



ಪುತ್ತೂರು; ಪುತ್ತೂರು ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ರಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಪ್ರಕರಣ 94ಎ(1)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಬಗರ್ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ರಚಿಸಿ ಸರಕಾರ ಆದೇಶಿಸಿದ್ದು ಅಧ್ಯಕ್ಷರಾಗಿ ಶಾಸಕ ಸಂಜೀವ ಮಠಂದೂರು, ಸದಸ್ಯರಾಗಿ ಮಹಿಳಾ ಮೀಸಲಾತಿ ಕ್ಷೇತ್ರದಿಂದ ಹಿರೇಬಂಡಾಡಿಯ ಗೀತಾ ದಾಸರಮೂಲೆ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಪಾಣಾಜೆಯ ಭರಣ್ಯ ನಿವಾಸಿ ರಾಮನಾಯ್ಕ ಮತ್ತು ಸಾಮಾನ್ಯ ಕ್ಷೇತ್ರದಿಂದ ಕೆದಂಬಾಡಿ ಗ್ರಾಮದ ಇದ್ಯಪೆಯ ಐ.ಸಿ.ಕೈಲಾಸ್ ಹಾಗೂ ಸದಸ್ಯ ಕಾರ್ಯದರ್ಶಿಯನ್ನಾಗಿ ತಾಲೂಕಿನ ತಹಶೀಲ್ದಾರ್ರವರನ್ನು ನೇಮಕಗೊಳಿಸಲಾಗಿದೆ.
ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಾಸಕ ಸಂಜೀವ ಮಠಂದೂರುರವರು ಜಿಲ್ಲಾ ಬಿಜೆಪಿಯ ಅಧ್ಯಕ್ಷರಾಗಿಯೂ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಸದಸ್ಯರಾಗಿ ಆಯ್ಕೆಯಾಗಿರುವ ಗೀತಾ ದಾಸರಮೂಲೆಯವರು ಹಿರೇಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಪುತ್ತೂರು ಎಪಿಎಂಸಿಯ ಸದಸ್ಯರಾಗಿ, ಉಪ್ಪಿನಂಗಡಿ ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ, ಬಿಲ್ಲವ ಮಹಿಳಾ ಗ್ರಾಮ ಸಮಿತಿಯ ಅಧ್ಯಕ್ಷರಾಗಿ, ಹಿರೇಬಂಡಾಡಿ ಹಿ.ಪ್ರಾ.ಶಾಲಾ ಎಸ್ಡಿಎಂಸಿಯ ಅಧ್ಯಕ್ಷರಾಗಿ, ಪ್ರೌಢಶಾಲಾ ಎಸ್ಡಿಎಂಸಿ ಸದಸ್ಯರಾಗಿಯೂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.
ಐ.ಸಿ.ಕೈಲಾಸ್ರವರು ಈ ಹಿಂದೆ ಬಿಜೆಪಿಯ ಕ್ಷೇತ್ರ ಪ್ರಧಾನ ಕಾರ್ಯದರ್ಶಿಯಾಗಿ, ದ.ಕ.ಜೇನು ವ್ಯವಸಾಯಗಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಪುತ್ತೂರು ತಾಲೂಕು ಜೆಡಿಎಸ್ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದು ಪ್ರಸ್ತುತ ಜನತಾ ಕೃಷಿ ಕೂಲಿ ಕಾರ್ಮಿಕರ ಸಂಘದ ಕಾರ್ಯದರ್ಶಿಯಾಗಿದ್ದಾರೆ. ರಾಮನಾಯ್ಕರವರೂ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡವರಾಗಿದ್ದಾರೆ.