ್ಗೆ ನಡೆದಿದೆ. ಈ ಮಧ್ಯೆ ನಾಗರಹಾವು ಹಿಡಿಯಲು ಹೋದ ರಿಕ್ಷಾ ಚಾಲಕ ಉಮ್ಮರ್ ಎಂಬವರು ಹಾವಿನಿಂದ ಕಡಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಹರಸಾಹಸ ಪಟ್ಟು ಸ್ಥಳೀಯರೇ ನಾಗರಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ನೆಲ್ಯಾಡಿ ಪೇಟೆಯಲ್ಲಿರುವ ಲಿಂಗಪ್ಪ ಕುಲಾಲ್ರವರ ಮಾಲಕತ್ವದ ಲಕ್ಷ್ಮೀನಾರಾಯಣ ಪೇಪರ್ ಸ್ಟಾಲ್ನಲ್ಲಿ ಜೂ.೨೮ರಂದು ಬೆಳಿಗ್ಗೆ ೧೧ ಗಂಟೆಯ ವೇಳೆಗೆ ನಾಗರಹಾವು ದಿಢೀರ್ ಆಗಿ ಕಾಣಿಸಿಕೊಂಡಿದೆ. ಅಂಗಡಿಯೊಳಗೆ ಹಳೆಯ ಪತ್ರಿಕೆಗಳನ್ನು ಜೋಡಿಸಿಡಲಾಗಿದ್ದು ಇದರ ಮೂಲೆಯೊಂದರಲ್ಲಿ ನಾಗರಹಾವು ಅವಿತು ಕುಳಿತು ಕೊಂಡಿತ್ತು. ಲಿಂಗಪ್ಪ ಕುಲಾಲ್ರವರ ಸಹಾಯಕ ದಿನೇಶ್ರವರು ಬೆಳಿಗ್ಗೆ ೧೧ ಗಂಟೆಯ ವೇಳೆಗೆ ಪತ್ರಿಕೆಯೊಂದರ ಬಂಡಲ್ ಎಳೆದ ವೇಳೆ ನಾಗರಹಾವು ಇರುವುದು ಗಮನಕ್ಕೆ ಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ರಿಕ್ಷಾ ಚಾಲಕ, ನೆಲ್ಯಾಡಿ ಪಡ್ಡಡ್ಕ ನಿವಾಸಿ ಉಮ್ಮರ್ ಎಂಬವರು ಹಾವನ್ನು ಬರಿಗೈಯಲ್ಲಿಯೇ ಹಿಡಿಯಲು ಪ್ರಯತ್ನಿಸಿದ್ದು ಈ ವೇಳೆ ಹಾವು ಅವರ ಕೈ ಬೆರಳಿಗೆ ಕಡಿದು ಗಾಯಗೊಳಿಸಿದೆ. ಬಳಿಕ ಸ್ಥಳೀಯರ ಸಹಕಾರದೊಂದಿಗೆ ಕೌಕ್ರಾಡಿ ಗ್ರಾ.ಪಂ.ಸದಸ್ಯ ಲೋಕೇಶ್ ಬಾಣಜಾಲುರವರು ಪಿವಿಸಿ ಪೈಪ್ನ ಸಹಾಯದಿಂದ ಹಾವನ್ನು ಸುರಕ್ಷಿತವಾಗಿ ಹಿಡಿದು ಪ್ಲಾಸ್ಟಿಕ್ ಗೋಣಿಯೊಂದರಲ್ಲಿ ತುಂಬಿಸಿ ಪೆರಿಯಶಾಂತಿ ಕಾಡಿಗೆ ಬಿಟ್ಟಿದ್ದಾರೆ. ಲಿಂಗಪ್ಪ ಕುಲಾಲ್ರವರ ಪತ್ರಿಕೆ ಸ್ಟಾಲ್ ಜನನಿಭಿಡ ಸ್ಥಳದಲ್ಲೇ ಇದ್ದು ಹಾವು ಕಳೆದ ರಾತ್ರಿಯೇ ಅಂಗಡಿಯೊಳಗೆ ನುಗ್ಗಿ ಹಳೆಯ ಪತ್ರಿಕೆಯ ಬಂಡಲ್ಗಳ ನಡುವೆ ಅವಿತಿರಬಹುದು ಎಂದು ಅಂದಾಜಿಸಲಾಗಿದೆ.
ಉಮ್ಮರ್ ಆಸ್ಪತ್ರೆಗೆ:
ಪತ್ರಿಕೆ ಮಾರಾಟದ ಅಂಗಡಿಯಲ್ಲಿ ಹಾವು ಅವಿತಿರುವ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ರಿಕ್ಷಾ ಚಾಲಕ ಉಮ್ಮರ್ರವರು ಆಗಮಿಸಿ ಯಾವುದೇ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದೇ ಕೈಯಿಂದಲೇ ಹಾವು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಹಿಡಿಯುವ ವೇಳೆ ಹಾವು ಉಮ್ಮರ್ರವರ ಕೈ ಬೆರಳೊಂದಕ್ಕೆ ಕಡಿದಿದ್ದು ರಕ್ತ ಬರಲಾರಂಭಿಸಿದೆ. ತಕ್ಷಣ ಅವರ ಕೈಗೆ ದಾರವೊಂದನ್ನು ಬಿಗಿಯಾಗಿ ಕಟ್ಟಿ ಹಾವಿನ ವಿಷ ದೇಹದೊಳಗೆ ಪ್ರವೇಶಿಸದಂತೆ ಮುಂಜಾಗ್ರತೆ ಕ್ರಮ ಕೈಗೊಂಡು ಶಿಬಾಜೆಯ ನಾಟಿವೈದ್ಯರೋರ್ವರಲ್ಲಿಗೆ ಕರೆದೊಯ್ಯಲಾಯಿತು. ಆದರೂ ಉಮ್ಮರ್ರವರು ಚೇತರಿಸಿಕೊಳ್ಳದೇ ಇದ್ದ ಹಿನ್ನಲೆಯಲ್ಲಿ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆತಂದು ಅಲ್ಲಿನ ವೈದ್ಯರ ಸಲಹೆಯಂತೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ಐಸಿಯುನಲ್ಲಿ ದಾಖಲಾಗಿ ಉಮ್ಮರ್ರವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.