ಸರ್ಕಾರ ರಚನೆಯಾಗಿ 25 ದಿನಗಳ ಬಳಿಕ ಸಂಪುಟ ರಚನೆ

Puttur_Advt_NewsUnder_1
Puttur_Advt_NewsUnder_1
  • ಲಿಂಗಾಯುತ, ಒಕ್ಕಲಿಗ, ದಲಿತ ಸಮುದಾಯಕ್ಕೆ ಬಂಪರ್
  • ಹೆಚ್ಚು ಸ್ಥಾನ ಗಳಿಸಿಕೊಟ್ಟ ದ.ಕ. ಜಿಲ್ಲೆಗಿಲ್ಲ ಸಚಿವ ಸ್ಥಾನ

ರಾಜ್ಯ ರಾಜಕಾರಣದಲ್ಲಿ ಉಂಟಾದ ವೈಪರೀತ್ಯದಿಂದ ಮೈತ್ರಿ ಸರಕಾರ ಉರುಳಿ ಬಹುಮತ ಪಡೆದಿರುವ ಬಿಜೆಪಿ ಸರಕಾರ ರಚಿಸಲು ಸನ್ನದ್ದವಾಗಿ 25 ದಿನಗಳ ಬಳಿಕ ಸಚಿವ ಸಂಪುಟ ರಚನೆಗೆ ಅಸ್ತು ನೀಡಿದೆ. ಮುಖ್ಯಮಂತ್ರಿಯಾಗಿ ಬಿಎಸ್‌ವೈ ಪ್ರಮಾಣ ವಚನ ಸ್ವೀಕರಿಸಿದ್ದರೂ, ಏಕ ವ್ಯಕ್ತಿ ಸರಕಾರ ಇಲ್ಲಿಯವರೆಗೆ ನಡೆದು ಬಂದಿತ್ತು. ಸಚಿವ ಸಂಪುಟ ರಚನೆಗೆ ಹೈಕಮಾಂಡ್‌ನಿಂದ ಯಾವುದೇ ಗ್ರೀನ್ ಸಿಗ್ನಲ್ ದೊರಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರವಾಹ, ನೆರೆ ಬಂದು ಸಂಕಷ್ಟಕ್ಕೊಳಗಾದರೂ ಬಿಜೆಪಿ ಏಕ ವ್ಯಕ್ತಿ ಸರಕಾರದ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಿತ್ತು. ಸಚಿವ ಸಂಪುಟ ರಚನೆಗೆ ಶಾಸಕರು ತುದಿಗಾಲಲ್ಲಿ ಕಾಯುತ್ತಿರುವಂತೆಯೇ ರಾಜ್ಯದ ಜನತೆಯೂ ಭಾರೀ ಕುತೂಹಲದಿಂದ ಕಾದು ಕುಳಿತಿತ್ತು. ಕೊನೆಗೂ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ನೂತನ ಕ್ಯಾಬಿನೆಟ್ ಸಚಿವರಾಗಿ ಯಾರನ್ನು ಆರಿಸಬೇಕೆಂಬ ರಾಜ್ಯ ನಾಯಕರ ನಿರ್ಧಾರಕ್ಕೆ ಹೈಕಮಾಂಡ್ ಬ್ರೇಕ್ ಹಾಕಿ ರಾಜ್ಯ ನಾಯಕರಲ್ಲಿ ಸ್ವಲ್ಪದರ ನಿರಾಶೆ ಮೂಡಿಸಿತ್ತು. ಹೈಕಮಾಂಡ್‌ನಿಂದಲೇ ಬಿಡುಗಡೆಯಾದ ಪಟ್ಟಿ ಪ್ರಕಾರ ಸಚಿವರ ಪ್ರಮಾಣ ವಚನಕ್ಕೆ ಆ. 20 ಮುಹೂರ್ತ ಫಿಕ್ಸ್ ಆಗಿ ಸಚಿವರ ಪ್ರಮಾಣ ವಚನ ನಡೆದಿದೆ. ರಾಜ್ಯ ಸಂಪುಟದ ಮೊದಲ ಹಂತದ 17 ಶಾಸಕರ ಪಟ್ಟಿಯಲ್ಲಿ ಲಿಂಗಾಯುತರಿಗೆ ಹೆಚ್ಚು ಅವಕಾಶ ನೀಡಲಾಗಿತ್ತು. ಇಲ್ಲಿ ಇನ್ನೊಂದು ಕುತೂಹಲವೆಂದರೆ ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿ ಬಿಎಸ್‌ವೈ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕುಮಾರ್‌ರವರು ಪ್ರತ್ಯೇಕ ಪಟ್ಟಿಗಳನ್ನು ಹೈಕಮಾಂಡ್‌ಗೆ ಕಳಿಸಿದ್ದರೆನ್ನಲಾಗಿದೆ. ಆದರೆ ಹೈಕಮಾಂಡ್‌ನಿಂದ ಹೊರಬಂದಿರುವ ಸಚಿವ ಪಟ್ಟಿಯಲ್ಲಿ ಎರಡೂ ಪ್ರಭಾವಿಗಳ ಪಟ್ಟಿಯ ಹೊರತಾಗಿ ಪಟ್ಟಿ ಬಂದಿದೆ. ಇಲ್ಲಿ ಮೂರನೇ ವ್ಯಕ್ತಿಯಿಂದ ಪಟ್ಟಿ ಹೋಗಿದೆಯೇ ಅಥವಾ ಎರಡೂ ಪ್ರಭಾವಿಗಳ ಪಟ್ಟಿಯಿಂದ ಆರಿಸಿ ಸಮತೋಲನ ಪಟ್ಟಿ ರಚಿಸಲಾಗಿದೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರು
ಗೋವಿಂದ ಕಾರಜೋಳ, ಡಾ.ಅಶ್ವಥ ನಾರಾಯಣ, ಸಿ.ಲಕ್ಷ್ಮಣ ಸವದಿ, ಕೆಎಸ್ ಈಶ್ವರಪ್ಪ, ಆರ್.ಅಶೋಕ್, ಜಗದೀಶ್ ಶೆಟ್ಟರ್, ಬಿ.ಶ್ರೀರಾಮುಲು, ಎನ್.ಸುರೇಶ್ ಕುಮಾರ್, ವಿ.ಸೋಮಣ್ಣ, ಸಿಟಿ ರವಿ, ಬಸವರಾಜ ಬೊಮ್ಮಾಯಿ, ಕೋಟ ಶ್ರೀನಿವಾಸ ಪೂಜಾರಿ, ಜೆಸಿ ಮಾಧುಸ್ವಾಮಿ, ಚಂದ್ರಕಾಂತ್ ಗೌಡ ಚನ್ನಪ್ಪಗೌಡ ಪಾಟೀಲ್, ಹೆಚ್.ನಾಗೇಶ್, ಪ್ರಭು ಚೌಹಾಣ್, ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆಯವರು ಸಚಿವರುಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ವಿವಿಧ ಶಾಸಕರ ಅನಿಸಿಕೆ ಅಭಿಪ್ರಾಯಗಳು
ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ 17 ಮಂದಿಯ ಹೆಸರನ್ನು ಹೈಕಮಾಂಡ್ ಸೂಚಿಸಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಕೆಲ ಶಾಸಕರು ತಮ್ಮ ಅನಿಸಿಕೆ, ಅಭಿಪ್ರಾಯ ಮತ್ತು ಅಸಮಾಧನವನ್ನೂ ಹೊರಹಾಕಿದ್ದಾರೆ. ಯೋಗ್ಯತೆ ಇದ್ದವರಿಗೆ ಮಂತ್ರಿ ಪದವಿ ನೀಡಿದ್ದಾರೆ, ನಾನೂ ಕೂಡ ಸಚಿವ ಸ್ಥಾನ ನಿರೀಕ್ಷಿಸಿದ್ದೆ ಎಂದು ಬೆಳಗಾವಿ ದಕ್ಷಿಣ ಶಾಸಕರ ಅಭಯ್ ಪಾಟೀಲ್ ಹೇಳಿಕೆ ನೀಡಿದ್ದಾರೆ.

ಮಂತ್ರಿ ಮಾಡುವುದು ಬಿಟ್ಟದ್ದು ಹೈಕಮಾಂಡ್‌ಗೆ ಬಿಟ್ಟ ವಿಚಾರ, ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಸಚಿವ ಸ್ಥಾನ ವಂಚಿತ ಸುರಪುರ ಶಾಸಕರ ರಾಜುಗೌಡ ಹೇಳಿದ್ದಾರೆ.

ದ.ಕ. ಜಿಲ್ಲೆಯ ಶಾಸಕರಿಗಿಲ್ಲ ಮಂತ್ರಿಗಿರಿ
ಆ.19ರ ತಡರಾತ್ರಿಯವರೆಗೂ ಸುಳ್ಯದ ಶಾಸಕ ಎಸ್.ಅಂಗಾರ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಹೆಸರು ಕೇಳಿ ಬಂದಿತ್ತಾದರೂ ಕೊನೆಯ ಹಂತದ ವೇಳೆಗೆ ಇಲ್ಲದಂತಾಗಿದೆ. ವಿಧಾನ ಸಭಾ ಸದಸ್ಯರಿಗಿಲ್ಲದ ಅದೃಷ್ಟ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಲಭ್ಯವಾಗಿರುವುದು ಅಚ್ಚರಿ ಮೂಡಿಸಿದೆ.

ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿಗಳಿಂದ ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಬಿಜೆಪಿ ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಿತ್ತು.13 ವಿಧಾನಸಭಾ ಕ್ಷೇತ್ರಗಳ ಪೈಕಿ 12 ರಲ್ಲಿ ಬಿಜೆಪಿ ಸದಸ್ಯರಾಗಿ ಆಯ್ಕೆಯಾದರೂ ಇದರಲ್ಲಿ ಹೆಚ್ಚಿನ ಸದಸ್ಯರು ಶಾಸಕರಾಗಿ ಆಯ್ಕೆಯಾಗಿದ್ದರು. ಇದರಿಂದಾಗಿ ಕರಾವಳಿ ಭಾಗಕ್ಕೆ ಹೆಚ್ಚಿನ ಸಚಿವ ಸ್ಥಾನದ ನಿರೀಕ್ಷೆಯಿತ್ತು. ಆದರೆ ಸಚಿವ ಸ್ಥಾನದ ಮೊದಲ ಪಟ್ಟಿಯಲ್ಲಿಯೇ ದ.ಕ. ಉಡುಪಿ ಜಿಲ್ಲೆಯನ್ನು ಕಡೆಗಣಿಸಲಾಗಿದೆ ಎಂಬ ಅಸಮಾಧಾನದ ಮಾತುಗಳೂ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.

ಪ್ರಮಾಣವಚನದಲ್ಲಿ ಎಡವಟ್ಟು
ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಶಾಸಕ ಮಾಧುಸ್ವಾಮಿಯವರು ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂಬ ಬದಲು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ. ತಕ್ಷಣ ಎಚ್ಚೆತ್ತ ಅವರು ಸರಿಪಡಿಸಿಕೊಂಡರು.

ಸಚಿವರ ಪ್ರಮಾಣವಚನ ಹಿನ್ನಲೆಯಲ್ಲಿ ಬೆಂಗಳೂರಿನ ರಾಜಭವನ ರಸ್ತೆಯಲ್ಲಿ 10 ಗಂಟೆಯ ಬಳಿಕ ವಾಹನ ಸಂಚಾರ ನಿಷೇಧಗೊಳಿಸಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.