- ಉತ್ಪಾದನೆ, ದುಡಿತಕ್ಕೆ ಪೂರಕವಾಗಿ ಆರ್ಥಿಕತೆ ಬೆಳವಣಿಗೊಂಡಿಲ್ಲ – ಸಂಜೀವ ಮಠಂದೂರು
- ಊರ ಗೌಡ, ಮಾಗಣೆ ಗೌಡರ ಒಕ್ಕೂಟಕ್ಕೆ ಸಿದ್ಧತೆ – ಹೆಚ್.ಡಿ.ಶಿವರಾಮ್
- ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ – ರಾಧಾಕೃಷ್ಣ ಗೌಡ
- ಸ್ವಸಹಾಯ ಸಂಘದಿಂದ ಸಮಾಜ ಸೇವಾ ನಿಧಿ – ಮನೋಹರ್ ಡಿ.ವಿ
- ಉಚಿತ ಯೋಗ ಶಿಬಿರ – ಮೀನಾಕ್ಷಿ ಡಿ ಗೌಡ
ಪುತ್ತೂರು: ಗೌಡ ಸಮಾಜ ಕೃಷಿಯ ಜೊತೆ ಇನ್ನಷ್ಟು ವ್ಯವಹಾರ ಆರಂಭ ಮಾಡುವ ಮೂಲಕ ಇತರರಿಗೆ ಮಾದರಿ ಆಗಬೇಕು. ಆದರೆ ನಮ್ಮ ಉತ್ಪಾದನೆ, ದುಡಿತಕ್ಕೆ ಪೂರಕವಾಗಿ ಆರ್ಥಿಕತೆ ಇನ್ನೂ ಬೆಳವಣಿಗೆಗೊಂಡಿಲ್ಲ ಎಂದು ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷರಾದ ಶಾಸಕ ಸಂಜೀವ ಮಠಂದೂರು ಹೇಳಿದರು.
ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಜೂ. 30ರಂದು ನಡೆದ ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಅವರು ಮಾತನಾಡಿದರು. ನಾವು ಯಾವಾಗಲು ಸರ್ವವ್ಯಾಪಿ, ಸರ್ವಸ್ಪರ್ಶಿ, ಸರ್ವಗ್ರಹಿಯಾಗಿ ಕೆಲಸ ಮಾಡಬೇಕು. ಯುವಕರನ್ನು ಮತ್ತು ಪ್ರಬುದ್ಧರನ್ನು ಜೊತೆಯಾಗಿ ಕೊಂಡುಹೋಗುವ ಕೆಲಸ ಗೌಡ ಸಂಘದಿಂದ ನಡೆಯುತ್ತಿದ್ದು ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ರೀತಿಯಲ್ಲಿ ಚಿರಕಾಲ ನೆನಪಿಸುವ ಕಾರ್ಯ ನಡೆಯಬೇಕೆಂದರು. ಈ ನಿಟ್ಟಿನಲ್ಲಿ ಸಂಘದ ಮೂಲಕ ಒಂದಷ್ಟು ಸ್ಪರ್ಧಾತ್ಮಕ ಪರೀಕ್ಷೆಗಳ ಎದುರಿಸುವ ಹಾಗು ಸ್ವ ಉದ್ಯೋಗ ಸೃಷ್ಟಿಸುವ ಮಾಹಿತಿ ಕಾರ್ಯಗಾರ ನಡೆಯಬೇಕೆಂದರು.
ಅಭಿವೃದ್ಧಿ ಪರ ಚರ್ಚೆ ನಡೆಯಬೇಕು:
ಮಹಾಸಭೆಯು ಕೇವಲ ವರದಿ ವಾಚನ, ವಾರ್ಷಿಕ ಲೆಕ್ಕಪತ್ರಕ್ಕೆ ಸೀಮಿತವಾಗದೆ ಒಂದಷ್ಟು ಸಮಾಜದ ಅಭಿವೃದ್ಧಿಯ ಚರ್ಚೆ ನಡೆಯಬೇಕು. ಚರ್ಚೆ ನಡೆದಾಗ ಉತ್ತಮ ಮಾರ್ಗದರ್ಶನ ಸಿಗುತ್ತದೆ. ಗ್ರಾಮ ಸಮಿತಿಗಳಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಬೇಕು ಎಂದ ಸಂಜೀವ ಮಠಂದೂರು ಅವರು ಗೌಡ ಸಮಾಜದ ಆರಂಭದ ಶಾಸಕರಾದ ಕೂಜುಗೋಡು ವೆಂಕಟ್ರಮಣ ಗೌಡ, ಹಿರಿಯರಾದ ಕುರುಂಜಿ ವೆಂಟಕ್ರಮಣ ಗೌಡರಂತೆ ನಮ್ಮ ಸಮಾಜದ ಮಂದಿ ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಸಭಾ ಭವನ ಹವಾನಿಯಂತ್ರಿತವಾಗಬೇಕು:
ಯಾವುದೇ ಸಮಾಜದವರಾಗಲಿ ಸಭೆ ಸಮಾರಂಭ ಮಾಡಬೇಕಾದರೆ ಮೊದಲು ಒಕ್ಕಲಿಗ ಗೌಡ ಸಮುದಾಯ ಭವನ ನೋಡಿ ಇಲ್ಲಿ ಅವಕಾಶ ಇಲ್ಲ ಎಂದಾಗ ಬೇರೆ ಕಡೆ ಹೋಗುವ ಸಂದರ್ಭ ಬರಬೇಕು. ಈ ನಿಟ್ಟಿನಲ್ಲಿ ಸಮುದಾಯ ಭವನವು ಮದುಮಗಳಂತೆ ಶೃಂಗಾರವಾಗಿರಬೇಕು ಅದಕ್ಕಾಗಿ ಸಭಾ ಭವನ ಸಂಪೂರ್ಣ ಹವಾನಿಯಂತ್ರಿತವಾಗಬೇಕು. ಎಂದ ಶಾಸಕ ಸಂಜೀವ ಮಠಂದೂರು ಅವರು ಸಭಾಭವನದ ಕೆಲಸ ಕಾರ್ಯಕ್ಕಾಗಿ ರೂ. 5ಲಕ್ಷವನ್ನು ನಾನು ನೀಡುತ್ತೇನೆ. ಜೊತೆಗೆ ನಾನು ವೈಯುಕ್ತಿವಾಗಿ ರೂ. 1ಲಕ್ಷ ನೀಡುತ್ತೇನೆ ಎಂದು ಭರವಸೆ ನೀಡಿದರು.
ಊರ ಗೌಡ, ಮಾಗಣೆ ಗೌಡರ ಒಕ್ಕೂಟಕ್ಕೆ ಸಿದ್ಧತೆ:
ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಹೆಚ್.ಡಿ.ಶಿವರಾಮ್ ಅವರು ಮಾತನಾಡಿ ಸಂಪ್ರದಾಯ ಬದ್ಧವಾಗಿರುವ ನಮ್ಮ ಸಮಾಜದಲ್ಲಿ ಇವತ್ತು ಸಂಪ್ರದಾಯದ ಕೊರತೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ಊರ ಗೌಡ ಮತ್ತು ಮಾಗಣೆ ಗೌಡರ ಒಕ್ಕೂಟ ರಚಿಸುವ ಕುರಿತು ಚಿಂತನೆ ಮಡಲಾಗಿದೆ. ಜೊತೆಗೆ ಸಮಾಜ ಬಾಂದವರಿಗಾಗಿ ಐಎಎಸ್, ಐಪಿಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತು ತರಬೇತಿ ಕಾರ್ಯಾಗಾರ ಆಯೋಜಿಸುವ ಕುರಿತು ಯುವ ಒಕ್ಕಲಿಗ ಗೌಡ ಸೇವಾ ಸಂಘ ಚಿಂತನೆ ನಡೆಸಿದೆ ಎಂದ ಅವರು ಒಟ್ಟಿನಲ್ಲಿ ಗೌಡ ಸಮಾಜ ಎಲ್ಲಾ ಕ್ಷೇತ್ರದಲ್ಲೂ ಉತ್ತಮ ರೀತಿಯಲ್ಲಿ ಮುಂದುವರಿಯಬೇಕೆಂದರು.
ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ:
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರಾಧಾಕೃಷ್ಣ ನಂದಿಲ ಅವರು ಯುವ ಗೌಡ ಸಂಘದ ವಾರ್ಷಿಕ ವರದಿ ಮಂಡಿಸಿ ಮುಂದಿನ ದಿನಗಳಲ್ಲಿ ಸಮಾಜದ ಯುವ ಜನತೆಗೆ ಉನ್ನತ ಮಟ್ಟದ ಶೈಕ್ಷಣಿಕ ಕ್ಷೇತ್ರಕ್ಕೆ ಹೋಗುವ ಸಂದರ್ಭದಲ್ಲಿ ಅಗತ್ಯವಿರುವ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ತರಬೇತಿ ಕಾರ್ಯಾಗಾರ ನಡೆಸಲಾಗುವುದು ಎಂದು ಹೇಳಿದರು.
ಸಮಾಜ ಸೇವಾ ನಿಧಿಯಂದ ಸೇವಾ ಕಾರ್ಯ:
ಒಕ್ಕಲಿಗ ಸ್ವ ಸಹಾಯ ಸಂಘದ ಅಧ್ಯಕ್ಷ ಮನೋಹರ್ ಡಿ.ವಿ ಅವರು ಮಾತನಾಡಿ ಸ್ವಸಹಾಯ ಸಂಘದಲ್ಲಿ ಒಟ್ಟು ೪೪೭ ತಂಡವಿದ್ದು, ಈಗಗಲೇ ಸುಮಾರು ರೂ. ೧.೮೩ ಕೋಟಿ ಉಳಿತಾಯ ಮಾಡಿದ್ದು, ಅದರಲ್ಲಿ ರೂ. ೧.೬೪ ಕೋಟಿ ಸಾಲ ವಿತರಣೆ ಮಾಡಲಾಗಿದೆ. ಸಂಘದ ಮೂಲಕ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಮಾಜ ಸೇವೆಗಾಗಿ ಸಮಾಜ ಸೇವಾ ನಿಧಿ ಆರಂಭಿಸಲಾಗಿದೆ. ಇತ್ತೀಚೆಗೆ ಸವಣೂರು ವಲಯದಿಂದ ನಡೆದ ಮೃತ್ಯುಂಜಯ ಹೋಮದಲ್ಲಿ ಉಳಿಕೆ ಹಣದ ಪೈಕಿ ರೂ. ೩೫ ಸಾವಿರವನ್ನು ಸಂಘದ ಸಮಾಜ ಸೇವಾ ನಿಧಿಗೆ ಅವರು ನೀಡಿದ್ದಾರೆ. ಮುಂದೆ ೧ ವರ್ಷದಲ್ಲಿ ೫೦೦ ತಂಡ ರಚನೆ ಮಾಡುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.
ಉಚಿತ ಯೋಗ ಶಿಬಿರ:
ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಡಿ ಗೌಡ ಅವರು ಮಾತನಾಡಿ ಮಹಿಳಾ ಸಂಘದ ಕಾರ್ಯಚಟುವಟಿಕೆಗೆ ಸಂಬಂಧಿಸಿ ಈಗಾಗಲೇ ನಿತ್ಯ ಉಚಿತ ಯೋಗ ಶಿಬಿರ ಸಮುದಾಯ ಭವನದ ಸಭಾಂಗಣದಲ್ಲಿ ನಡೆಸಲಾಗುತ್ತಿದೆ. ಸಮಾಜ ಬಾಂಧವರಿಗೆ ಮಾತ್ರವಲ್ಲದೆ ಇತರ ಸಮಾಜದ ಜನರಿಗೂ ಮುಕ್ತ ಅವಕಾಶವಿದ್ದು ಎಲ್ಲರು ಸದುಪಯೋಗ ಪಡೆಯುವಂತೆ ವಿನಂತಿಸಿದರು.
ಸನ್ಮಾನ: ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮತ್ತು ರಾಜ್ಯಮಟ್ಟದ ಛಾಯಾಗ್ರಾಹಕ ಪ್ರಶಸ್ತಿ ಪುರಸ್ಕೃತ ಎಮ್.ಎಸ್ ಶಿವರಾಮ್ ಮುಂಗ್ಲಿಮನೆ ಅವರನ್ನು ಸಂಘದ ವತಿಯಿಂದ ಶಾಸಕ ಸಂಜೀವ ಮಠಂದೂರು ಸನ್ಮಾನಿಸಿದರು. ಸನ್ಮಾನಿತರು ಅನಿಸಿಕೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ಪುರಸ್ಕಾರ:
೨೦೧೮-೧೯ನೇ ಸಾಲಿನಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.೯೫ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಹೆಚ್.ಡಿ.ಶಿವರಾಮ್ ಗೌಡ, ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ಜಿ.ಪಂ ಸದಸ್ಯೆ ಆಶಾ ತಿಮ್ಮಪ್ಪ ಗೌಡ, ಹಿರಿಯರಾದ ದೇರಣ್ಣ ಗೌಡ, ಶಿವಣ್ಣ ಗೌಡ ಬಿದಿರಾಡಿ, ವೀರಪ್ಪ ಗೌಡ ಅವರು ವಿದ್ಯಾರ್ಥಿಗಳನ್ನು ಗೌರವಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಗೌಡ ಕಣಜಾಲು ವಾರ್ಷಿಕ ವರದಿ ವಾಚಿಸಿದರು. ಖಜಾಂಜಿ ಸುರೇಶ್ ಗೌಡ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸಮುದಾಯ ಭವನದ ಲೆಕ್ಕಪತ್ರವನ್ನು ವಿಶ್ವನಾಥ ಗೌಡ ಅವರು ಮಂಡಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ, ಮಹಿಳಾ ಗೌಡ ಸಂಘದ ಅಧ್ಯಕ್ಷೆ ನೇತ್ರಾವತಿ, ಯುವ ಗೌಡ ಸಂಘದ ಕಾರ್ಯದರ್ಶಿ ಜಯಂತ್ ವೈ ಚಾರ್ವಾಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮುದಾಯ ಭವನದ ಉಸ್ತುವಾರಿ ಸಮಿತಿ ಅಧ್ಯಕ್ಷ ಪ್ರೇಮಾನಂದ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಶಿವರಾಮ್ ಹೆಚ್.ಡಿ ಸ್ವಾಗತಿಸಿ, ಉಪಾಧ್ಯಕ್ಷ ರವಿ ಮುಂಗ್ಲಿಮನೆ ವಂದಿಸಿದರು.