ವರುಣನ ಅಬ್ಬರ-ಜನತೆ ತತ್ತರ:

Puttur_Advt_NewsUnder_1
Puttur_Advt_NewsUnder_1

 

ಛಾಯಾಗ್ರಾಹಕ ವಸಂತ ನಾಕ್ ಪುತ್ತೂರು ಅವರು ಉಪ್ಪಿನಂಗಡಿಯಲ್ಲಿ ನೆರೆಯ ಸಂದರ್ಭ ಡ್ರೋನ್ ಕ್ಯಾಮರಾದಲ್ಲಿ ಕ್ಲಿಕ್ಕಿಸಿದ ಚಿತ್ರ.

 

  • ಹೈಅಲರ್ಟ್ ಘೋಷಣೆ
  • ಕೃಷಿ, ಮನೆಗಳಿಗೆ ಹಾನಿ
  • ಉಪ್ಪಿನಂಗಡಿಯಲ್ಲಿ ನದಿಗಳ ಸಂಗಮ
  • ನದಿಪಾತ್ರದ ಪ್ರದೇಶಗಳು ಜಲಾವೃತ
  • ಹೆದ್ದಾರಿಗೂ ನುಗ್ಗಿದ ನೀರು
  • ವಾಹನ ಸಂಚಾರ ಸ್ಥಗಿ
  • ಅಪಾಯಕಾರಿ ಪ್ರದೇಶದ ಮನೆನಿವಾಸಿಗಳ ಸ್ಥಳಾಂತರ
  • ಬೆದ್ರೋಡಿ ತೂಗುಸೇತುವೆ, ಸಾಗರ ಪವರ್ ಪ್ರಾಜೆಕ್ಟ್‌ಗೆ ಹಾನಿ
  • ಪ್ರವಾಹ ತಡೆಗೆ ಸಕಲ ಕ್ರಮ

ಪುತ್ತೂರು: ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆ ಮುಂದುವರಿದಿದ್ದು ಮಹಾಮಳೆಯ ಅಬ್ಬರದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಇಡೀ ನಾಡೇ ತತ್ತರಿಸಿದೆ.ಮಳೆಯ ಅವಾಂತರದಿಂದಾಗಿ ಹಲವು ಕಡೆಗಳಲ್ಲಿ ಕೃಷಿ, ಮನೆ, ಕಟ್ಟಡಗಳಿಗೆ ಹಾನಿಯಾಗಿದೆ. ಗಾಳಿಗೆ ಮರಗಳುರುಳಿ ಜನ, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.ವಿದ್ಯುತ್ ಕಂಬಗಳೂ ಬಿದ್ದು ವಿದ್ಯುತ್ ಸಂಪರ್ಕ ಕೈಕೊಟ್ಟಿದೆ.ಉಪ್ಪಿನಂಗಡಿಯಲ್ಲಿ ನದಿಗಳ ಸಂಗಮವಾಗಿದೆ. ನದಿಗಳು ಉಕ್ಕೇರಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನದಿಪಾತ್ರದ ಪ್ರದೇಶಗಳು ಜಲಾವೃತಗೊಂಡಿವೆ.ನದಿಪಾತ್ರದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.ಪ್ರವಾಹದ ಹಿನ್ನಲೆಯಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು ಶಾಲಾ ಕಾಲೇಜುಗಳಿಗೆ ಆ.೧೦ರಂದೂ ರಜೆ ಘೋಷಿಸಲಾಗಿದೆ.ಒಟ್ಟಾರೆ ಮಳೆಯ ಅಬ್ಬರದಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿ ಪರದಾಟ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದೆ.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ,ಶಾಸಕ ಸಂಜೀವ ಮಠಂದೂರು ಸೇರಿದಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಂಡ ಉಪ್ಪಿನಂಗಡಿಗೆ ಆಗಮಿಸಿ ಪ್ರವಾಹ ಪರಿಸ್ಥಿತಿ ಅವಲೋಕನ ನಡೆಸಿ ಅಗತ್ಯ ಕ್ರಮಕ್ಕೆ ನಿರ್ದೇಶನ ನೀಡಿದ್ದಾರೆ.ಉಪ್ಪಿನಂಗಡಿಯಲ್ಲಿ ನದಿ ನೀರು ಹೆದ್ದಾರಿಗೂ ನುಗ್ಗಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.ಒಟ್ಟಾರೆ ಜಲರಕ್ಕಸನ ಹಾವಳಿಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ.ಅಪಾರ ಪ್ರಮಾಣದ ಕೃಷಿನಾಶದೊಂದಿಗೆ ಜನ ವಾಸ್ತವ್ಯದ ಮನೆಗಳಿಗೂ ಹಾನಿಯಾಗಿರುವುದರಿಂದ ನೊಂದವರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಅಪಾಯಕಾರಿ ಪ್ರದೇಶದಲ್ಲಿರುವ ಜನರನ್ನು ಸ್ಥಳಾಂತರ ಮಾಡಲಾಗಿದೆ. ಸಹಾಯಕ ಆಯುಕ್ತ ಹೆಚ್.ಕೆ.ಕೃಷ್ಣಮೂರ್ತಿ, ತಹಸೀಲ್ದಾರ್ ಅನಂತಶಂಕರ್,ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ದಿನಕರ ಶೆಟ್ಟಿ, ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಉಪ್ಪಿನಂಗಡಿಯಲ್ಲಿ ಮೊಕ್ಕಾಂ ಹೂಡಿ ಪ್ರವಾಹ ನಿಯಂತ್ರಣ ಕ್ರಮಕೈಗೊಂಡಿದ್ದಾರೆ.

ಇಂದು ಕೂಡಾ ರಜೆ
ದ.ಕ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಸಾಲು ಸಾಲು ರಜೆಯೂ ಮುಂದುವರಿದಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳಿಗೆ ಆ.೧೦ರಂದೂ ರಜೆ ಮುಂದುವರಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

ತುರ್ತು ಸೇವಾ ಕೇಂದ್ರ
ಜಿಲ್ಲೆಯಲ್ಲಿ ಅಧಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಯಾವುದೇ ದೂರು, ಸಮಸ್ಯೆಗಳ ಕುರಿತು ಮಾಹಿತಿ ನೀಡಲು ೨೪*೭ ತುರ್ತು ಸೇವಾ ಕೇಂದ್ರ ತೆರೆಯಲಾಗಿದ್ದು ನಾಗರಿಕರು ಟೋಲ್ ಫ್ರೀ ಸಂಖ್ಯೆ ೧೦೭೭ಗೆ ಕರೆ ಮಾಡುವಂತೆ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

71.8 ಮಿ.ಮೀ ಮಳೆ

ಆ.8ರ ಬೆಳಗ್ಗೆ9.3೦ಕ್ಕೆ ಅಂತ್ಯಗೊಳ್ಳುವ 24 ತಾಸುಗಳ ಅವಧಿಯಲ್ಲಿ ಪುತ್ತೂರಿನಲ್ಲಿ ಸರಾಸರಿಯಾಗಿ 71.6 ಮಿ.ಮೀ ಮಳೆ ದಾಖಲಾಗಿದೆ.ಪುತ್ತೂರಿನಲ್ಲಿ 79.4ಮಿ.ಮೀ, ಉಪ್ಪಿನಂಗಡಿಯಲ್ಲಿ 95.2ಮಿ.ಮೀ., ಶಿರಾಡಿಯಲ್ಲಿ ೯೫.೨ ಮಿ.ಮೀ., ಕಡಬದಲ್ಲಿ 80.0ಮಿ.ಮೀ., ಕೊಲದಲ್ಲಿ 48.3 ಮಿ.ಮೀ., ಐತ್ತೂರಿನಲ್ಲಿ 59.5ಮಿ.ಮೀ. ಮಳೆ ದಾಖಲಾಗಿದೆ.

3 ಜೀವ, 28ಮನೆಗಳಿಗೆ ಹಾನಿ

ಈ ಬಾರಿಯ ಅಧಿಕ ಮಳೆಗೆ ಮೂರು ಜೀವ ಹಾನಿಯಾಗಿದ್ದು ರೂ.೧೫ ಲಕ್ಷ ಪರಿಹಾರ ನೀಡಲಾಗಿದೆ. ೩ ಮನೆ ಪಕ್ಕಾ ಹಾನಿಯಾಗಿದ್ದು ರೂ.೯೧,೮೦೦, ೨೫ ಮನೆ ಭಾಗಶ ಹಾನಿಯಾಗಿದ್ದು ೧,೪೦,೮೦೦, ಎರಡು ಕಡೆ ತೋಟಗಳಿಗೆ ಹಾನಿಯಾಗಿದ್ದು ರೂ.೨೦೦೦, ಮೂರು ಕಡೆ ದನದ ಕೊಟ್ಟಿಗೆಗೆ ಹಾನಿಯಾಗಿದ್ದು ರೂ.೬೩೦೦ ಹಾಗೂ ೪ ಕಡೆಗಳಲ್ಲಿ ಮುಂಜಾಗ್ರತ ಕ್ರಮಗಳಿಗೆ ರೂ.೪೦,೬೦೦ ವ್ಯಯಿಸಲಾಗಿದ್ದು ಪ್ರಾಕೃತಿಕ ವಿಕೋಪ ನಿಧಿಯಿಂದ ಒಟ್ಟು ರೂ.೧೭,೮೧,೮೦೦ ಪರಿಹಾರ ನೀಡಲಾಗಿದೆ ಎಂದು ಕಂದಾಯ ಇಲಾಖೆ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.