ಅಂಗಾರರಿಗೆ ಮಂತ್ರಿ ಸ್ಥಾನ ತಪ್ಪಿದ ಹಿನ್ನೆಲೆ ಸುಳ್ಯದಲ್ಲಿ ಬಿಜೆಪಿ ಮಂಡಲ ಸಮಿತಿ ತುರ್ತು ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಅಸಹಕಾರ ಚಳವಳಿಗೆ ನಿರ್ಧಾರ – ಹಲವರಿಂದ ರಾಜೀನಾಮೆ ಸಲ್ಲಿಕೆ

ಸುಳ್ಯ: ಸುಳ್ಯ ಶಾಸಕ ಎಸ್. ಅಂಗಾರ ಅವರಿಗೆ ಕೊನೇ ಕ್ಷಣದಲ್ಲಿ ಸಚಿವ ಸ್ಥಾನ ತಪ್ಪಿದ ಹಿನ್ನಲೆಯಲ್ಲಿ ಅಸಮಾಧಾನಗೊಂಡಿರುವ ಸುಳ್ಯ ಬಿಜೆಪಿ ತುರ್ತು ಸಭೆ ಸಡೆಸಿದ್ದು, ಪಕ್ಷದಿಂದ ಅಸಹಕಾರ ಚಳವಳಿ ನಡೆಸಲು ತೀರ್ಮಾನಿಸಿದೆ. ಜವಾಬ್ದಾರಿ ಹುದ್ದೆಗಳಲ್ಲಿರುವ ಹಲವರು ರಾಜಿನಾಮೆಯನ್ನೂ ನೀಡಿದ್ದಾರೆ.

ನಳಿನ್ ಕುಮಾರ್ ಕಟೀಲ್ ಪ್ರಥಮ ಆದ್ಯತೆಯಾಗಿ ಸುಳ್ಯದ ಅಸಮಾಧಾನ ಶಮನಗೊಳಿಸಲಿ : ವೆಂಕಟ್ ವಳಲಂಬೆ
ಪಕ್ಷದ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಂಡಲ ಸಮಿತಿ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆಯವರು ಈ ಕುರಿತು ಮಾಹಿತಿ ನೀಡಿದರು. ಸುಳ್ಯಕ್ಕೆ ಸಿಗಬೇಕಾದ ಸ್ಥಾನ ಸಿಗದೆ ನಾವು ಆತಂಕಿತರಾಗಿದ್ದೇವೆ. ಸುದೀರ್ಘ ಕಾಲದಿಂದಲೂ ಇಲ್ಲಿ ಬಿಜೆಪಿಯನ್ನು ಮತದಾರರು ಗೆಲ್ಲಿಸುತ್ತಲೇ ಇದ್ದಾರೆ. ಜಿಲ್ಲೆಯಲ್ಲಿ ಎಲ್ಲಕಡೆ ಸೋತ ಸಂದರ್ಭದಲ್ಲೂ ಇಲ್ಲಿ ಬಿಜೆಪಿ ಗೆದ್ದಿದೆ. ಹೀಗಾಗಿ ಮಂತ್ರಿ ಪದವಿ ಬಹುಜನರ ಅಪೇಕ್ಷೆಯಾಗಿತ್ತು. ಅಂಗಾರರ ಪಕ್ಷನಿಷ್ಠೆ ಮತ್ತು ಕಾರ್ಯನಿರ್ವಹಣೆ ಕೂಡ ಇದಕ್ಕೆ ಪೂರಕವಾಗಿತ್ತು. ಆದರೂ ಕೊನೇ ಕ್ಷಣದಲ್ಲಿ ಮಂತ್ರಿಸ್ಥಾನ ಕೈ ತಪ್ಪಿದೆ. ಇದು ಪಕ್ಷ ಕಟ್ಟಿ ಬೆಳೆಸಿದವರಿಗೆ ನೋವು ತಂದಿದೆ. ಹೀಗಾಗಿ ಅಸಹಕಾರ ಚಳುವಳಿ ನಡೆಸಲು ತೀರ್ಮಾನಿಸಿದ್ದೇವೆ ಎಂದರು.

ಈ ನಿರ್ಧಾರದಂತೆ ಪಕ್ಷದ ಮೂಲಕ ಗೆದ್ದ ಜನಪ್ರತಿನಿಧಿಗಳು ಕಛೇರಿಗೆ ಹೋಗುವುದಿಲ್ಲ. ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲ. ಪಕ್ಷವೂ ಕೂಡ ಜಿಲ್ಲಾ ಮತ್ತು ರಾಜ್ಯ ಘಟಕದೊಂದಿಗೆ ಅಸಹಕಾರ ಧೋರಣೆ ತಳೆಯುತ್ತದೆ. ಈಗಾಗಲೆ ಅನೇಕ ಮಂದಿ ತಮ್ಮ ಹುದ್ದೆಗಳಿಗೆ ರಾಜಿನಾಮೆಯನ್ನೂ ನೀಡಿದ್ದಾರೆ ಎಂದು ಹೇಳಿದರು.

ಅಂಗಾರರಿಗೆ ಮಂತ್ರಿಸ್ಥಾನವೇ ಸಿಗಬೇಕು. ಸಿಗುವ ಸ್ಪಷ್ಟ ಭರವಸೆ ನಮಗೆ ಬೇಕು. ಅಲ್ಲಿಯವರೆಗೆ ನಮ್ಮ ಈ ಅಸಹಕಾರ ಚಳುವಳಿ ಮುಂದುವರೆಯುತ್ತದೆ. ಸುಳ್ಯ ವಿಧಾನ ಸಭಾ ಕ್ಷೇತ್ರದ 75 ಗ್ರಾಮಗಳ 231 ಬೂತ್‌ಗಳಿಗೂ ಇದು ಅನ್ವಯವಾಗುತ್ತದೆ.

ನೂತನವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಸಂಸದ ನಳಿನ್ ಕುಮಾರ್ ಕಟೀಲ್ ಮೊದಲ ಆದ್ಯತೆಯಾಗಿ ಸುಳ್ಯದ ಅಸಮಾಧಾನವನ್ನು ಪರಿಗಣಿಸಿ ಶಮನಗೊಳಿಸಬೇಕು ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ.

ಸುಳ್ಯದಲ್ಲಿ ಪತ್ರಿಕಾ ಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಸಂಸದರು ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಇದಕ್ಕೆ ನಮ್ಮ ಸ್ವಾಗತ ಹಾಗೂ ಅಭಿನಂದನೆ ಇದೆ. ಅವರು ಸುಳ್ಯದ ಈ ಅಸಮಾಧಾನವನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಿ ನ್ಯಾಯ ಒದಗಿಸಬೇಕು ಎಂದು ಹೇಳಿದರು.

ಬೇಡಿಕೆ ಸಲ್ಲಿಸಿ ಹಿಂದೆ ಯಶಸ್ವಿಯಾಗಿದ್ದೇವೆ, ಈಗಲೂ ಯಶಸ್ವಿಯಾಗುವ ವಿಶ್ವಾಸವಿದೆ : ಎ.ವಿ.ತೀರ್ಥರಾಮ
ಬಿಜೆಪಿ ಹಿರಿಯ ಮುಖಂಡ ಎ.ವಿ. ತೀರ್ಥರಾಮ ಮಾತನಾಡಿ, ಸುಳ್ಯಕ್ಕೆ ನ್ಯಾಯ ಸಿಗಬೇಕೆಂದು ನಮ್ಮ ಚಳವಳಿ. ನಾಯಕರ ಕಣ್ಣುತೆರೆಸುವ ಪ್ರಕ್ರಿಯೆಯಾಗಿ ಇದು ಮೊದಲ ಹಂತ. ನಮ್ಮ ಬೇಡಿಕೆ ಈಡೇರುತ್ತದೆ ಎಂಬ ವಿಶ್ವಾಸವಿದೆ. ಸುಳ್ಯ ಶಾಸಕ ಎಸ್. ಅಂಗಾರ ಅವರಿಗೆ ಮಂತ್ರಿಸ್ಥಾನ ತಪ್ಪಿದ ಹಿನ್ನಲೆಯಲ್ಲಿ ನಾವು ಅಸಹಕಾರ ಚಳುವಳಿಗೆ ಮುಂದಾಗಿದ್ದು ಈ ಮೂಲಕ ನಮ್ಮ ಬೇಡಿಕೆಯಲ್ಲಿ ಯಶಸ್ವಿಯಾಗುವ ವಿಶ್ವಾಸ ಹೊಂದಿದ್ದೇವೆ ಎಂದು ಬಿಜೆಪಿ ಹಿರಿಯ ಮುಖಂಡ ಎ.ವಿ.ತೀರ್ಥರಾಮ ಹೇಳಿದ್ದಾರೆ.

ಸುಳ್ಯದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯ ಸಂದರ್ಭ, 7 ವರ್ಷಗಳ ಹಿಂದೆ ಕೂಡಾ ಪಕ್ಷದ ಮುಖಂಡರು ರಾಜೀನಾಮೆ ನೀಡಿ ಪ್ರಯೋಜನವಾಗಿಲ್ಲವಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಅವರು, ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ನಾವು ಸುಳ್ಯದಿಂದ ನಿಯೋಗ ಹೋಗಿ ಒತ್ತಾಯಿಸಿದ್ದೆವು. ಆಗಿನ ಸನ್ನಿವೇಶದ ಅಸಹಾಯಕತೆಯನ್ನು ಮುಖಂಡರು ಮನವರಿಕೆ ಮಾಡಿದ್ದರು. ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಬೇಡಿಕೆ ಸಚಿವ ಸ್ಥಾನ ಆಗಿರದೇ ಯಡಿಯೂರಪ್ಪನವರು ಘೋಷಿಸಿದ್ದ ವಿಶೇಷ ಪ್ಯಾಕೇಜ್ ಅನುಷ್ಠಾನಕ್ಕೆ ಬರುವುದಾಗಿತ್ತು. ಇದರಲ್ಲಿ ನಾವು ಯಶಸ್ವಿಯಾಗಿದ್ದೆವೆ. ಹೀಗಾಗಿ ಈ ಬಾರಿಯ ಸಾತ್ವಿಕ ಪ್ರತಿಭಟನೆಯಲ್ಲೂ ಯಶಸ್ವಿಯಾಗುತ್ತೇವೆ ಎಂದು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ವೆಂಕಟ್ ದಂಬೆಕೋಡಿ, ರಾಕೇಶ್ ರೈ ಕೆಡೆಂಜಿ, ಭಾಗೀರಥಿ ಮುರುಳ್ಯ, ಚನಿಯ ಕಲ್ತಡ್ಕ, ಸುಭೋದ್ ಶೆಟ್ಟಿ ಮೇನಾಲ, ಹರೀಶ್ ಕಂಜಿಪಿಲಿ, ದಿನೇಶ್ ಮೆದು, ಚಂದ್ರಶೇಖರ ಪನ್ನೆ, ಮುಳಿಯ ಕೇಶವ ಭಟ್, ಪಿ.ಕೆ. ಉಮೇಶ್, ಸುರೇಶ್ ಕಣೆಮರಡ್ಕ, ಮಹೇಶ್ ಕುಮಾರ್ ಮೇನಾಲ, ಮಾಧವ ಚಾಂತಾಳ, ರಾಧಾಕೃಷ್ಣ ಬೊಳ್ಳೂರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.