ಪುತ್ತೂರು: ನೆಲ್ಯಾಡಿಯ ಆರ್ಲದಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸಹ ಸವಾರನ ಮೃತ್ಯುವಿಗೆ ಕಾರಣನಾದ ಆರೋಪ ಎದುರಿಸುತ್ತಿದ್ದ ಸವಾರನನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ.
೨೦೧೩ರ ಮಾರ್ಚ್ ೧೪ರಂದು ರಾತ್ರಿ ೧೦.೩೦ರ ವೇಳೆಗೆ ಸತೀಶ್ ಕುಮಾರ್ ಪೂಜಾರಿ ಎಂಬವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ(ಕೆ.ಎ.೧೯ ಕ್ಯೂ ೮೦೩೫) ನೆಲ್ಯಾಡಿ ಸಮೀಪದ ಆರ್ಲದಲ್ಲಿ ಮಗುಚಿ ಬಿದ್ದು ಸಹ ಸವಾರ ಸಂದೀಪ್ ಎಂಬವರು ಗಾಯಗೊಂಡು ಬಳಿಕ ಮಂಗಳೂರಿನ ಮಂಗಳ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ಸವಾರ ಸತೀಶ್ ಕುಮಾರ್ ಪೂಜಾರಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪುತ್ತೂರು ನ್ಯಾಯಾಲಯದಲ್ಲಿ ಪ್ರಕರಣದ ವಾದ ವಿವಾದ ನಡೆದಿತ್ತು. ೨೦ ಜನ ಸಾಕ್ಷೀದಾರರನ್ನು ವಿಚಾರಣೆಗೊಳಪಡಿಸಲಾಗಿತ್ತು. ಇದೀಗ ತೀರ್ಪು ಪ್ರಕಟಿಸಿರುವ ನ್ಯಾಯಾಲಯ ಸತೀಶ್ ಪೂಜಾರಿಯವರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. ಆರೋಪಿ ಪರ ವಕೀಲರಾದ ದೇವಾನಂದ ಕೆ., ರಾಕೇಶ್ ಬಲ್ನಾಡು ಮತ್ತು ಸುಚಿತಾ ಕೂಡೇಲುರವರು ವಾದಿಸಿದ್ದರು.