✍ಉಮಾಪ್ರಸಾದ್ ರೈ ನಡುಬೈಲು
ಪುತ್ತೂರು: ಕಡಬ ತಾಲೂಕಿನ ಕುದ್ಮಾರು ಗ್ರಾಮ ವಿಭಿನ್ನ ಕ್ಷೇತ್ರಗಳಿಗೆ ಹಲವಾರು ಪ್ರತಿಭಾವಂತರನ್ನು ಕೊಡುಗೆಯಾಗಿ ನೀಡಿದ ಊರಾಗಿದೆ. ಕುದ್ಮಾರು ಶಾಲಾ ಹಳೆಯ ವಿದ್ಯಾರ್ಥಿಯಾಗಿರುವ ಉದಯ್ ಬರೆಪ್ಪಾಡಿರವರು ಶಾಲಾ ದಿನಗಳಿಂದಲೇ ನಾಟಕಗಳಲ್ಲಿ ಎತ್ತಿದ ಕೈ. ಉದಯ್ರವರು ರಂಗಭೂಮಿ, ಬೆಳ್ಳಿತೆರೆ, ಕಿರುತೆರೆಯಲ್ಲಿ ಅಭಿನಯಿಸಿದ್ದಾರೆ. ಉದಯ್ರವರ ತಂದೆ ತಿಮ್ಮಪ್ಪ ಪೂಜಾರಿಯವರು ನಾಟಕ ರಚನೆಕಾರ, ಕಳನಟ. 20 ವರ್ಷಗಳ ಹಿಂದೆ ಅವರು ಖಳನಾಯಕನಾಗಿ ಅಭಿನಯಿಸಿದ `ಬದುಕೊಂಜಿ ನಾಟಕ’ ನಾಟಕದ ಪಾತ್ರವನ್ನು ಇಂದಿಗೂ ಜನ ಮಾತನಾಡಿಕೊಳ್ಳುತ್ತಾರೆಂದರೆ ಅದು ಅವರ ನಟನ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಹೀಗೆ ತಂದೆಯಿಂದ ರಕ್ತಗತವಾಗಿ ಬಂದ ಕಲೆಗೆ ಗುರುವಾಗಿ ಸಿಕ್ಕಿದವರು ಸುಬ್ಬು ಸಂಟ್ಯಾರು. ಮರ್ಲ್ ಕಟ್ಟೊಡ್ಚಿ ನಾಟಕದ ಮೂಲಕ ಬೊಳ್ಳಿ ಬೊಲ್ಪು ನಾಟಕ ತಂಡಕ್ಕೆ ಉದಯ್ರವರ ಪರಿಚಯವಾಯಿತು. ಆ ಬಳಿಕ 50ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ. 300ಕ್ಕಿಂತಲೂ ನಾಟಕ ಪ್ರದರ್ಶನಗಳು ರಂಗಭೂಮಿಯಲ್ಲಿ ಸಾಕಷ್ಟು ಕಲಿತುಕೊಳ್ಳಲು ಸಹಕಾರಿಯಾಯಿತು.
`ಎನ್ನ’ ಎಂಬ ತುಳು ಸಿನಿಮಾದ ಮೂಲಕ ಕೋಸ್ಟಲ್ ವುಡ್ಗೆ ಎಂಟ್ರಿ ಕೊಟ್ಟಿದ್ದು, ‘ನಾಗೇಶ ನಿವಾಸ’ ಎಂಬ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸುವರ್ಣ ಚಾನೆಲ್ನಲ್ಲಿ ಪ್ರಸಾರವಾಗುತ್ತಿರುವ ಮೌನರಾಗ ದಾರವಾಹಿಯ ಒಂದು ಚಿಕ್ಕ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಾಮಿಡಿ, ಸೆಂಟಿಮೆಂಟ್, ವಿಲನ್ ಹೀಗೆ ಯಾವುದೇ ಪಾತ್ರದಲ್ಲಿ ಲೀಲಾಜಾಲವಾಗಿ ಅಭಿನಯಿಸುವ ಉದಯ್ರವರು ವೃತ್ತಿಯಲ್ಲಿ ಸೇಲ್ಸ್ಮೆನ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಉದಯ್ರವರು ಬರೆದ ಮಕ್ಕಳ ನಾಟಕಗಳು ಪ್ರಪಂಚ ನನ್ನ ಕೈಯಲ್ಲಿ, ಬದುಕಲು ಬಿಡಿ, ಒಯಿಕ್ಲ ಆವಂದಿನಕುಲು, ಯಾನ್ ಪನ್ಪುಜಿ ಯಶಸ್ವಿ ಪ್ರದರ್ಶನ ನೀಡಿದೆ. ಸುದ್ದಿ ಪತ್ರಿಕೆಯ ವಿಶೇಷಾಂಕದಲ್ಲಿ ಪ್ರಕಟವಾದ ಗೊತ್ತಿದ್ದವರು ಹೇಳಿ ಮಾರಾಯ್ರೇ.. ಹಾಸ್ಯ ಲೇಖನಕ್ಕೆ ಅದ್ಭುತ ಜನ ಪ್ರಶಂಸೆ ಸಿಕ್ಕಿದೆ. ಉದಯ್ ತಾನು ಕಲಿತ ಶಾಲೆ ತನ್ನ ಕಲಾ ಗುರುಗಳ ಬೆನ್ನುತಟ್ಟಿ ಪ್ರೋತ್ಸಾಹಿಸುವ ಜನರು, ತಂದೆ ತಾಯಿ, ತಾನು ನಡೆದು ಬಂದ ದಾರಿಯನ್ನು ನೆನಪಿಸಿಕೊಳ್ಳುತ್ತಾರೆ. ಅವರಿಗೆ ಒಳ್ಳೆಯ ಪಾತ್ರಗಳು ಸಿಗುವ ಮೂಲಕ ಕಲಾಕ್ಷೇತ್ರದಲ್ಲಿ ಹೆಸರನ್ನು ಮಾಡಲಿ…