ಕಾಯಕಲ್ಪಕ್ಕಾಗಿ ಕಾಯುತ್ತಿದೆ ಸವಣೂರು ಗ್ರಾಮ ಪಂಚಾಯತ್ ಸಾರ್ವಾಜನಿಕ ಗ್ರಂಥಾಲಯ

 


ಬರಹ/ಚಿತ್ರ: ಸಫ್ವಾನ್ ಸವಣೂರು

ಸವಣೂರು: ಪುಸ್ತಕಗಳು ನಮ್ಮ ಬದುಕನ್ನು ಬೆಳಗಬಲ್ಲ ದೀವಿಗೆಗಳು.ಮನುಷ್ಯ ಪುಸ್ತಕಗಳಿಂದ ತನ್ನದಲ್ಲದ ಅನುಭವಗಳನ್ನು ತನ್ನದಾಗಿಸಿಕೊಳ್ಳುತ್ತಾನೆ. ಆ ಮೂಲಕ ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾನೆ, ಪುಸ್ತಕಗಳು ನಮ್ಮ ವ್ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತದೆ.ಅದರಂತೆ ಸವಣೂರು ಆಸುಪಾಸಿನ ಪುಸ್ತಕಪ್ರೇಮಿಗಳ ದಾಹ ತಣಿಸುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಇದರ ಅಧೀನದಲ್ಲಿ ಸವಣೂರಿನಲ್ಲಿ ಸಾರ್ವಜನಿಕ ಗ್ರಂಥಾಲಯವೊಂದು ಕಳೆದ ಹನ್ನೆರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.

ಸವಣೂರು ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಈ ಗ್ರಂಥಾಲಯದಲ್ಲಿ ಸುಮಾರು ಏಳುನೂರು ಮಂದಿ ಸದಸ್ಯತ್ವ ಹೊಂದಿದ್ದಾರೆ.ಕಥೆ, ಕವನ, ಕಾದಂಬರಿ ಸೇರಿದಂತೆ ಸರಿಸುಮಾರು ಐದೂವರೆ ಸಾವಿರ ಪುಸ್ತಕಗಳನ್ನು ಹೊಂದಿರುವ ಈ ಗ್ರಂಥಭಂಡಾರ ಇಕ್ಕಟ್ಟಾದ ಕೊಠಡಿಯೊಳಗೆ ಕಾರ್ಯನಿರ್ವಹಿಸುತ್ತಿದೆ.ಆದರೆ ಕೊಠಡಿಯು ತುಂಬಾ ಸಣ್ಣದಾಗಿರುವುದರಿಂದ ಎಲ್ಲಾ ಪುಸ್ತಕಗಳನ್ನು ಒಪ್ಪಓರಣವಾಗಿ ಜೋಡಿಸಲು ಸಾಧ್ಯವಾಗುತ್ತಿಲ್ಲ.ಪುಸ್ತಕಗಳನ್ನು ಓದಲು ಮನೆಗೆ ಕೊಂಡು ಹೋಗುವ ಮಂದಿಗೆ ತಮಗೆ ಬೇಕಾದ ಪುಸ್ತಕಗಳನ್ನು ಆರಿಸಿಕೊಳ್ಳಲು ಕೂಡಾ ಅನಾನುಕೂಲವಾಗುತ್ತಿದೆ. ಅಷ್ಟೇ ಅಲ್ಲದೆ ಇಲ್ಲಿ ದಿನನಿತ್ಯವೂ ಪುಸ್ತಕಗಳನ್ನು ಹಾಗೂ ನಿಯತಕಾಲಿಕೆಗಳನ್ನು ಓದಲು ಸುತ್ತಮುತ್ತಲಿನ ಶಾಲಾಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಮಂದಿ ಆಗಮಿಸುತ್ತಿದ್ದು, ಓದಲು ಸೂಕ್ತವಾದ ವಾತಾವರಣ ಲಭ್ಯವಿಲ್ಲ.

ಗ್ರಾಮ ಪಂಚಾಯತ್ ಆಡಳಿತವು ಗ್ರಂಥಾಲಯದ ಕಟ್ಟಡಕ್ಕೆ ಸೂಕ್ತ ನಿವೇಶನ ಒದಗಿಸಿದರೆ  ಹೊಸ ಕಟ್ಟಡ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಗ್ರಂಥಾಲಯ ಇಲಾಖೆ ಸಿದ್ಧವಾಗಿದೆ.ಆದರೆ ಗ್ರಂಥಾಲಯದ ಕಟ್ಟಡ ನಿರ್ಮಿಸಲು ಸೂಕ್ತ ನಿವೇಶನ ಇಲ್ಲದಿರುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.ಹಿಂದೊಮ್ಮೆ ರೈಲ್ವೇ ಕ್ರಾಸ್ ಬಳಿ ನಿವೇಶನ ಗುರುತಿಸಲಾಗಿದ್ದರೂ, ಅಲ್ಲಿ ಇದೀಗ ಎಪಿಎಂಸಿ ವತಿಯಿಂದ ಸಂತೆಕಟ್ಟೆ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಆ ಜಾಗವೂ ಕೈತಪ್ಪಿ ಹೋಗಿದೆ.

ಗ್ರಾಮದ ಜನರ ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿರುವ ಈ ಗ್ರಂಥಾಲಯದ ಸಮಸ್ಯೆಯನ್ನು ಪರಿಹರಿಸಲು ಗ್ರಾಮ ಪಂಚಾಯತ್ ಆಡಳಿತ ಮತ್ತು ಅಧಿಕಾರಿ ವರ್ಗ ವಿಶೇಷ ಮುತುವರ್ಜಿ ವಹಿಸಬೇಕು.ನೂರಾರು ವಿದ್ಯಾರ್ಥಿಗಳ ಹಾಗೂ ಸಾರ್ವಾಜನಿಕರ ಪಾಲಿಗೆ ವರದಾನವಾಗಿರುವ ಈ ಗ್ರಂಥಾಲಯವು ಸುಸಜ್ಜಿತ ಕಟ್ಟಡ ಮತ್ತು ಇತರೆ ಸಮರ್ಪಕ ಸೌಲಭ್ಯಗಳೊಂದಿಗೆ ಜನರ ಸೇವೆಗೆ ಲಭ್ಯವಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

“ಸರ್ಕಾರದ ಸುತ್ತೋಲೆಯಂತೆ ಕಳೆದ ಎಪ್ರಿಲ್ ತಿಂಗಳ ಬಳಿಕ ಗ್ರಂಥಾಲಯದ ನಿರ್ವಹಣೆ  ಗ್ರಾಮ ಪಂಚಾಯತ್ ಆಡಳಿತದ ಅಧೀನಕ್ಕೆ ಬಂದಿದ್ದರೂ ಸ್ಪಷ್ಟ ನಿರ್ದೇಶನ ಲಭಿಸಿಲ್ಲ.ಗ್ರಂಥಾಲಯಕ್ಕೆ ನೂತನ ಕಟ್ಟಡ ನಿರ್ಮಿಸಲು ಸೂಕ್ತ ನಿವೇಶನಕ್ಕಾಗಿ ಪಂಚಾಯತ್ ವತಿಯಿಂದ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ.ನಿವೇಶನ ಮಂಜೂರಾದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು”-ನಾರಾಯಣ ಬಿ ಪಿಡಿಒ, ಗ್ರಾಮ ಪಂಚಾಯತ್ ಸವಣೂರು

“ಈ ಗ್ರಂಥಾಲಯದಲ್ಲಿ ನಾನು ಕಳೆದ ಎಂಟು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇಲ್ಲಿ ನಾಡಿನ ಹೆಸರಾಂತ ಲೇಖಕರ ವಿವಿಧ ಪ್ರಕಾರದ ಸಾವಿರಾರು ಪುಸ್ತಕಗಳು ಓದುಗರಿಗೆ ಲಭ್ಯವಿದೆ.ಆದರೆ ಗ್ರಂಥಾಲಯದ ಕೊಠಡಿ ಬಹಳ ಚಿಕ್ಕದಾಗಿದ್ದು, ಪುಸ್ತಕಗಳನ್ನು ಸರಿಯಾಗಿ ಜೋಡಿಸಲು ಸಾಧ್ಯವಾಗುತ್ತಿಲ್ಲ.ಓದುಗರಿಗೆ ಪುಸ್ತಕಗಳನ್ನು ಆರಿಸಿಕೊಳ್ಳಲು ಕೂಡಾ ಕಷ್ಟವಾಗುತ್ತಿದ್ದು, ವಿಶಾಲವಾದ ಕೊಠಡಿಯಿದ್ದರೆ ಗ್ರಂಥಾಲಯವು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದು”-ಶಾರದಾ ಎಂ  ಗ್ರಂಥಾಲಯ ಮೇಲ್ವಿಚಾರಕಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.