ಪುತ್ತೂರು: ಯಕ್ಷಗಾನದ ವಾದನ ಪರಿಕರಕ್ಕೆ ಮತ್ತು ವಾದನಕ್ಕೆ ಹೊಸ ಆಯಾಮವನ್ನು ತೋರಿದ ಪುತ್ತೂರು ಗೋಪಾಲ ಕೃಷ್ಣಯ್ಯ ಯಾನೆ ಪುತ್ತೂರು ಗೋಪಣ್ಣ ಅವರ ನೆನಪಿನ ಗೌರವವನ್ನು ಜೂ.30ರಂದು ನಿವೃತ್ತ ಮುಖ್ಯ ಶಿಕ್ಷಕ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದ ಪಾವಲಕೋಡಿ ಗಣಪತಿ ಭಟ್ಟರಿಗೆ ಪ್ರಧಾನ ಮಾಡಲಾಯಿತು.
ಬಪ್ಪಳಿಗೆ ಅಗ್ರಹಾರ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಕಾರ್ಯಕ್ರಮ ಆಯೋಜಿಸಿದ ಗೋಪಣ್ಣ ಅವರ ಪುತ್ರ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಮತ್ತು ಪಿ.ಜಿ ಚಂದ್ರಶೇಖರ್ ರಾವ್ ಕುಟುಂಬಸ್ಥರು ಗಣಪತಿ ಭಟ್ ಅವರನ್ನು ಗೌರವಿಸಿದರು. ಬಳಿಕ ಪಿ.ಜಿ.ಜಗನ್ನಿವಾಸ ರಾವ್ ಅವರು ಮಾತನಾಡಿ ತನ್ನ ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ತಪ್ಪುಗಳನ್ನು ತಿದ್ದಿ-ತೀಡಿ ಉತ್ತಮ ವಿದ್ಯಾರ್ಥಿಯಾಗಿ ರೂಪುಗೊಳಿಸಿದ ಪಾವಲಕೋಡಿ ಗಣಪತಿ ಭಟ್ ಅವರಿಗೆ ತನ್ನ ತಂದೆಯ ಹೆಸರಿನಲ್ಲಿ ನೀಡುವ ಗೌರವವನ್ನು ಸಮರ್ಪಿಸಲು ಅತ್ಯಂತ ಅಭಿಮಾನವಾಗುತ್ತಿದೆ ಎಂದರು.
ಸನ್ಮಾನ ಸ್ವೀಕರಿಸಿದ ಪಾವಲಕೋಡಿ ಗಣಪತಿ ಭಟ್ ಅವರು ಮಾತನಾಡಿ ಶಿಕ್ಷಕನಾಗಿ, ಸಂಸಾರಿಯಾಗಿ, ಕಲಾವಿದನಾಗಿ ನನ್ನನ್ನು ಯಕ್ಷಗಾನ ರೂಪಿಸಿದೆ. ಶಿಕ್ಷಕ ವೃತ್ತಿಯಲ್ಲಿ ಹಲವು ಉತ್ತಮ ಶಿಷ್ಯರನ್ನು ರೂಪಿಸುವ ಅವಕಾಶ ನನಗೆ ಸಿಕ್ಕಿದೆ. ನಾನು ಕಲಿಸಿದ ವಿದ್ಯಾರ್ಥಿಯೊಬ್ಬ ಇಂದು ನನ್ನನ್ನು ಗೌರವಿಸಿರುವುದು ನನಗೆ ಅಭಿಮಾನದ ವಿಷಯ ಎಂದರು. ಯಕ್ಷಗಾನ ಭಾಗವತ ಪುತ್ತೂರು ರಮೇಶ್ ಭಟ್ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮದಲ್ಲಿ ಪಿ.ಜಿ. ಚಂದ್ರಶೇಖರ ರಾವ್ ಮತ್ತು ಪಿ.ಜಿ. ಜಗನ್ನಿವಾಸ್ ರಾವ್ ಕುಟುಂಬಿಕರು ಉಪಸ್ಥಿತರಿದ್ದರು. ಯಕ್ಷಗಾನ ಅರ್ಥದಾರಿ ರಾಧಾಕೃಷ್ನ ಕಲ್ಚಾರ್ ಸ್ವಾಗತಿಸಿ, ವಂದಿಸಿದರು. ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಭೀಷ್ಮ ವಿಜಯ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.