ನೆಲ್ಯಾಡಿ: ಕೊಕ್ಕಡ ಜೋಡುಮಾರ್ಗದಲ್ಲಿ 9.50 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಶಕ್ತಿ ರಿಕ್ಷಾ ನಿಲ್ದಾಣ ಹಾಗೂ ರಿಕ್ಷಾ ನಿಲ್ದಾಣದ ಡಾಮರೀಕರಣ ಕಾಮಗಾರಿಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊಕ್ಕಡದ ಆಟೋ ಚಾಲಕರ ಬಹು ಸಮಯಗಳ ಹಿಂದಿನ ಬೇಡಿಕೆಯಾಗಿದ್ದ ಸುಸಜ್ಜಿತ ಆಟೋ ಸ್ಟಾಂಡ್ ಇದೀಗ ಸ್ಥಳೀಯ ತಾ.ಪಂ., ಜಿ.ಪಂ. ಸದಸ್ಯರು ಮತ್ತು ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿರುವುದು ಸಂತಸದ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯ ಸಾರ್ವಜನಿಕರಿಗೆ ಅಗತ್ಯವಿರುವ ಸಾರ್ವಜನಿಕ ಬಸ್ ನಿಲ್ದಾಣ ನಿರ್ಮಾಣ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ಧರ್ಮಸ್ಥಳ ಕ್ಷೇತ್ರದ ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ್, ಕೊಕ್ಕಡ ತಾ.ಪಂ. ಕ್ಷೇತ್ರದ ಸದಸ್ಯ ಲಕ್ಷ್ಮೀನಾರಾಯಣ ಟಿ.ಎಂ., ಹಿರಿಯ ವೈದ್ಯ ಡಾ. ಮೋಹನದಾಸ್ ಗೌಡ, ಶಕ್ತಿ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಹಾರಿಸ್, ಕೊಕ್ಕಡ ಗ್ರಾ.ಪಂ. ಉಪಾಧ್ಯಕ್ಷೆ ರಾಧಾ ಬಿ.ಕೆ., ಸದಸ್ಯರಾದ ಶೀನ ನಾಯ್ಕ್, ಕುಶಾಲಪ್ಪ ಗೌಡ, ಪವಿತ್ರಾ ಗುರುಪ್ರಸಾದ್, ಕೊಕ್ಕಡ ಸಿ.ಎ. ಬ್ಯಾಂಕಿನ ಅಧ್ಯಕ್ಷ ಪಿ. ನಾರಾಯಣ ಗೌಡ, ಗೋಪಾಲಕೃಷ್ಣ ಭಟ್, ರಾಮಚಂದ್ರ ಭಟ್, ಗುತ್ತಿಗೆದಾರ ಮಧುರಾ ಕನ್ಸ್ಟ್ರಕ್ಷನ್ನ ಶ್ರೀನಿವಾಸ ಗೌಡ ಉಪಸ್ಥಿತರಿದ್ದರು. ಶಕ್ತಿ ಆಟೋ ಚಾಲಕ ಮಾಲಕರ ಸಂಘದ ಸದಸ್ಯ ಸಚಿನ್ ಬಜ ಸ್ವಾಗತಿಸಿದರು. ಕೊಕ್ಕಡ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಯೋಗೀಶ್ ಗೌಡ ಆಲಂಬಿಲ ವಂದಿಸಿದರು. ಕೇಶವ ಗೌಡ ಹಳ್ಳಿಂಗೇರಿ ನಿರೂಪಿಸಿದರು.