- ಇನ್ನೋರ್ವ ಗಂಭೀರ: ಆಸ್ಪತ್ರೆಗೆ ದಾಖಲು
- ಲಾರಿಯಿಂದ ತೆಂಗಿನ ಸಿಪ್ಪೆಯ ಹುಡಿ ಇಳಿಸುತ್ತಿದ್ದಾಗ ನಡೆದ ದುರ್ಘಟನೆ
ವಿಟ್ಲ: ಲಾರಿಯಿಂದ ತೆಂಗಿನ ಸಿಪ್ಪೆಯ ಹುಡಿ ಅನ್ಲೋಡ್ ಮಾಡುತ್ತಿದ್ದ ವೇಳೆ ಕಬ್ಬಿಣದ ಹಾರೆ ಲಾರಿಯ ಮೇಲ್ಬಾಗದಲ್ಲಿ ಹಾದು ಹೋದ ವಿದ್ಯುತ್ ತಂತಿಗೆ ತಗುಲಿ ಗಾಯಗೊಂಡ ಇಬ್ಬರ ಪೈಕಿ ಓರ್ವ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟರೆ ಇನ್ನೋರ್ವನನ್ನು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲು ಮಾಡಿದ ಘಟನೆ ಕೊಳ್ನಾಡು ಗ್ರಾಮದ ಕಲ್ಕಾಜೆ ಯಲ್ಲಿ ಜೂ.29ರಂದು ನಡೆದ ಬಗ್ಗೆ ವರದಿಯಾಗಿದೆ.
ಪಂಜ ನಿವಾಸಿ ವಾಸುದೇವ ಪ್ರಭು(50 ವ.)ರವರು ಮೃತಪಟ್ಟವರಾಗಿದ್ದು, ಜೊತೆಗಿದ್ದ ಒರಿಸ್ಸಾ ಮೂಲದ ಸುಜಿತ್(20 ವ.)ರವರನ್ನು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಲ್ಕಾಜೆಯಲ್ಲಿರುವ ನಾರಾಯಣ ನಾಯ್ಕರ ಕೋಳಿ ಫಾರ್ಮಿಗೆ ಬದಿಯಡ್ಕ ಮೂಲದ ಲಾರಿಯಲ್ಲಿ ಕೇರಳದ ನೀಲೇಶ್ವರದಿಂದ ತೆಂಗಿನ ಸಿಪ್ಪೆಯ ಹುಡಿ ತರಲಾಗಿತ್ತು. ಅದನ್ನು ಅನ್ಲೋಡ್ ಮಾಡುತ್ತಿದ್ದ ವೇಳೆ ವಾಸುದೇವ ಪ್ರಭುರವರ ಕೈಯಲ್ಲಿದ್ದ ಕಬ್ಬಿಣದ ಹಾರೆ ಮೇಲ್ಭಾಗದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಗೆ ತಗುಲಿದ್ದರಿಂದ ಅಪಾಯಸಂಭವಿಸಿದೆ. ಕೂಡಲೇ ಗಾಯಾಳುಗಳಿಬ್ಬರನ್ನು ಸ್ಥಳೀಯರು ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಿದರಾದರು. ದಾರಿ ಮಧ್ಯೆ ವಾಸುದೇವ ಪ್ರಭುರವರು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ. ಸುಜಿತ್ ರವರನ್ನು ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.