Breaking News

ಬಕ್ರೀದ್ ಆಚರಣೆ ಶಾಂತಿಯುತವಾಗಿ ನಡೆಸಲು ಭದ್ರತೆ ಒದಗಿಸಿ ತಾ| ಮುಸ್ಲಿಂ ಸಂಯುಕ್ತ ಜಮಾಅತ್ ಸಭೆಯಲ್ಲಿ ಆಗ್ರಹ

Puttur_Advt_NewsUnder_1
Puttur_Advt_NewsUnder_1


ಅಕ್ರಮ ಗೋ ಸಾಗಾಟದಕ್ಕೆ ವಿರೋಧ:
ಅಕ್ರಮ ಗೋ ಮಾಂಸ ಮಾಡುವುದು, ಸಾಗಾಟ ಮಾಡುವುದನ್ನು ನಾವು ವಿರೋಧಿಸುತ್ತೇವೆ, ಅಂತಹ ಕೃತ್ಯಗಳನ್ನು ಖಂಡಿಸುವ, ವಿರೋಧಿಸುವ ಕೆಲಸ ಸಂಯುಕ್ತ ಜಮಾಅತ್‌ನಿಂದ ಆಗಬೇಕು ಈಗಾಗಲೇ ನಮ್ಮ ಜಮಾಅತ್‌ನಲ್ಲಿ ಈ ಬಗ್ಗೆ ಪ್ರತೀ ಮನೆಗೂ ತೆರಳಿ ಮನವರಿಕೆ ಮಾಡಿ ಕೊಟ್ಟು ಯಶಸ್ವಿಯಾಗಿದ್ದೇವೆ ಎಂದು ಎಂ.ಎಸ್ ಮುಹಮ್ಮದ್ ಹೇಳಿದರು.

ಕಳ್ಳತನ ಮಾಡಿದ ಅಥವಾ ರೋಗಗ್ರಸ್ಥ ಗೋವಿನ ಮಾಂಸಗಳೇ ಹೆಚ್ಚಾಗಿ ಲಭಿಸುತ್ತಿದ್ದು 95% ಗೋಮಾಂಸ ಹರಾಂ(ನಿಷಿದ್ಧ) ರೂಪದ್ದಾಗಿದೆ ಹಾಗಾಗಿ ಅಂತಹ ಗೋಮಾಂಸವನ್ನು ಬಹಿಷ್ಕರಿಸಿ ಆಡಿನ ಮಾಂಸ ಕೊಂಡುಕೊಳ್ಳುವ ಬಗ್ಗೆ ಆಲೋಚಿಸಬೇಕಾಗಿದೆ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಹೇಳಿದರು.

ಬಡವರ ಮನೆಯ ಹೆಣ್ಮಕ್ಕಳ ಮದುವೆಗೆ ಜಮಾಅತ್‌ನವರು ಬೇಡುವ ಸರ್ಟಿಫಿಕೇಟ್ ಕೊಡದೆ ಅಂತಹ ಕುಟುಂಬಗಳಿಗೆ ಸಾಧ್ಯವಾದಷ್ಟು ಧನ ಸಹಾಯವನ್ನು ತಮ್ಮ ಜಮಾಅತ್‌ನಿಂದಲೇ ವ್ಯವಸ್ಥೆ ಮಾಡಿಕೊಡಬೇಕು. ಅಥವಾ ಜಮಾಅತ್ ಪ್ರಮುಖರು ಗಣ್ಯರನ್ನು ಸಂಪರ್ಕಿಸಿ ಬಡ ಕುಟುಂಬಕ್ಕೆ ಸಹಾಯ ಕೊಡಿಸಬೇಕು ಎಂಬ ಅಭಿಪ್ರಾಯ ವ್ಯಕ್ತಗೊಂಡಿತು. ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಎಸ್.ಇಬ್ರಾಹಿಂ ಕಮ್ಮಾಡಿಯವರು ಈ ವಿಚಾರದಲ್ಲಿ ಉಪಯುಕ್ತ ಸಲಹೆಗಳನ್ನು ಸಭೆಗೆ ನೀಡಿದರು.

ಪುತ್ತೂರು: ಮುಂಬರುವ ಬಕ್ರೀದ್ ಆಚರಣೆ ಶಾಂತಿಯುತವಾಗಿ ನಡೆಯಲು ಸಂಬಂಧಪಟ್ಟ ಪೊಲೀಸ್ ಇಲಾಖೆ ಮತ್ತು ಸರಕಾರ ಸೂಕ್ತ, ಭದ್ರತೆ ಹಾಗೂ ರಕ್ಷಣೆ ಕೊಡಬೇಕು ಎಂಬ ಆಗ್ರಹ ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಸಭೆಯಲ್ಲಿ ವ್ಯಕ್ತವಾಯಿತು. ಸಭೆ ಸಂಪ್ಯ ಕಮ್ಮಾಡಿ ಸಂಯುಕ್ತ ಜಮಾಅತ್ ಸಭಾಂಗಣದಲ್ಲಿ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಎಸ್ ಇಬ್ರಾಹಿಂ ಕಮ್ಮಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ತ್ಯಾಗ ಮತ್ತು ಬಲಿದಾನದ ಸಂದೇಶ ಸಾರುವ ಬಕ್ರೀದ್ ಹಬ್ಬ ಆಚರಣೆಗೆ ಯಾವುದೇ ತೊಡಕುಂಟಾಗದ ರೀತಿಯಲ್ಲಿ ಮಾಡುವಂತಾಗಲು ಸಂಬಂಧಪಟ್ಟವರು ಅಗತ್ಯ ಕ್ರಮ ವಹಿಸಬೇಕೆಂದು ಸಂಯುಕ್ತ ಜಮಾಅತ್ ಶರೀಅತ್ ಸಲಹಾ ಮಂಡಳಿಯ ಎಸ್.ಬಿ ಮುಹಮ್ಮದ್ ದಾರಿಮಿ ಆಗ್ರಹಿಸಿದರು.

ಮುಸ್ಲಿಂ ಸಮುದಾಯ ಹಿಂದಿನ ಪರಿಸ್ಥಿತಿಗಿಂತಲೂ ಈಗ ಅಭಿವೃದ್ಧಿ ಹೊಂದುತ್ತಿರುವ ಸಮುದಾಯವಾಗಿದೆ, ದೇಶದಲ್ಲಿ ಕೆಲವೊಂದು ಕಾನೂನುಗಳು ಸಮುದಾಯದ ವಿರುದ್ಧವಾಗಿ ಜಾರಿಯಾಗುತ್ತಿದ್ದು ಸಮುದಾಯವನ್ನು ಮಾನಸಿಕವಾಗಿ ಹೆದರಿಸುವ ಕೆಲಸಗಳೂ ಆಗುತ್ತಿದೆ. ಎಲ್ಲಾ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಸಮುದಾಯಕ್ಕಿದ್ದು ಹೆದರಿಸುವ ಷಡ್ಯಂತ್ರಕ್ಕೆ ನಾವು ಒಳಗಾಗುವುದಿಲ್ಲ ಎಂದು ಹೇಳಿದರು. ಜಮ್ಮು ಕಾಶ್ಮೀರದ ವಿಶೇಷಾಧಿಕಾರ ೩೭೦ ಆರ್ಟಿಕಲ್ ರದ್ದು ಪಡಿಸಿರುವ ರೂಪ ಸರಿಯಿಲ್ಲ, ಹೊರಗಿನವರಿಗೂ ಇನ್ನು ಅಲ್ಲಿ ಜಾಗ ಖರೀದಿಸಲು ಅವಕಾಶ ಇರುವುದರಿಂದ `ಸಮಸ್ತ’ದ ಹಾಗೂ ಎ.ಪಿ ಉಸ್ತಾದರತಂವರ ಶಿಕ್ಷಣ ಸಂಸ್ಥೆಗಳು ಅಲ್ಲೂ ತಲೆ ಎತ್ತಲಿದೆ ಯಾವುದಕ್ಕೂ ನಮ್ಮ ಚಿಂತನೆ ಮಾತ್ರ ಸಕಾರಾತ್ಮಕವಾಗಿರಲಿ ಎಂದು ಎಸ್.ಬಿ ದಾರಿಮಿ ಹೇಳಿದರು.

ಪ್ರತೀ ಮೊಹಲ್ಲಾಗಳು ಕಷ್ಟದಲ್ಲಿರುವವರ ಕಣ್ಣೀರೊರೆಸಬೇಕು – ಎಂ.ಎಸ್ ಮುಹಮ್ಮದ್
ಸಂಯುಕ್ತ ಜಮಾಅತ್ ಉಪಾಧ್ಯಕ್ಷರು, ಜಿ.ಪಂ ಸದಸ್ಯರೂ ಆಗಿರುವ ಎಂ.ಎಸ್ ಮುಹಮ್ಮದ್ ಮಾತನಾಡಿ ಸಮುದಾಯದ ಯಾವ ಯುವಕರೂ ಕೂಡಾ ಧರ್ಮಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದಂತೆ ಸಂಯುಕ್ತ ಜಮಾಅತ್ ಕರೆ ಕೊಡಬೇಕು, ಪ್ರತಿಯೋರ್ವನ ಕಷ್ಟ, ಸುಖಗಳಲ್ಲಿ ಆಯಾ ಮೊಹಲ್ಲಾದವರು ಸಹಭಾಗಿಗಳಾಗುವ ಮೂಲಕ ಇನ್ನೊಬ್ಬರ ಕಣ್ಣೀರೊರೆಸುವ ಕೆಲಸಕ್ಕೆ ಮುಂದಾಗಬೇಕು ಎಂದು ಅವರು ಹೇಳಿದರು. ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಎರಡು ಮಕ್ಕಳನ್ನೇ ಒತ್ತೆ ಇಟ್ಟ ಮಹಾನ್ ಹೋರಾಟಗಾರ ಟಿಪ್ಪು ಸುಲ್ತಾನ್‌ರನ್ನು ಧರ್ಮ ವಿರೋಧಿ ಎಂದು ಚಿತ್ರಿಸುವುದು ಹಾಗೂ ಅವರ ಜಯಂತಿ ಆಚರಣೆ ನಿಷೇಧಿಸುವುದು ಸ್ವಾತಂತ್ರ್ಯ ಹೋರಾಟಗಾರನಿಗೆ ಮಾಡಿದ ಅವಮಾನವಾಗಿದೆ ಎಂದು ಅವರು ಹೇಳಿದರು. ಸರ್ವಾಧಿಕಾರಿ ಧೋರಣೆ ತಾತ್ಕಾಲಿಕವಾಗಿ ಯಶಸ್ಸಿನಂತೆ ಕಂಡರೂ ಭವಿಷ್ಯದಲ್ಲಿ ಅದು ದೇಶಕ್ಕೆ ದೊಡ್ಡ ಗಂಡಾಂತರವನ್ನೇ ತರಲಿದೆ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಆಡಳಿತ ದೇಶದಲ್ಲಿ ಅತೀ ಅಗತ್ಯವಾಗಿ ಬೇಕಾಗಿದೆ ಎಂದು ಎಂ.ಎಸ್ ಮುಹಮ್ಮದ್ ಹೇಳಿದರು.

ಶರೀಅತ್ ಸಲಹಾ ಮಂಡಳಿ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ ಪ್ರತೀ ಮೊಹಲ್ಲಾ ಕಮಿಟಿಗಳು ಶಕ್ತಿಯುತವಾಗಿ ಕಾರ್ಯಾಚರಣೆ ನಡೆಸಿಕೊಂಡು ತಮ್ಮ ಜಮಾಅತಿನ ಮೂಲ ಸಮಸ್ಯೆಗಳಿಗೆ ಜಮಾಅತಿನಲ್ಲೇ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು. ಕೊಲೆ, ಆತ್ಮಹತ್ಯೆಗಳಿಗೆ ಬದಲಾಗಿ ಇಸ್ಲಾಂ ಧರ್ಮ ನಿಯಮಾನುಸಾರವಾಗಿ ತಂದಿರವು ಶ್ರೇಷ್ಠ ತಲಾಖ್ ಪದ್ದತಿಯನ್ನು ಇಂದು ದುರ್ವ್ಯಾಖ್ಯನಗೊಳಿಸಿ ಕಾನೂನು ಜಾರಿಗೊಳಿಸಿರುವುದು ಖಂಡನೀಯ, ಆರ್ಟಿಕಲ್ ೩೭೦ ರದ್ದತಿಗಿಂತಲೂ ಹೆಚ್ಚಾಗಿ ದೇಶದಲ್ಲಿ ಜಾತ್ಯಾತೀತ ಪರಂಪರೆ ಸಧೃಢವಾಗಿದೆಯೇ ಎಂಬುವುದನ್ನು ಅವಲೋಕಿಸಬೇಕಾಗಿದೆ ಎಂದ ಅವರು ಆಡಳಿತ ಯಾರ ಕೈಗೆ ಸಿಕ್ಕರೂ ಯಾವ ಮಸೂದೆ ಜಾರಿಯಾದರೂ ಸಮುದಾಯ ಧೃತಿಗೆಡಬೇಕಾಗಿಲ್ಲ ಎಂದು ಅವರು ಹೇಳಿದರು.

ಶರೀಅತ್ ಸಲಹಾ ಮಂಡಳಿಯ ಉಮ್ಮರ್ ದಾರಿಮಿ ಸಾಲ್ಮರ ಮಾತನಾಡಿ ಇಲ್ಲಿ ಧಾರ್ಮಿಕ ಪಂಡಿತರು ತೀರ್ಮಾನಿಸಬೇಕಾದ ತ್ರಿವಳಿ ತಲಾಖ್‌ನ್ನು ಇನ್ಯಾರೋ ನಿರ್ಧರಿಸಿ ಕಾನೂನು ಜಾರಿಗೊಳಿಸುತ್ತಾರೆ, ದೇಶಕ್ಕಾಗಿ ಹೋರಾಡಿದ ಟಿಪ್ಪು ಸುಲ್ತಾನ್‌ರನ್ನು ಅಕ್ರಮಿಯಾಗಿ ಬಿಂಬಿಸುತ್ತಾರೆ, ಸಮುದಾಯಕ್ಕೆ ವಿರುದ್ಧವಾಗಿರುವ ಮಸೂದೆಗಳು, ನಿಯಮಗಳೇ ಇಲ್ಲಿ ಹೆಚ್ಚಾಗಿ ಜಾರಿಗೊಳಿಸಲಾಗುತ್ತಿದೆ, ಸಮುದಾಯ ಈ ಬಗ್ಗೆ ಧೃಢವಾಗಿ ನಿಲ್ಲುವ ಮೂಲಕ ಜಾಗೃತಗೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಶರೀಅತ್ ಸಲಹಾ ಮಂಡಳಿಯ ಸತ್ತಾರ್ ಸಖಾಫಿ ಮಾತನಾಡಿ ಸಮುದಾಯವನ್ನು ಅಸ್ಥಿರಗೊಳಿಸುವ, ಹೆದರಿಸುವ, ಬೆದರಿಸುವ ತಂತ್ರಗಳು ಪ್ರವಾದಿಯವರ ಕಾಲದಲ್ಲೇ ನಡೆದಿದೆ, ಇಂದೂ ನಡೆಯುತ್ತಿದೆ, ಮುಂದೆಯೂ ನಡೆಯಲಿದೆ. ಅದೆಲ್ಲವೂ ಅಲ್ಲಾಹನ ತೀರ್ಮಾನವಾಗಿದೆ. ಧರ್ಮದ ಆದೇಶಗಳನ್ನು ನಾವು ಬಿಗಿಯಾಗಿ ಹಿಡಿದರೆ ಯಾವ ಸಮಸ್ಯೆಯೂ ನಮಗೆ ಎದುರಾಗದು ಎಂದು ಅವರು ಹೇಳಿದರು.

ಶರೀಅತ್ ಸಲಹಾ ಮಂಡಳಿಯ ಹಾಜಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ ಮಾತನಾಡಿ ಬಕ್ರೀದ್ ಆಚರಣೆ, ದಾನಧರ್ಮಗಳ ಬಗ್ಗೆ ವಿವರಿಸಿದರು. ಅಲ್ಲಾಹು ಹಾಗೂ ಪ್ರವಾದಿ ರಸೂಲರು ಹೇಳಿದ ರೀತಿಯ ಸತ್ಯ ವಿಶ್ವಾಸಿಗಳು ನಾವಾದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು. ಶರೀಅತ್ ಸಲಹಾ ಮಂಡಳಿಯ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಮಾತನಾಡಿ ಯಾವುದು ಸರಿ, ಯಾವುದು ತಪ್ಪು ಎಂಬುವುದನ್ನು ಅವಲೋಕಿಸದೇ ಸಿಕ್ಕಿದ್ದೆಲ್ಲವನ್ನೂ ವಾಟ್ಸಾಪ್‌ನಲ್ಲಿ ಹಾಕಿ ಅವಾಂತರಗಳಿಗೆ ಯಾರೂ ಕಾರಣರಾಗಬಾರದು, ಯಾರ ಬಗ್ಗೆಯೂ ಅಪಪ್ರಚಾರ, ಅವಹೇಳನಗಳನ್ನೂ ಮಾಡಬಾರದು, ಒಗ್ಗಟ್ಟು ಮತ್ತು ಐಕ್ಯತೆ ನಮ್ಮ ಧ್ಯೇಯವಾಗಬೇಕು ಎಂದು ಹೇಳಿದರು.

ಕಾನೂನು ಸಲಹೆಗಾರ ಕೆ.ಎಂ ಸಿದ್ದೀಕ್ ಹಾಜಿ ಮಾತನಾಡಿ ದೇಶದಲ್ಲಿ ನಡೆಯುತ್ತಿರುವ ಗುಂಪು ಹತ್ಯೆ, ತ್ರಿವಳಿ ತಲಾಖ್ ಮೊದಲಾದವುಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಹೇಳಿದರು.

ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರ್ತಿಕೆರೆ ಮಾತನಾಡಿ ರಾಜಕೀಯವಾಗಿ ಟಿಪ್ಪು ಜಯಂತಿಯನ್ನು ಯಾರೂ ಪ್ರಾರಂಭಿಸಿದರೂ, ಯಾರು ರದ್ದು ಮಾಡಿದರೂ ನಮಗೆ ಚಿಂತೆ ಬೇಡ, ನಾವು ಯಾವತ್ತೂ ಅವರ ಆಚರಣೆ ಮಾಡುತ್ತಲೇ ಇರುತ್ತೇವೆ, ರಾಜಕೀಯಕ್ಕೆ ಟಿಪ್ಪು ಬಳಕೆಯಾಗುವುದು ಬೇಡ ಎಂದರು.

ಸಭೆಯಲ್ಲಿ ಸಂಯುಕ್ತ ಜಮಾಅತ್ ಸಲಹಾ ಮಂಡಳಿ ಸದಸ್ಯರುಗಳಾದ ಯು. ಅಬ್ದುಲ್ಲ ಹಾಜಿ, ಎಲ್.ಟಿ ಹಸೈನಾರ್ ಹಾಜಿ, ಉಪಾಧ್ಯಕ್ಷರುಗಳಾದ ಅಬ್ದುಲ್ ರಹಿಮಾನ್ ಹಾಜಿ ಬೈತ್ತಡ್ಕ, ಖಾಸಿಂ ಹಾಜಿ ಮಿತ್ತೂರು, ಜೊತೆ ಕಾರ್ಯದರ್ಶಿ ಹಾಜಿ ಅಶ್ರಫ್ ಕಲ್ಲೇಗ, ಪತ್ರಿಕಾ ಕಾರ್ಯದರ್ಶಿ ಯೂಸುಫ್ ರೆಂಜಲಾಡಿ, ಸಮಿತಿ ಸದಸ್ಯರಾದ ಕೆ.ಪಿ ಝಾಕಿರ್ ಹನಿಫ್, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಇಬ್ರಾಹಿಂ ಹಾಜಿ ತಿಂಗಳಾಡಿ, ಅಬ್ದುಲ್ ಹಮೀದ್ ಸೋಂಪಾಡಿ, ಸುಲೈಮಾನ್ ಹಾಜಿ ಸಾಲ್ಮರ, ಅಬ್ದುಲ್ ಕರೀಂ ಸವಣೂರು, ಹಸೈನಾರ್ ಹಾಜಿ, ಇಸ್ಮಾಯಿಲ್ ಸಾಲ್ಮರ ಉಪಸ್ಥಿತರಿದ್ದರು.

ಸತ್ತಾರ್ ಸಖಾಫಿ ದುವಾ ಮಾಡಿದರು. ಸಂಘಟನಾ ಕಾರ್ಯದರ್ಶಿ ಕೆ.ಎಂ ಬಾವ ಹಾಜಿ ಕೂರ್ನಡ್ಕ ವರದಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಎಲ್.ಟಿ ಅಬ್ದುಲ್ ರಝಾಕ್ ಹಾಜಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಶಕೂರ್ ಹಾಜಿ ಕಲ್ಲೇಗ ವಂದಿಸಿದರು.

ಅಗಲಿದವರಿಗೆ ಪ್ರಾರ್ಥನೆ:
ಇತ್ತೀಚೆಗೆ ನಿಧನರಾದ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಹಾಗೂ ಯೂಸುಫ್ ಹಾಜಿಯವರಿಗೆ ಪ್ರಾರ್ಥನೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.