ಪುತ್ತೂರು: ಮಂಗಳೂರು ವಿದ್ಯುತ್ ಸರಬರಾಜು ನಿಯಮಿತದ ಪುತ್ತೂರು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಕಿರಿಯ ಇಂಜಿನಿಯರ್ ಸುಧಾಕರ ಶೆಟ್ಟಿ ಹಾಗೂ ಸಹಾಯಕ ಮೋನಪ್ಪ ಗೌಡರಿಗೆ ಬೀಳ್ಕೊಡುಗೆ ಸಮಾರಂಭವು ಜೂ.29ರಂದು ಬಪ್ಪಳಿಗೆ ಜೈನ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮೆಸ್ಕಾಂ ಮಂಗಳೂರಿನ ಲೆಕ್ಕನಿಯಂತ್ರಣಾಧಿಕಾರಿ ಸತೀಶ್ ಜಿ.ಆರ್ ಮಾತನಾಡಿ, ಇಲಾಖೆಯ ಕೆಲಸ ಕಾರ್ಯಗಳಿಗೆ ಪುತ್ತೂರಿನಲ್ಲಿ ಉತ್ತಮ ಸ್ಪಂಧನೆಯಿದೆ. ಸಿಬಂದಿಗಳು, ಸಾರ್ವಜನಿಕರ ಸಹಕಾರ, ಗುತ್ತಿಗೆದಾರರ ಪ್ರೋತ್ಸಾಹ ದೊರೆಯುತ್ತಿದ್ದು ಪುತ್ತೂರಿನಲ್ಲಿ ಕೆಲಸ ಮಾಡಲು ಪುಣ್ಯ ಮಾಡಿರಬೇಕು ಎಂದರು. ನಿವೃತ್ತರಾದ ಸುಧಾಕರ ಶೆಟ್ಟಿಯವರು ಉತ್ತಮ ಸ್ಟೋರ್ ಕೀಪರ್ ಆಗಿ ಸೇವೆ ಸಲ್ಲಿಸಿದ್ದಾರೆ. ಸಹಾಯಕರಾಗಿದ್ದ ಮೋನಪ್ಪ ಗೌಡರವರು ಪುತ್ತೂರು ಉಪವಿಭಾಗದ ಪಿಲ್ಲರ್ನಂತೆ ಕೆಲಸ ನಿರ್ವಹಿಸಿ ಎಲ್ಲರ ಪ್ರಸಂಶೆಗೆ ಪಾತ್ರರಾದವರು ಎಂದರು.
ಬಂಟ್ವಾಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎಂ.ಮಾತನಾಡಿ, ಪುತ್ತೂರು ವಿಭಾಗವು ಎಲ್ಲಾ ರೀತಿಯಲ್ಲೂ ಕಡೆಗಣಿಸಲ್ಪಟ್ಟ ವಿಭಾಗ. ಇಂತಹ ಸ್ಥಿತಿಯಲ್ಲಯೂ ಅಧಿಕ ವರ್ಷಗಳ ಕಾಲ ಉತ್ತಮವಾಗಿ ನಿರ್ವಹಿಸುವ ಮೂಲಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ನರಸಿಂಹ ಮಾತನಾಡಿ, ಸರಕಾರಿ ಸೇವೆಯಲ್ಲಿ ನಿವೃತ್ತಿ ಅನಿವಾರ್ಯ. ಹಿರಿಯ ಅನುಭವೀ ಸಿಬಂದಿಗಳು ಸೇವೆಯಿಂದ ನಿವೃತ್ತರಾಗುತ್ತಿರುವುದರಿಂದ ಅವರಂತ ಸೂಕ್ತ ವ್ಯಕ್ತಿಗಳನ್ನು ಮತ್ತೆ ಪಡೆಯುವುದು ಕಷ್ಟ. ಹೀಗಾದರೆ ಉಪ ವಿಭಾಗವನ್ನು ನಡೆಸುವುದೇ ಕಷ್ಟವಾಗಬಹುದು ಎಂದು ಹೇಳಿದರು.
ಲೆಕ್ಕಾಧಿಕಾರಿ ನಾರಾಯಣ ಶೆಣೈ, ರಾಮಚಂದ್ರ, ನೌಕರರ ಸಂಘದ ಕೇಂದ್ರ ಸಮಿತಿ ಸದಸ್ಯ ಸುಂದರ್, ನಿವೃತ್ತ ಇಂಜಿನಿಯರ್ ಉಮನಾಥ ಪಡೀಲು, ನಿವೃತ್ತ ಲೆಕ್ಕಾಧಿಕಾರಿ ಮಂಜ ನಾಯಕ್, ನಗರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿಲ್ಪಾ ಎಸ್.ಶೆಟ್ಟಿ, ಗುತ್ತಿಗೆದಾರರ ಸಂಘದ ಮಾಜಿ ಅಧ್ಯಕ್ಷ ಕೃಷ್ಣ ಮಾತನಾಡಿ ನಿವೃತ್ತರ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿ ಶುಭಹಾರೈಸಿದರು. ಸನ್ಮಾನ ಸ್ವೀಕರಿಸಿದ ಮೋನಪ್ಪ ಗೌಡ ಹಾಗೂ ಸುಧಾಕರ ಶೆಟ್ಟಿಯವರು ತಮ್ಮ ಸೇವಾವಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಮಮತಾ ಮತ್ತು ಬಳಗದವರು ಪ್ರಾರ್ಥಿಸಿದರು. ಸಹಾಯಕ ಲೆಕ್ಕಾಧಿಕಾರಿ ಕೃಷ್ಣಮೂರ್ತಿ ಸ್ವಾಗತಿಸಿದರು. ಜಯಪ್ರಕಾಶ್, ಗಣೇಶ್, ರತ್ನಾಕರ್, ಸುನೀಲ್, ರಾಜೇಶ್, ವಿಜಯಲಕ್ಷ್ಮಿ, ಉಮೇಶ್, ಯೋಗೀಶ್, ಮಹಿಮಾ ಹಾಗೂ ಗುರುದೇವಿ ಅತಿಥಿಗಳಿಗೆ ಹೂ ಗುಚ್ಚ ನೀಡಿ ಸ್ವಾಗತಿಸಿದರು. ಕಿರಿಯ ಇಂಜಿನಿಯರ್ ಉಮೇಶ್ ವಂದಿಸಿದರು. ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ, ಕ್ಯಾಂಪ್ಕೋ ಚಾಕಲೇಟ್ ಪ್ಯಾಕ್ಟರಿ, ವಿವಿಧ ನೌಕರರ ಸಂಘದ ವತಿಯಿಂದ ನಿವೃತ್ತರನ್ನು ಸನ್ಮಾನಿಸಿದರು.