ಹಿರೇಬಂಡಾಡಿ: ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಅರಣ್ಯ ಇಲಾಖೆ ಸಹಕಾರದೊಂದಿಗೆ ವನಮಹೋತ್ಸವ ಹಾಗೂ ಶಾಲಾ ಪೋಷಕರ ಸಭೆ,ವಿದ್ಯಾರ್ಥಿ ಸಂಘದ ಉದ್ಘಾಟನೆ ನಡೆಯಿತು.
ಕರ್ನಾಟಕ ಅರಣ್ಯ ಇಲಾಖೆ, ಕೊಲ ಶಾಖೆ ಹಾಗೂ ಹಿರೇಬಂಡಾಡಿ ಗ್ರಾ.ಪಂ, ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಶಾಸಕ ಸಂಜೀವ ಮಠಂದೂರುರವರು ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ನಡೆದ ಪೋಷಕರ ಸಭೆಯಲ್ಲಿ ಅವರು ವಿದ್ಯಾರ್ಥಿ ಸಂಘ ಉದ್ಘಾಟಿಸಿದರು. ಬಳಿಕ ಮಾತನಾಡಿದ ಮಠಂದೂರುರವರು, ಮಾನವ ಮತ್ತು ಪ್ರಾಣಿಗಳ ನಡುವೆ ಬಾಂಧವ್ಯ ಸೃಷ್ಟಿಗಾಗಿ ಭಗವಂತ ಪರಿಸರವನ್ನು ರೂಪಿಸಿದ್ದಾನೆ. ನಾವೆಲ್ಲರೂ ಪರಿಸರ ಸಂರಕ್ಷಣೆಗೆ ಕಟಿ ಬದ್ಧರಾಗಿರೋಣ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಹಾಗೂ ನಮ್ಮ ಮುಂದಿನ ಪೀಳಿಗೆಗಾಗಿ ಪರಿಸರವನ್ನು ರಕ್ಷಿಸೋಣ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಿಡವನ್ನು ಬೆಳೆಸೋಣ ಎಂದರು. ವಿದ್ಯಾರ್ಥಿಗಳು ಎಳೆಯ ವಯಸ್ಸಿನಲ್ಲೇ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಇದಕ್ಕಾಗಿ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು, ಪೋಷಕರು ತಮ್ಮ ಮಕ್ಕಳ ಬಗ್ಗೆ ಅತೀ ಕಾಳಜಿ ವಹಿಸುವುದು ಅಗತ್ಯ, ಮಕ್ಕಳ ದಿನನಿತ್ಯದ ಚಟುವಟಿಕೆಗಳ ಮೇಲೆ ಗಮನಹರಿಸುತ್ತಿರಬೇಕೆಂದು ಹೇಳಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶ ದಾಖಲಿಸಲು ಮಕ್ಕಳ ಹೆತ್ತವರು, ಅಧ್ಯಾಪಕರು, ಎಸ್ಡಿಎಂಸಿಯವರು ಶಕ್ತಿ ಮೀರಿ ಪ್ರಯತ್ನಿಸಬೇಕು. ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆ ರಾಜ್ಯದಲ್ಲಿಯೇ ನಂ.೧ ಶಾಲೆ ಎಂದು ಗುರುತಿಸುವಂತಾಗಲಿ ಎಂದರು. ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಶ್ರೀಧರ್ ಮಠಂದೂರು, ಪುತ್ತೂರು ವಲಯದ ಆರ್ಎಫ್ಓ ಮೋಹನ್ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷ ಹಮ್ಮಬ್ಬ ಶೌಕತ್ ಆಲಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯಗುರು ವೇದಾವತಿ ಸ್ವಾಗತಿಸಿ, ಶಿಕ್ಷಕ ಹರಿಕಿರಣ ವಂದಿಸಿದರು. ಶಿಕ್ಷಕಿ ಲಲಿತಾ ಕಾರ್ಯಕ್ರಮ ನಿರೂಪಿಸಿದರು. ಉಪವಲಯ ಅರಣ್ಯಧಿಕಾರಿ ಸಂಜೀವಪೂಜಾರಿ, ಅರಣ್ಯ ರಕ್ಷಕರಾದ ಸುಧೀರ್, ಗಿರೀಶ್, ಎಸ್ಡಿಎಮ್ಸಿ ಸದಸ್ಯರುಗಳು, ಗ್ರಾ.ಪಂ ಸದಸ್ಯರುಗಳು, ಮಕ್ಕಳ ಪೋಷಕರು, ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.
ಮಕ್ಕಳ ಸುರಕ್ಷ ಸಮಿತಿ ರಚನೆ:
ಸಭೆಯಲ್ಲಿ ಮಕ್ಕಳ ಸುರಕ್ಷ ಸಮಿತಿ ರಚಿಸಿ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಅಧ್ಯಕ್ಷರಾಗಿ ಮುಖ್ಯಶಿಕ್ಷಕಿ ವೇದಾವತಿ, ಸದಸ್ಯರುಗಳಾಗಿ ಶ್ರೀಧರ್ ಮಠಂದೂರು, ವೀರಪ್ಪ ಗೌಡ, ಅಬೂಬಕ್ಕರ್, ಶುಭರವರನ್ನು ಆಯ್ಕೆ ಮಾಡಲಾಯಿತು. ಮಕ್ಕಳ ತಾಯಂದಿರ ಸಮಿತಿಗೆ ವಿದ್ಯಾ ನಿಡ್ಡೆಂಕಿ, ರಜಿತ, ಶಾರದ, ಮಾಲತಿ, ಗೀತಾ, ಇಂದಿರಾ, ಭವ್ಯ, ರೂಪ, ವಿಮಲ ಹೇಮಲತ, ಚಂದ್ರಾವತಿ ನೆಹರುತೋಟರವರನ್ನು ಆಯ್ಕೆ ಮಾಡಲಾಯಿತು. 2019-20ನೇ ಸಾಲಿನ ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮುಖ್ಯಗುರು ವೇದಾವತಿಯವರು ಪ್ರಮಾಣ ವಚನ ಬೋಧಿಸಿದರು.