ಕಬಕ ಗ್ರಾ.ಪಂ ಸಾಮಾನ್ಯ ಸಭೆ: ಅನಧಿಕೃತ ಗೂಡಂಗಡಿಗಳ ತೆರವಿಗೆ 10 ದಿನಗಳ ಕಾಲಾವಕಾಶ

Puttur_Advt_NewsUnder_1
Puttur_Advt_NewsUnder_1

 


ಪುತ್ತೂರು: ಕಬಕ ಪಟ್ಟಣದಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿರುವ ಗೂಡಂಗಡಿಗಳನ್ನು ತೆರವುಗೊಳಿಸಲು ಹೈಕೋರ್ಟ್‌ನಿಂದ ಆದೇಶವಾಗಿದ್ದು, ಸದರಿ ಅಂಗಡಿ ಮ್ಹಾಲಕರಿಗೆ ತೆರವುಗೊಳಿಸಲು ನೋಟೀಸ್ ಜಾರಿಗೊಳಿಸಿ 10 ದಿನಗಳ ಕಾಲಾವಕಾಶ ನೀಡಲಾಗುವುದು. ಬಳಿಕ ಅಂಗಡಿ ಮ್ಹಾಲಕರ ಅಭಿಪ್ರಾಯಗಳನ್ನು ಪಡೆದು ಸಭೆ ನಡೆಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಕಬಕ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಸಭೆಯು ಆ.22ರಂದು ಅಧ್ಯಕ್ಷೆ ಪ್ರೀತಾರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪಿಡಿಓ ಆಶಾರವರು ಮಾತನಾಡಿ, ಕಬಕ ಪಟ್ಟಣದ ಕಬಕ-ವಿಟ್ಲ ಮುಖ್ಯರಸ್ತೆಯ ಬದಿಯಲ್ಲಿ ವ್ಯವಹರಿಸುತ್ತಿರುವ ಗೂಡಂಗಡಿಗಳಿರುವ ಜಾಗವನ್ನು ಹೈಕೋರ್ಟ್‌ನ ಆದೇಶದಂತೆ ತಹಶೀಲ್ದಾರ್‌ರವರು ಸರ್ವೆ ನಡೆಸಿ ಸರಕಾರಿ ಜಾಗದಲ್ಲಿರುವುದಾಗಿ ಖಚಿತ ಪಡಿಸಿ ವರದಿ ನೀಡಿದ್ದಾರೆ. ಇದರ ಬಗ್ಗೆ ಮುಂದಿನ ಕ್ರಮಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ಕೇಳಿದರು. ನ್ಯಾಯಾಲಯದ ಮೆಟ್ಟಿಲೇರಿರುವ ಅಂಗಡಿಗಳು ಮಾತ್ರವಲ್ಲದೆ ಇನ್ನಷ್ಟು ಅಂಗಡಿಗಳು ಸರಕಾರಿ ಜಾಗದಲ್ಲಿ ವ್ಯವಹರಿಸುತ್ತಿದೆ. ಸರಕಾರಿ ಜಾಗದಲ್ಲಿದೆ ಎಂಬ ಕಾರಣಕ್ಕೆ ಆ ಆರು ಅಂಗಡಿಗಳನ್ನು ಮಾತ್ರ ತೆರವುಗೊಳಿಸಿದರೆ ಅದು ಅವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿರುವ ಎಲ್ಲಾ ಅಂಗಡಿಗಳಿರುವ ಜಾಗವನ್ನು ಸರ್ವೆ ನಡೆಸಿ ಸರಕಾರಿ ಜಾಗದಲ್ಲಿರುವ ಎಲ್ಲಾ ಅಂಗಡಿಗಳನ್ನು ಖಚಿತ ಪಡಿಸಿಕೊಂಡು ಅವುಗಳನ್ನು ತೆರವುಗೊಳಿಸುವುದು ಉತ್ತಮ ಎಂದು ಸದಸ್ಯರು ತಿಳಿಸಿದರು. ತೆರವಿಗೆ ಆದೇಶವಾಗಿರುವ ಗೂಡಂಗಡಿಗಳಿರುವ ಜಾಗ ಪಂಚಾಯತ್ ವ್ಯಾಪ್ತಿಯಲ್ಲಿದ್ದರೂ ಪಂಚಾಯತ್‌ಗೆ ಹಸ್ತಾಂತರವಾಗಿಲ್ಲ. ಈ ನಿಟ್ಟಿನಲ್ಲಿ ತಹಶೀಲ್ದಾರ್‌ಗೆ ಮನವಿ ಮಾಡಿ ಅವರ ನೇತೃತ್ವದಲ್ಲಿ ತೆರವುಗೊಳಿಸುವುದು ಉತ್ತಮ ಎಂದು ಪಿಡಿಓ ಆಶಾ ತಿಳಿಸಿದರು.

ವಿಸ್ತರಿತ ಕಟ್ಟಡವೂ ತೆರವಾಗಲಿ:
ಪಂಚಾಯತ್‌ನಿಂದ ವ್ಯಾಪಾರ ಪರವಾನಿಗೆ ಪಡೆಯದಿರುವ ಹಾಗೂ ನವೀಕರಣಗೊಳಿಸದಿರುವ ಅಂಗಡಿಗಳು ಅನಧಿಕೃತವಾಗಿ ಈ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಸದಸ್ಯರು ಅಭಿಪ್ರಾಯ ತಿಳಿಸಿದರು. ಸರಕಾರಿ ಜಾಗದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಬಹುದು. ಆದರೆ ವರ್ಗಜಾಗದಲ್ಲಿರುವ ಅಂಗಡಿ ಕಟ್ಟಡಗಳನ್ನು ತೆರವುಗೊಳಿಸುವುದು ಸಾಧ್ಯವಿಲ್ಲ ಎಂದು ಪಿಡಿಓ ತಿಳಿಸಿದರು. ತೆರವುಗೊಳಿಸುವ ಸಂದರ್ಭದಲ್ಲಿ ಗೂಡಂಗಡಿಗಳು ಮಾತ್ರವಲ್ಲ. ಕೆಲವು ಅಂಗಡಿ ಮ್ಹಾಲಕರು ಕಟ್ಟಡವನ್ನು ವಿಸ್ತರಿಸಿದ್ದು ಅದು ಸರಕಾರಿ ಜಾಗದಲ್ಲಿದ್ದರೆ ಅಂತ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಸರ್ವೆ ನಡೆಸಿ ಮುಂದಿನ ಹಂತ:
ನ್ಯಾಯಾಲಯದಿಂದ ತೆರವುಗೊಳಿಸಲು ಅದೇಶವಾಗಿರುವ ಅಂಗಡಿಗಳನ್ನು ಪ್ರಥಮವಾಗಿ ತೆರವುಗೊಳಿಸುವ. ಬಳಿಕ ಪಂಚಾಯತ್ ವ್ಯಾಪ್ತಿಯಲ್ಲಿರುವ ಅಂಗಡಿಗಳನ್ನು ಸರ್ವೆ ನಡೆಸಿ ತಹಶೀಲ್ದಾರ್‌ರವರಿಂದ ವರದಿ ಪಡೆದು ಅವುಗಳು ಸರಕಾರಿ ಜಾಗದಲ್ಲಿದ್ದರೆ ಅಂತಹ ಅಂಗಡಿ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವುದು ಉತ್ತಮ ಎಂದು ಅಧ್ಯಕ್ಷೆ ಪ್ರೀತಾ ತಿಳಿಸಿದರು.

10 ದಿನಗಳ ಕಾಲಾವಕಾಶ:
ಸಭೆಯಲ್ಲಿ ಚರ್ಚಿಸಿ ಈಗಾಗಲೇ ತೆರವುಗೊಳಿಸಲು ಆದೇಶವಾಗಿರುವ ಅಂಗಡಿ ಮ್ಹಾಲಕರಿಗೆ ನೋಟೀಸು ಜಾರಿಗೊಳಿಸಿ 15 ದಿನಗಳ ಕಾಲಾವಕಾಶ ನೀಡಲಾಗವುದು. ಬಳಿಕ ಅವರಿಂದ ಅಭಿಪ್ರಾಯ ಪಡೆದು ಅದನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುವುದು ಉತ್ತಮ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು ಅದರಂತೆ ನಿರ್ಣಯಕೈಗೊಳ್ಳಲಾಗಿದೆ.

ಗಡಿ ಗುರುತು ಮಾಡಲಿ:
ಕಬಕ ಗ್ರಾಮ ಪಂಚಾಯತ್ ನಗರ ಸಭಾ ಗಡಿ ಭಾಗದಲ್ಲಿದೆ. ಜಾಗದ ಅರ್ಧ ಭಾಗ ಪಂಚಾಯತ್‌ನಲ್ಲಿದ್ದರೆ ಉಳಿದ ಭಾಗ ನಗರ ಸಭಾ ವ್ಯಾಪ್ತಿಯಲ್ಲಿದೆ. ಇದರಿಂದಾಗಿ ಗಡಿ ಪ್ರದೇಶದಲ್ಲಿರುವ ಜನರು ಗೊಂದಲದಲ್ಲಿದ್ದಾರೆ. ಈ ನಿಟ್ಟಿನಲ್ಲಿ ನಗರ ಸಭೆ ಹಾಗೂ ಪಂಚಾಯತ್‌ಗೆ ಸಂಬಂಧಿಸಿದ ಜಾಗಗಳ ಗಡಿ ಗುರುತು ಮಾಡಿಕೊಡುವಂತೆ ಸದಸ್ಯ ಪ್ರಶಾಂತ್ ಮುರ ಆಗ್ರಹಿಸಿದರು.

ಕಟ್ಟಡ ಮ್ಹಾಲಕರ ಸಭೆ:
ಬಾಡಿಗೆ ಮನೆಯಲ್ಲಿ ವಾಸ್ತವ್ಯ ಇರುವವರು ಕಸವನ್ನು ವಿಲೇವಾರಿ ಮಾಡಲು ಜಾಗವಿಲ್ಲ. ಅದಕ್ಕಾಗಿ ಅವರು ಚೀಲದಲ್ಲಿ ತುಂಬಿಸಿ ರಸ್ತೆ ಬದಿ ಎಸೆದು ಹೋಗುತ್ತಾರೆ. ಇದರಿಂದಾಗಿ ರಸ್ತೆ ಬದಿಯಲ್ಲಿ ತ್ಯಾಜ್ಯದ ರಾಶಿ ಬೀಳುವಂತಾಗಿದೆ. ಬಾಡಿಗೆ ಪಡೆದು ಲಾಭಗಳಿಸುವುದು ಕಟ್ಟಡ ಮ್ಹಾಲಕರು. ತ್ಯಾಜ್ಯ ವಿಲೇವಾರಿಗೆ ಪಂಚಾಯತ್ ಮೇಲೆ ಹೊರಿಸಲಾಗುತ್ತಿದೆ. ಬಾಡಿಗೆಗೆ ಮನೆ ನೀಡುವ ಕಟ್ಟಡದ ಮ್ಹಾಲಕರೇ ತಮ್ಮ ಕಟ್ಟಡದಲ್ಲಿ ತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮಕೈಗೊಳ್ಳಬೇಕು. ಇದಕ್ಕಾಗಿ ಪಂಚಾಯತ್ ವ್ಯಾಪ್ತಿಯಲ್ಲಿ ಬಾಡಿಗೆಗೆ ಮನೆ ನೀಡಿರುವ ಎಲ್ಲಾ ಕಟ್ಟಡಗಳ ಮ್ಹಾಲಕರ ಸಭೆ ನಡೆಸಿ ಅವರಿಗೆ ಸೂಚನೆ ನೀಡುವಂತೆ ಸದಸ್ಯರ ಸಭೆಯಲ್ಲಿ ಆಗ್ರಹಿಸಿದರು.

ಉಪಾಧ್ಯಕ್ಷೆ ಶಂಕರಿ ಭಟ್, ಸದಸ್ಯರಾದ ವಿನಯ ಕಲ್ಲೇಗ, ಶಾಭಾ ಕೆ., ಬಾಲಕೃಷ್ಣ ಗೌಡ ಕಳಮೆಮಜಲು, ಮಾಲತಿ, ಹರಿಣಾಕ್ಷಿ ಹಾಗೂ ಭಾನುಮತಿ ಹೆಗ್ಡೆ ಉಪಸ್ಥಿತರಿದ್ದರು. ಪಿಡಿಓ ಆಶಾ ಸ್ವಾಗತಿಸಿ, ವಂದಿಸಿದರು. ಸಿಬಂದಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.