ವಿದ್ಯಾರ್ಥಿಗಳು ದುಶ್ಚಟ, ದುರ್ವಸ್ಯನಗಳಿಗೆ ಬಲಿಯಾಗಬೇಡಿ; ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ರಾಮಕುಂಜ: ರಾಮಕುಂಜ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜು ಹಾಗೂ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಕಳೆದ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡ ಹಾಗೂ ವಿವಿಧ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೂ.29ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ವಿದ್ಯಾರ್ಥಿಗಳನ್ನು ಹಾಗೂ ಅವರ ಪೋಷಕರನ್ನು ಗೌರವಿಸಿ ಆಶೀರ್ವದಿಸಿದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು, ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರ ಪಾಲಿಗೆ ಇದೊಂದು ದೊಡ್ಡ ಸಂಭ್ರಮವಾಗಿದೆ. ವಿದ್ಯಾರ್ಥಿಗಳು ಸಾಧನೆ ಮಾಡುವುದರೊಂದಿಗೆ ನಮ್ಮ ಬದುಕಿಗೆ ಆಸರೆಯಾಗಿರುವ ತಂದೆ, ತಾಯಿಗಳಿಗೂ ಗೌರವ ಕೊಡಬೇಕು. ವಿದ್ಯಾರ್ಥಿ ಜೀವನ ಸಾಧನೆ ಮಾಡಲು ಇರುವಂತದ್ದು. ಯಾವುದೇ ದುಶ್ಚಟ, ದುರ್ವಸ್ಯನಗಳಿಗೆ ಬಲಿಯಾಗದೆ ಕಲಿಕೆಯ ಕಡೆಗೆ ಗಮನ ಕೊಡಬೇಕೆಂದು ನುಡಿದರು. ಸಾಧನೆಯ ಮೂಲಕ ತಾವು ಬೆಳೆಯುವುದರೊಂದಿಗೆ ಸಂಸ್ಥೆಯ ಬೆಳವಣಿಗೆಗೂ ಕಾರಣರಾಗಿರಿ, ವಿದ್ಯಾರ್ಥಿಗಳಿಗೆ ಶಿಕ್ಷಕರ, ಪೋಷಕರ ಪ್ರೋತ್ಸಾಹವೂ ಇರಲಿ. ಶ್ರಮಪಟ್ಟದಲ್ಲಿ ಕಲಿಕೆಯಲ್ಲಿ ಸಾಧನೆ ಮಾಡಲು ಸಾಧ್ಯವಿದೆ. ಈ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಗಮನಕೊಡಬೇಕೆಂದು ಸ್ವಾಮೀಜಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ಕೆ.ರಾಧಾಕೃಷ್ಣರವರು, ಗ್ರಾಮೀಣ ಪ್ರದೇಶದಲ್ಲಿರುವ ರಾಮಕುಂಜೇಶ್ವರ ವಿದ್ಯಾಸಂಸ್ಥೆಯೂ ಸಂಸ್ಕಾರಯುತ ಶಿಕ್ಷಣ ನೀಡುತ್ತಾ ಬಂದಿದೆ. ಇಲ್ಲಿನ ಪ.ಪೂ.ಕಾಲೇಜು ಹಾಗೂ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಒಟ್ಟು ೧ ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಸಿಇಟಿ, ನೀಟ್, ಎನ್ಟಿಎಸ್ಇ, ಎನ್ಎಂಎಂಎಸ್ ಪರೀಕ್ಷೆಗೂ ತರಬೇತಿ ನೀಡಲಾಗುತ್ತಿದ್ದು ಈ ಪರೀಕ್ಷೆಯಲ್ಲೂ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಿದ್ದಾರೆ. ಪ್ರತಿವರ್ಷವೂ ಹೊಸ ತಂತ್ರಜ್ಞಾನ ಅಳವಡಿಸಲಾಗುತ್ತಿದ್ದು ವಿಜ್ಞಾನ ಪ್ರಯೋಗಾಲಯ, ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಎಂಬಂತೆ ಸಿಸ್ಕೋ ಸಂಸ್ಥೆಯವರ ಸಹಕಾರದೊಂದಿಗೆ ಗಣಿತ ಪ್ರಯೋಗಾಲಯವನ್ನೂ ಆರಂಭಿಸಲಾಗಿದೆ. ನಿಟ್ಟೆ ವಿದ್ಯಾಸಂಸ್ಥೆಯವರು ಕಾಸರಗೋಡು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ನೀಡುವ ಅತ್ಯುತ್ತಮ ಕನ್ನಡ ಮಾಧ್ಯಮ ಪ್ರೌಢಶಾಲಾ ಪ್ರಶಸ್ತಿಗೂ ಸಂಸ್ಥೆ ಭಾಜನವಾಗಿದ್ದು ೧೦ ಲಕ್ಷ ರೂ.ನಗದು ಪುರಸ್ಕಾರ ಪಡೆದುಕೊಂಡಿದೆ ಎಂದು ಹೇಳಿದರು. ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲಾ ಕಾರ್ಯದರ್ಶಿ ಕೆ.ಸೇಸಪ್ಪ ರೈ, ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ.ಶಾಲಾ ನಿವೃತ್ತ ಮುಖ್ಯಶಿಕ್ಷಕ ಟಿ.ನಾರಾಯಣ ಭಟ್, ಆಡಳಿತ ಸಮಿತಿ ಸದಸ್ಯರಾದ ಲಕ್ಷ್ಮೀ ನಾರಾಯಣ ರಾವ್ ಆತೂರು, ಲಿಂಗಪ್ಪ ಗೌಡ ಕಡೆಂಬ್ಯಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್ ಸ್ವಾಗತಿಸಿ, ಪ್ರಭಾರ ಪ್ರಾಂಶುಪಾಲ ಹರಿನಾರಾಯಣ ಆಚಾರ್ರವರು ವಂದಿಸಿದರು. ಉಪನ್ಯಾಸಕ ನವೀನ್ ಎಸ್.ಎ., ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
೧೧೬ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ
ಕಳೆದ ಶೈಕ್ಷಣಿಕ ಸಾಲಿನಲ್ಲಿ ಪ.ಪೂ.ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಸಾಧನೆ ಮಾಡಿದ ಒಟ್ಟು ೧೧೬ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಎಸ್ಎಸ್ಎಲ್ಸಿಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡ ೨೫ ವಿದ್ಯಾರ್ಥಿಗಳಿಗೆ, ೮ ಮತ್ತು ೯ನೇ ತರಗತಿಯಲ್ಲಿ ಕಲಿಕೆಯಲ್ಲಿ ಹಿಂದುಳಿದು ಶಿಕ್ಷಕರಿಂದ ವಿಶೇಷ ತರಬೇತಿ ಪಡೆದುಕೊಂಡು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ೪೦೦ಕ್ಕಿಂತ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ೧೧ ವಿದ್ಯಾರ್ಥಿಗಳಿಗೆ, ಎನ್ಎಂಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೇಂದ್ರ ಸರಕಾರದ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದುಕೊಂಡ ೧೪ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಮಾಡಲಾಯಿತು. ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿಯ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡ ೬೬ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಸನ್ಮಾನ:
ನಿಟ್ಟೆ ವಿದ್ಯಾಸಂಸ್ಥೆಯ ವತಿಯಿಂದ ಅತ್ಯುತ್ತಮ ಕನ್ನಡ ಮಾಧ್ಯಮ ಪ್ರೌಢಶಾಲೆ ಪ್ರಶಸ್ತಿಗೆ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್ರವರನ್ನು ಆಡಳಿತ ಮಂಡಳಿ ಪರವಾಗಿ ಸ್ವಾಮೀಜಿಯವರು ಸನ್ಮಾನಿಸಿದರು.
ಗಣಿತ ಪ್ರಯೋಗಾಲಯ ಲೋಕಾರ್ಪಣೆ:
ಸಿಸ್ಕೋ ಸಂಸ್ಥೆಯವರ ಸಹಕಾರದೊಂದಿಗೆ ಆರಂಭಿಸಲಾದ ಸುಸಜ್ಜಿತ ಗಣಿತ ಪ್ರಯೋಗಾಲಯವನ್ನು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಲೋಕಾರ್ಪಣೆ ಮಾಡಿದರು.