ಪಿಯುಸಿಯಲ್ಲೂ ಐಚ್ಚಿಕ ಭಾಷೆಯಾಗಿ ತುಳು ಕಲಿಕೆಗೆ ಅವಕಾಶ ಕೋರಿ ಸರಕಾರಕ್ಕೆ ಮನವಿ: ಎ.ಸಿ.ಭಂಡಾರಿ
ರಾಮಕುಂಜ: ಪಿಯುಸಿಯಲ್ಲಿ ಐಚ್ಛಿಕ ಭಾಷೆಯಾಗಿ ತುಳು ಭಾಷೆ ಕಲಿಕೆಗೆ ವಿದ್ಯಾರ್ಥಿಗಳಿಗೆ ಅವಕಾಶ ನೀಡುವಂತೆ ಕೋರಿ ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಅನುಮತಿ ಸಿಗವ ನಿರೀಕ್ಷೆ ಇದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕುಡ್ಲ ಇದರ ಅಧ್ಯಕ್ಷ ಎ.ಸಿ.ಭಂಡಾರಿಯವರು ಹೇಳಿದರು.
ಅವರು ಜೂ.29ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ಸಭಾಂಗಣದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ರಾಮಕುಂಜ ನೇತ್ರಾವತಿ ತುಳು ಕೂಟದ ಸಹಯೋಗದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆಶ್ರಯದಲ್ಲಿ ನಡೆದ ತುಳು ಭಾಷೆ ಕಲಿಯುತ್ತಿರುವ ವಿದ್ಯಾರ್ಥಿಗಳ ಹಾಗೂ ತುಳುಕೂಟ ಸದಸ್ಯರ ‘ರಸಮಂಟಮೆ'(ವಿವಿಧ ಸ್ಪರ್ಧೆಗಳು) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೌಢಶಾಲೆಯಲ್ಲಿ ೩ನೇ ಐಚ್ಛಿಕ ಭಾಷೆಯಾಗಿ ತುಳು ಕಲಿಸಲಾಗುತ್ತಿದೆ. ದ.ಕ.ಜಿಲ್ಲೆಯ ೪೨ ಪ್ರೌಢಶಾಲೆಗಳಲ್ಲಿ ತುಳು ಭಾಷೆ ಕಲಿಸಲಾಗುತ್ತಿದೆ. ಅದೇ ರೀತಿ ತುಳು ಭಾಷೆಯಲ್ಲಿ ಎಂ.ಎ.ತರಗತಿಯೂ ಆರಂಭಗೊಂಡಿದೆ. ಪದವಿಯಲ್ಲೂ ಐಚ್ಛಿಕ ಭಾಷೆಯಾಗಿ ತುಳು ಕಲಿಕೆಗೆ ವಿಶ್ವ ವಿದ್ಯಾನಿಲಯ ಅವಕಾಶ ಮಾಡಿಕೊಟ್ಟಿದೆ. ಪಿಯುಸಿಯಲ್ಲೂ ಐಚ್ಛಿಕ ಭಾಷೆಯಾಗಿ ತುಳು ಕಲಿಕೆಗೆ ಅವಕಾಶ ನೀಡುವಂತೆ ಕೋರಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದು ಮುಂದಿನ ವರ್ಷದಿಂದ ಆರಂಭವಾಗುವ ನಿರೀಕ್ಷೆ ಇದೆ ಎಂದು ಎ.ಸಿ.ಭಂಡಾರಿ ಹೇಳಿದರು. ತುಳುನಾಡ ಗೀತೆ ರಚನೆ ಬಗ್ಗೆ ಅಕಾಡೆಮಿ ಸದಸ್ಯರ ಜೊತೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ತುಳು ಭಾಷೆಯ ೧೮೦ ಪುಸ್ತಕಗಳನ್ನು ಕರ್ನಾಟಕ ತುಳು ಅಕಾಡೆಮಿ ಪ್ರಕಟಿಸಿದೆ. ಗ್ರಂಥಾಲಯಗಳಿಂದ ಬೇಡಿಕೆ ಬಂದಲ್ಲಿ ಉಚಿತವಾಗಿ ನೀಡಲು ಸಿದ್ಧರಿದ್ದೇವೆ ಎಂದು ಹೇಳಿದ ಎ.ಸಿ.ಭಂಡಾರಿಯವರು, ಆಂಗ್ಲ ಭಾಷೆಗೆ ನಮ್ಮ ವಿರೋಧವಿಲ್ಲ, ಇಂಗ್ಲಿಷ್ ಸಂಸ್ಕೃತಿ ಬೇಡ, ತುಳುಭಾಷೆ, ತುಳುಸಂಸ್ಕೃತಿ ಬೆಳೆಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಅಕಾಡೆಮಿ ವತಿಯಿಂದ ಕಳೆದ ವರ್ಷ ಶಾಲೆ, ಕಾಲೇಜುಗಳಲ್ಲಿ ೩೬ ವಿವಿಧ ಕಾರ್ಯಕ್ರಮ ನಡೆಸಲಾಗಿದೆ ಎಂದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಣಾಧಿಕಾರಿ ಡಾ.ಸದಾನಂದ ಪೆರ್ಲರವರು ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿಯ ವ್ಯಾಮೋಹದಿಂದ ತುಳು ಸಂಸ್ಕೃತಿ ಕಣ್ಮರೆಯಾಗುತ್ತಿದೆ. ಜಿಲ್ಲೆಯ ಶಿಕ್ಷಣ ಸಂಸ್ಥೆಗಳು ದಾಖಲಾತಿ, ಫಲಿತಾಂಶ ಹೆಚ್ಚಳದ ಮೇಲೆ ಅವಲಂಬಿತವಾಗಬಾರದು. ತುಳು ಸಂಸ್ಕೃತಿ ಉಳಿಸುವ ಕೆಲಸ ಎಲ್ಲಾ ಶಾಲೆ, ಕಾಲೇಜುಗಳಲ್ಲಿಯೂ ಆಗಬೇಕು. ಯಕ್ಷಗಾನ, ದೇವತಾರಾಧನೆ, ಭೂತಾರಾಧನೆ ಸೇರಿದಂತೆ ತುಳು ಸಂಸ್ಕೃತಿಯ ಬಗ್ಗೆ ತಿಳುವಳಿಕೆ ನೀಡುವ ಕೆಲಸ ಆಗಬೇಕು. ತುಳು ಆಚರಣೆಗಳು ೧ ದಿನಕ್ಕೆ ಸೀಮಿತಗೊಳ್ಳದೇ ನಿತ್ಯೋತ್ಸವ ಆಗಬೇಕು. ತುಳು ಸಂಸ್ಕೃತಿಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯುವ ಕೆಲಸ ಆಗಬೇಕೆಂದು ಹೇಳಿದರು. ‘ತುಳು ಪರಪೋಕು ಕರಜನ’ ಉದ್ಘಾಟನೆ ನೆರವೇರಿಸಿದ ಅಖಿಲ ಭಾರತ ತುಳು ಒಕ್ಕೂಟ, ಕುಡ್ಲ ಇದರ ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ನಿಟ್ಟೆ ಮಾತನಾಡಿ, ತುಳು ಭಾಷೆಯನ್ನು ೮ನೇ ಪರಿಚ್ಚೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಇನ್ನಷ್ಟೂ ಕೆಲಸ ಆಗಬೇಕಿದೆ. ತುಳು ಭಾಷೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ರಾಮಕುಂಜ ಆಂಗ್ಲಮಾಧ್ಯಮ ಪ್ರೌಢಶಾಲೆ ಆಯೋಜಿಸಿರುವ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದರು.
ಮುಖ್ಯ ಅತಿಥಿಯಾಗಿದ್ದ ಉಡುಪಿ ಅರಸು ಮನೆತನದ ವಂಶಸ್ಥ ಡಾ.ಆಕಾಶ್ರಾಜ್ ಆಲುಪ ಮಾತನಾಡಿ, ಕಾಸರಗೋಡು,ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ತುಳು ಭಾಷೆಯ ಜಿಲ್ಲೆಗಳಾಗಬೇಕು. ಆದ್ದರಿಂದ ತುಳುಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಮೂರು ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ನಡೆಯಬೇಕು. ತುಳುನಾಡಿನ ಕೊಡುಗೆ ಪ್ರಪಂಚದಲ್ಲೇ ಹರಡಿದೆ. ತುಳು ನಾಡಗೀತೆ ರಚನೆ, ಗ್ರಂಥಾಲಯಗಳಿಗೆ ತುಳು ಪತ್ರಿಕೆ, ತುಳು ಪುಸ್ತಕ ಪೂರೈಸುವ ನಿಟ್ಟಿನಲ್ಲಿ ಅಕಾಡೆಮಿ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ತುಳು ಒರಿಪುಗ ಅಂತರ್ಜಾಲ ಕೂಟದ ಅಧ್ಯಕ್ಷ, ತುಳು ಸಾಹಿತ್ಯ ರತ್ನ ಪ್ರಶಸ್ತಿ ಪುರಸ್ಕೃತ ಮಹೇಂದ್ರನಾಥ ಸಾಲೆತ್ತೂರು, ನ್ಯಾಯವಾದಿ ಮತ್ತು ನೋಟರಿ ಅಕ್ಷತಾ ಆದರ್ಶ ಮಂಗಳೂರು, ಟೈಮ್ ಆಫ್ ಕುಡ್ಲ ಪತ್ರಿಕೆಯ ಸಂಪಾದಕ ಶಶಿ ಬಂದಿಮಾರು, ಉಬಾರ್ ತುಳು ಕೂಡುಕಟ್ಟ್ದ ಅಧ್ಯಕ್ಷ ಡಾ.ನಿರಂಜನ ರೈ, ರಾಮಕುಂಜ ಗ್ರಾ.ಪಂ.ಅಧ್ಯಕ್ಷ ಪ್ರಶಾಂತ್ ಆರ್.ಕೆ.,ರವರು ಸಂದರ್ಭೋಚಿತವಾಗಿ ಮಾತನಾಡಿದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ ಶೆಟ್ಟಿ ಕಳೆಂಜ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನಿರಂಜನ ರೈ ಮಠಂತಬೆಟ್ಟು, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲಾ ಆಡಳಿತಾಧಿಕಾರಿ ಆನಂದ, ಮುಖ್ಯಶಿಕ್ಷಕಿ ಗಾಯತ್ರಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಲೋಹಿತ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲಾ ಕಾರ್ಯದರ್ಶಿ, ರಾಮಕುಂಜ ನೇತ್ರಾವತಿ ತುಳುಕೂಟದ ಅಧ್ಯಕ್ಷ ಕೆ.ಸೇಸಪ್ಪ ರೈಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಸತಿ ನಿಲಯದ ಪಾಲಕ ರಮೇಶ್ ರೈ ವಂದಿಸಿದರು. ಶಿಕ್ಷಕಿ ಸರಿತಾ ಕಾರ್ಯಕ್ರಮ ನಿರೂಪಿಸಿದರು.
ತುಳು ಸಂಸ್ಕೃತಿ ಅನಾವರಣ:
೧ ದಿನ ನಡೆದ ರಸಮಂಟಮೆ ಕಾರ್ಯಕ್ರಮ ತುಳು ಸಂಸ್ಕೃತಿಯನ್ನು ಅನಾವರಣಗೊಳಿಸಿದೆ. ತುಳು ಸಂಸ್ಕೃತಿ ಬಿಂಬಿಸುವ, ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ವಿವಿಧ ವಸ್ತುಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಇದಲ್ಲದೇ ಕಾರ್ಯಕ್ರಮದ ಪ್ರಧಾನ ವೇದಿಕೆಗೆ ಕೋಟಿ ಚೆನ್ನಯರ ಹೆಸರಿಡಲಾಗಿದ್ದು ವೇದಿಕೆಯನ್ನು ತುಳುನಾಡಿನ ಸಂಸ್ಕೃತಿಯಂತೆ ಶೃಂಗರಿಸಲಾಗಿತ್ತು. ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಲ್ಯಾಟಿನ್ಗೆ ಬೆಂಕಿ ಹಚ್ಚಿ ಉರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಅತಿಥಿಗಳಿಗೆ ಅಡಿಕೆ, ಎಳೆ, ಬೆಲ್ಲ, ನೀರು ಕೊಟ್ಟು ತುಳು ಸಂಪ್ರದಾಯದಂತೆ ಸ್ವಾಗತಿಸಿ ಗೌರವಿಸಲಾಯಿತು. ಕೊನೆಗೆ ಹರಿವಾಣ, ತೆಂಗಿನಕಾಯಿ,ದೀಪ ನೀಡಿ ಸತ್ಕರಿಸಲಾಯಿತು. ಅಲ್ಲದೇ ಎಲ್ಲರಿಗೂ ಮುಂಡಾಸು ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಹಾಗೂ ತುಳುಕೂಟದ ಸದಸ್ಯರಿಗೆ ಸಂಜೆಯ ತನಕ ವಿವಿಧ ಸ್ಪರ್ಧೆ ನಡೆಯಿತು. ಸಂಜೆ ಸಮಾರೋಪ ಸಮಾರಂಭ ನಡೆಯಿತು.
ಸನ್ಮಾನ:
ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ತುಳು ಶಿಕ್ಷಕಿ, ತುಳು ಸಂಸ್ಕೃತಿ, ಭಾಷೆಗೆ ಪ್ರೋತ್ಸಾಹ ನೀಡುತ್ತಿರುವ ಸರಿತಾ ಜನಾರ್ದನರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ದೊಂಪದ ಬಲಿ ಪುಸ್ತಕ ಬಿಡುಗಡೆ:
ನಿವೃತ್ತ ಶಿಕ್ಷಕ ಗೋಪಾಲ ಶೆಟ್ಟಿ ಕಳೆಂಜರವರು ಬರೆದಿರುವ ತುಳುನಾಡಿನ ಆಚರಣೆಗಳ ಕುರಿತ ‘ದೊಂಪದ ಬಲಿ’ಪುಸ್ತಕವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿಯವರು ಬಿಡುಗಡೆಗೊಳಿಸಿದರು.
ಗೌರವಾರ್ಪಣೆ:
ತುಳು ಸಂಸ್ಕೃತಿ, ತುಳು ಭಾಷೆಗೆ ಪ್ರೋತ್ಸಾಹ ನೀಡುತ್ತಿರುವ ಕುಶಾಲಕ್ಷಿ ಕಣ್ವತೀರ್ಥ, ನಾರಾಯಣ ರೈ ಕುಕ್ಕುವಳ್ಳಿ, ವಿಜಯಲಕ್ಷ್ಮೀ ಕಟೀಲು, ನರೇಶ್ ಸಸಿಹಿತ್ಲು, ಅಕ್ಷತ್ರಾಜ್ ಪೆರ್ಲ, ಚಿದಾನಂದ ನಾಯಕ್, ನಿವೃತ್ತ ಶಿಕ್ಷಕ ಗುಮ್ಮಣ್ಣ ಗೌಡ ರಾಮಕುಂಜ, ಉಮೇಶ್ ಶೆಟ್ಟಿ ಸಾಯಿರಾಂ, ಧನ್ಯಶ್ರೀ ಆಲಂಕಾರು, ಸುಮನಾ ಕೆರೆಕರೆಯವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ‘ತುಳು ಪರಪೋಕು ಕರಜನ’ಕ್ಕೆ ತುಳು ಸಂಸ್ಕೃತಿ ಬಿಂಬಿಸುವ ಹಳೆಯ ಸಾಮಾಗ್ರಿಗಳನ್ನು ಒದಗಿಸಿದ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರನ್ನೂ ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು. ಶಿಕ್ಷಕಿ ಜ್ಯೋತಿಯವರು ಹೆಸರು ವಾಚಿಸಿದರು.