ಮಾ ತುಜೇ ಸಲಾಂ.. 73 ನೇ ಸ್ವಾತಂತ್ರ್ಯ ಸಂಭ್ರಮದಲ್ಲಿರುವ ಭಾರತ: ಇತಿಹಾಸ ಮರೆಯದಿರೋಣ..

Puttur_Advt_NewsUnder_1
Puttur_Advt_NewsUnder_1

✍ಉಮೇಶ್ ಮಿತ್ತಡ್ಕ

ದ್ರ ಭವಿಷ್ಯದ ಅಡಿಪಾಯ ಇತಿಹಾಸ.. ಇತಿಹಾಸವನ್ನು ಮರೆತು ಭವಿಷ್ಯ ನಿರ್ಮಿಸಬಲ್ಲೆ ಎಂಬ ಮಾತು ಎಂದಿಗೂ ಸತ್ಯವಾಗಲಾರದು. ಏನಿದು ಇತಿಹಾಸ..? ಇತಿಹಾಸದ ಪುಟಗಳನ್ನು ತಿರುವುತ್ತಾ ಹಿಂದಕ್ಕೆ ಹೋದಂತೆ ಅಲ್ಲಿ ಅಶ್ಚರ್ಯ, ವಿಸ್ಮಯ, ಪರಾಕ್ರಮವೇ ಸಾರಲ್ಪಟ್ಟಿದೆ. ಸಂಸ್ಕೃತಿ, ಕಲೆ, ಸಾಹಿತ್ಯದ ಅನಾವರಣವಾಗುತ್ತದೆ. ಅದನ್ನು ಅಧ್ಯಯನ ಮಾಡುತ್ತಾ ಹೋದಂತೆ ನಮ್ಮೊಳಗೆ ಪುಳಕಿತರಾಗುತ್ತೇವೆ. ಅದೇ ಶ್ರೇಷ್ಟವೆಂಬ ಭಾವ ತಳೆಯುತ್ತೇವೆ. ಇತಿಹಾಸದ ಅವಶೇಷಗಳು, ಪುರಾವೆಗಳು, ಕಲೆ ವಾಸ್ತುಶಿಲ್ಪದ ಕೇಂದ್ರಗಳನ್ನು ನೋಡುತ್ತಾ ಹೋದಂತೆ ವಿಸ್ಮಯತೆಯಿಂದ ನಿಬ್ಬೆರಗಾಗುತ್ತೇವೆ. ಉತ್ತರವೇ ಸಿಗದ ಸಾವಿರಾರು ಪ್ರಶ್ನೆಗಳನ್ನು ಮನದೊಳಗೆ ಹುದುಗಿಸಿಕೊಳ್ಳುತ್ತೇವೆ. ವಿವೇಕಶಾಲಿಯಾದ ಮಾನವ ಬದುಕು ನಡೆಸಿದ ನಾವೂ ಇತಿಹಾಸದ ಗರ್ಭದೊಳಗೆ ಸೇರಿಕೊಳ್ಳುತ್ತೇವೆ. ನಮ್ಮ ಮುಂದಿನ ಒಂದು ಹೆಜ್ಜೆಯೂ ಹಿಂದಿನ ಹೆಜ್ಜೆಯ ಅನುಭವದ ಮೇಲೆ ಹೊಂದಿಕೊಂಡಿರುತ್ತದೆ. ನಮ್ಮ ಹಿಂದಿನ ಅನುಭವ ಮುಂದಿನ ನಿರ್ಧಾರಕ್ಕೆ ತಳಪಾಯ ಹಾಕುತ್ತದೆ. ಅಂದರೆ ನಾವು ಈಗ ಮಾಡುವ ಕಾರ್ಯ, ಸಾಧನೆಗಳೆಲ್ಲವೂ ಭವಿಷ್ಯದ ಇತಿಹಾಸವಾಗುತ್ತದೆ. ಭವಿಷ್ಯದಲ್ಲಿ ಸುಂದರ ಇತಿಹಾಸವನ್ನು ಕೊಡುವ ನಾವುಗಳು ಅದಕ್ಕಾಗಿ ಪ್ರಯತ್ನಪಡಬೇಕಲ್ಲವೇ..?

ಉತ್ತಮ ಸಮಾಜವೊಂದರ ನಿರ್ಮಾಣದ ಸರಮಾಲೆಗೆ ಇತಿಹಾಸವೆಂಬ ಅನುಭವಗಳ ಮಣಿಗಳನ್ನು ಪೋಣಿಸಬೇಕಾಗುತ್ತದೆ. ಇತಿಹಾಸದ ಮಹಾನ್ ವ್ಯಕ್ತಿಗಳ ಜೀವನದ ಘಟನೆಗಳು, ಕಥೆಗಳು ಅಂದಿನ ಸಮಾಜದ ಸ್ಪಷ್ಟ ಚಿತ್ರಣವನ್ನು ನೀಡುತ್ತವೆ. ಆ ಅಧ್ಯಯನದ ಅನುಭವವೇ ಮುಂದಿನ ಸುದೃಢ ಸಮಾಜ ನಿರ್ಮಾಣಕ್ಕೆ ಒಂದು ಅರ್ಥಪೂರ್ಣ ಅಡಿಪಾಯ ಹಾಕಬಲ್ಲುದು.

ಹಾಗಾಗಿ ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ಒಂದು ಚಾರಿತ್ರಿಕ ಘಟನೆಯಾಗಿಸಿ ಭಾರತದ ಘನ ಪರಂಪರೆ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಮರೆಯದೆ ಮೆರೆಸುವ ಕರ್ತವ್ಯ ನಮ್ಮೆಲ್ಲರಲ್ಲಿದೆ. ಈ ನೆಲ-ಜಲವನ್ನು ಉಳಿಸುವ ಜವಾಬ್ದಾರಿ ನಮ್ಮಲ್ಲಿದೆ ಎಂದು ತಿಳುವಳಿಕೆ ಬಂದರೆ ಸ್ವಾತಂತ್ರ್ಯೋತ್ಸವಕ್ಕೆ ನಿಜಕ್ಕೂ ಅರ್ಥ ಬಂದೀತು. ಜಾತಿ, ಧರ್ಮ, ವರ್ಗವೆಂಬ ವಿಂಗಡಣೆಗಳು ಬಲಿಷ್ಠತೆ ಮತ್ತು ಪ್ರಾಬಲ್ಯತೆಗೆ ಹೇತುವಾಗಬೇಕೇ ಹೊರತು ದ್ವೇಷ ಅಸೂಯೆ ಮತ್ಸರಗಳ ಕೂಪವನ್ನು ನಿರ್ಮಿಸ ಹೊರಟರೆ ಭೂಮಿಯೇ ಬಾಯ್ದೆರೆದು ಮನುಕುಲದ ಅಂತ್ಯಕ್ಕೆ ನಾಂದಿ ಹಾಡಬಹುದು. ಪ್ರಕೃತಿಗೆ ಎಸಗಿದ ಅನ್ಯಾಯಕ್ಕೆ ವಿಕೋಪ ವಿಪತ್ತುಗಳೆಂಬ ಪ್ರತಿಫಲ ದೊರೆತಾಗ ವಿಂಗಡಣೆಗಳು, ಪ್ರತ್ಯೇಕತೆಗಳು ಮರೆತು ಒಂದಾಗುವ ದೃಶ್ಯ ನಮ್ಮ ಕಣ್ಮುಂದೆಯೇ ಇರುವಾಗ ಅದರಿಂದ ಹೊರತಾದ ಜೀವನದಲ್ಲಿ ಇನ್ಯಾಕೆ ವಿಂಗಡಣೆಯ ದೃಷ್ಟಿ ? ಅರಿಯೋಣ ಬದುಕಿನ ನಿಜ ಸಾರ..

ಉತ್ಸವ ಆಚರಿಸಿದೊಡನೆ ದೇಶಪ್ರೇಮ ಪ್ರಕಟವಾಗುವುದಿಲ್ಲ. ದೇಶಕ್ಕಾಗಿ ನನ್ನ ಸಮಯ, ಚಿಂತನೆ, ಅರ್ಪಣೆ ನಿಜವಾದ ದೇಶಪ್ರೇಮವಾದೀತು. ಶಾಂತಿ-ಸೌಹಾರ್ದತೆ, ಪ್ರೀತಿ-ಪ್ರೇಮ ಪ್ರಾಮಾಣಿಕ-ಪರಾಕ್ರಮವೆಂಬ ಶ್ರೀಮಂತ ನೈಜ ಮನೋಭಾವಗಳು ದೇಶ ಕಟ್ಟೀತೇ ಹೊರತು ಅವುಗಳ ಮುಖಭಾವದ ಮಾತು-ಭಾಷಣವಲ್ಲ. ನೆಲ-ಜಲ-ಪರಿಸರ ಸಂರಕ್ಷಣೆಯೂ ಈ ದೇಶದ ಮೇಲಿನ ಪ್ರೀತಿ ಪ್ರೇಮ ಗೌರವದ ಸಂಕೇತ ಎಂದು ತಿಳಿಯುತ್ತಾ 73ರ ಸಂಭ್ರಮ 74 ಕ್ಕೆ ಹೊಸ ಭಾಷ್ಯವನ್ನು ಬರೆಯಲು ನಾವೆಲ್ಲರೂ ಪ್ರಯತ್ನಿಸೋಣ.. ಸ್ವಾರ್ಥಕ್ಕಿಂತ ಹೆಚ್ಚು ಸ್ವಾಭಿಮಾನ ಮೈಗೂಡಿಸಿಕೊಳ್ಳೋಣ ಎಂಬ ಶುಭ ಹಾರೈಕೆಯ ಮುನ್ನುಡಿಯೊಂದಿಗೆ, ಸಮಸ್ತ ಓದುಗರಿಗೆ, ವಿದ್ಯಾರ್ಥಿ ವೃಂದಕ್ಕೆ ಸ್ವಾತಂತ್ರ್ಯ ದಿನದ 73ನೇ ವರ್ಷದ ಸಂಭ್ರಮದ ಪ್ರೀತಿಯ ಶುಭಾಶಯಗಳು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.