Breaking News

ಅಷ್ಟಮಿಯ ಆಚರಣೆ ಮತ್ತು ತಿಂಡಿ ತಿನಿಸುಗಳು…

Puttur_Advt_NewsUnder_1
Puttur_Advt_NewsUnder_1

ಅಷ್ಟಮಿಯನ್ನು ತುಳುನಾಡಿನ ಹಳ್ಳಿ ಹಳ್ಳಿಗಳಲ್ಲೂ ಸಂಭ್ರಮದಿಂದ ಆಚರಿಸಲಾಗುತ್ತದೆ. ಮಳೆಗಾಲದ ಅಂತಿಮ ಹಂತದಲ್ಲಿ ಈ ಹಬ್ಬವು ಬರುತ್ತದೆ. ಕೆಲವು ಬಾರಿ ಅಷ್ಟಮಿಯ ದಿನಗಳಲ್ಲಿ ಧಾರಾಕಾರ ಮಳೆ ಸುರಿಯುವುದೂ ಇದೆ. ಅಷ್ಟಮಿಯ ದಿನಗಳು ತೀರಾ ಮುಗ್ಗಟ್ಟಿನ ದಿನಗಳು. ಮಳೆ ಗಾಲಕ್ಕೆ ಸಂಗ್ರಹಿಸಿಟ್ಟ ಅಕ್ಕಿ ಮತ್ತಿತರ ಸೊತ್ತುಗಳು ಮುಗಿದಿರುತ್ತವೆ. ಮಳೆ ಗಾಲ ಜೋರಾಗಿರುತ್ತದೆ. ಅಷ್ಟಮಿಯ ದಿನಗಳಲ್ಲಿ ತಿಂಡಿ ಮಾಡುವ ಸಲುವಾಗಿ ಒಲೆ ಉರಿಸಲೂ ಕಟ್ಟಿಗೆ ಇಲ್ಲದ ಪರಿಸ್ಥಿತಿ ಎದುರಾಗುವುದುಂಟು. ಅಷ್ಟಾಗಿ ವಿಶೇಷವಾಗಿ ಮೂಡೆ ಕಟ್ಟುವುದು ಹಿಂದಿನಿಂದಲೂ ಬಂದಿದೆ. ಅದೇನಿದ್ದರೂ ಅಷ್ಟಮಿಯ ದಿನ ಮೂಡೆ ಮಾಡಲೇ ಬೇಕು ಎನ್ನುವ ಹಠ ಮನೆ ಮಂದಿಯಲ್ಲೆಲ್ಲಾ ತುಂಬಿರುತ್ತದೆ. ಇದು ಅಷ್ಟಮಿಯ ವಿಶೇಷವಾದ ತಿಂಡಿ. ಹಿಂದೆ ಅಷ್ಟಮಿ ಹಬ್ಬ ಆಚರಿಸಲು ಹಿರಿಮಗನನ್ನು ಊರಿನ ಗುತ್ತಿನವರ, ಶ್ರೀಮಂತರ ಮನೆಯಲ್ಲಿ ಅಡವು ಇಟ್ಟಾದರೂ ಅಕ್ಕಿ ತರುತ್ತಿದ್ದರಂತೆ. ಹೀಗೆ ಅಡವಿಟ್ಟ ಮಗನನ್ನು ಮುಂದಿನ ಶಿವರಾತ್ರಿಯ ದಿನ ಬಿಡಿಸಿಕೊಳ್ಳಲಾಗುತ್ತಿತ್ತಂತೆ. ಇದು ಹಳೆಯ ಕಾಲದ ಮಾತು. ಸಾಮಾನ್ಯವಾಗಿ ಇಲ್ಲಿ ಅಷ್ಟಮಿಯನ್ನು ಮೂರು ದಿವಸಗಳ ಹಬ್ಬವಾಗಿ ಆಚರಿಸುತ್ತಾರೆ. ಅಷ್ಟಮಿಯ ಮುಂಚಿನ ದಿವಸ ರಾತ್ರಿ ಉಪವಾಸ ಆರಂಭಿಸುತ್ತಾರೆ. ಆಚರಣೆಯೂ ಭಿನ್ನ ಭಿನ್ನವಾಗಿರುತ್ತದೆ. ತಡರಾತ್ರಿ ಹೊಟ್ಟೆ ತುಂಬಾ ತಿಂಡಿ ತಿಂದು ಉಪವಾಸದ ವ್ರತಾಚರಣೆಯನ್ನು ಆರಂಭಿಸುತ್ತಾರೆ. ‘ಅಷ್ಟಮಿ ಪಾಸ’ ಅಂದರೆ ಅಷ್ಟಮಿಯ ಉಪವಾಸ ಹಿಡಿಯುವವರಿಗೆ ಅಷ್ಟಮಿ ದಿವಸದ ಚಂದ್ರೋದಯದವರೆಗೆ ಕಠಿಣವಾದ ವ್ರತವಿರುತ್ತದೆ. ಮಧ್ಯಾಹ್ನ ಸೀಯಾಳ ಕುಡಿಯುವ ಕ್ರಮವಿದೆ. ಈ ನಡುವೆ ಅಷ್ಟಮಿಯ ರಾತ್ರಿ ಊಟಕ್ಕೆ ಬಗೆ ಬಗೆಯ ತಿಂಡಿ ತಿನಸುಗಳು ತಯಾರಾಗುತ್ತವೆ. ‘ಮೂಡೆ’ ಇದರಲ್ಲಿ ಪ್ರಮುಖವಾದದ್ದು, ಹಿಂದಿನ ಕಾಲದಲ್ಲಿ ಹಳ್ಳಿಯ ಮನೆಗಳಲ್ಲಿ ಮೂಡೆಯನ್ನು ಹೆಣೆಯುತ್ತಿದ್ದರು. ಮೂಡೆ ಕಟ್ಟಿ ಮಾರಾಟ ಮಾಡುವುದು ಕೆಲವರ ಕಾಯಕವಾಗಿದೆ. ಮಾರುಕಟ್ಟೆಗಳಲ್ಲಿ ಹತ್ತು ರೂಪಾಯಿಗೆ ಎರಡು ಅಥವಾ ಮೂರು ಮೂಡೆಗಳು ಸಿಗುತ್ತವೆ. ಹಲಸಿನ ಎಲೆಯಿಂದ ಮಾಡಿದ ‘ಕೊಟ್ಟಿಗೆ’ ಯಲ್ಲಿ ಅಕ್ಕಿಯ ಹಿಟ್ಟು ಹಾಕಿ ಬೇಯಿಸಿದ ತಿಂಡಿಯನ್ನು ಈ ದಿನ ಮಾಡುತ್ತಾರೆ. ಆ ದಿನ ಮಾಡಿದ ಕೊಟ್ಟಿಗೆ ತಿಂಡಿ ಗಣೇಶ ಚತುರ್ಥಿ ಹಬ್ಬದ ವರೆಗೆ ಇರಬೇಕು ಎನ್ನುವುದು ಹಿಂದಿನಿಂದಲೂ ಬಂದ ಸಂಪ್ರ ದಾಯವಾಗಿದೆ. ‘ಸೇಮೆದಡ್ಡೆ’, ಹಾಲು ಅಥವಾ ಪಾಯಸವನ್ನು ಸಿಹಿತಿನಿಸಾಗಿ ಮಾಡಲಾಗುತ್ತದೆ. ಹೆಚ್ಚಿನ ಬ್ರಾಹ್ಮಣರ ಮನೆಯಲ್ಲಿ ಉಂಡೆ, ಚಕ್ಕುಲಿ, ಕೋಡು ಬಳೆ ಮುಂತಾದವುಗಳನ್ನು ಮಾಡು ತ್ತಾರೆ. ಇತ್ತೀಚಿಗಿನ ದಿನಗಳಲ್ಲಿ ಟಿ.ವಿ. ಮುಂತಾದ ಆಧುನಿಕ ಉಪಕರಣಗಳಿಂದಾಗಿ ಜನರು ಮಲಗುವುದೇ ತಡವಾಗಿ ಹಾಗೆ ಟಿ.ವಿ.ಯಲ್ಲಿ ಪ್ರಸಾರವಾಗುವ ಅಷ್ಟಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ನೋಡುತ್ತಾ ಕುಳಿತರೆ ಚಂದ್ರೋದಯವಾಗುವುದೇ ಗೊತ್ತಾಗುವುದಿಲ್ಲ. ಹಿಂದಿನ ಕಾಲದ ತುಳುನಾಡಿನಲ್ಲಿ ರಾತ್ರಿ ಕಾಲದಲ್ಲಿ ಬೇಗನೆ ಮಲಗಿ ಬೆಳಗ್ಗೆ ಬೇಗ ಏಳುವುದು ರೂಢಿಯಾಗಿತ್ತು. ಆ ಸಂದರ್ಭದಲ್ಲಿ ಚಂದ್ರೋದಯದವರೆಗೆ ಕಾಯುವುದು ಎಂದರೆ ತುಸು ಕಷ್ಟದ ಕೆಲಸವಾಗಿತ್ತು, ಹಸಿವು ಮತ್ತು ನಿದ್ದೆ ಕಾಡುತ್ತಿತ್ತು. ಇವುಗಳನ್ನು ಹೊಡೆ ದೋಡಿಸಲು ಭಜನೆ ನಡೆಸುತ್ತಿದ್ದರು. ಇಲ್ಲವಾದಲ್ಲಿ ಮನೆಯ ಹಿರಿಯರು ಸೇರಿ ಚೆನ್ನೆ ಮಣೆ ಆಟಕ್ಕೆ ತಯಾರಾಗುತ್ತಾರೆ. ಅಷ್ಟಮಿಯ ದಿನ ಉಪವಾಸ ಆದ್ದರಿಂದ ಆ ದಿನ ಏಕಾದಶಿ ಹಾಗಿರುವಾಗ ಅದರ ಮರುದಿನ ದ್ವಾದಶಿ ಆಗಬೇಕಲ್ಲ. ಈ ದಿನ ಮಧ್ಯಾಹ್ನ ಅದ್ದೂರಿ ಭೋಜನ. ಕೆಲವು ಕಡೆ ಮಾಂಸದ ಊಟವನ್ನೂ ಮಾಡುತ್ತಾರೆ. ಮನೆಯಲ್ಲಿ ಮಾಡಿದ ತಿಂಡಿ ತಿನಸುಗಳನ್ನು ಇತರ ಧರ್ಮದ ಮನೆಗಳಿಗೂ ಹಂಚಿ ಸೌಹಾರ್ದ ಮೆರೆಯುತ್ತಾರೆ. ಊಟವಾದ ನಂತರ ಊರಿನ ಪ್ರಮುಖ ಕೇಂದ್ರದಲ್ಲಿ ನಡೆಯುವ ‘ಮೊಸರು ಕುಡಿಕೆ’ ಉತ್ಸವಕ್ಕೆ ಹೋಗುತ್ತಾರೆ. ಅಲ್ಲಿ ನಡೆಯುವ ಮನರಂಜನೆಯಲ್ಲಿ ಪಾಲ್ಗೊಳ್ಳುವ ಉತ್ಸಾಹ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಮಳೆಗಾಲದಲ್ಲಿ ಯಾವುದೇ ಸಾರ್ವಜನಿಕ ಮನರಂಜನೆ ಕಾರ್ಯಕ್ರಮಗಳು ಇರುವುದಿಲ್ಲ ಎನ್ನುವುದು ತಿಳಿದ ವಿಚಾರ ಆದ ಕಾರಣ ಮೊಸರು ಕುಡಿಕೆ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಮಧ್ಯಾಹ್ನ ಊಟವಾದ ನಂತರ ಊರಿನ ಯುವಕರು ಸೇರಿಕೊಂಡು ಮೊಸರು ಕುಡಿಕೆ ಆಚರಿಸುತ್ತಾರೆ. ಸಾಹಸದ ಆಟಗಳನ್ನು ನಡೆಸುತ್ತಾರೆ. ತಪ್ಪಂಗಾಯಿ, ಹಗ್ಗ ಎಳೆಯುವುದು, ಮಡಿಕೆ ಒಡೆಯುವುದು, ಸಣ್ಣ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯುತ್ತವೆ. ಎತ್ತರ ಪ್ರದೇಶದಲ್ಲಿ ನೇತಾಡಿಸಿದ ಮೊಸರಿನ ಗಡಿಗೆಯನ್ನು ಕಣ್ಣಿಗೆ ಬಟ್ಟೆ ಕಟ್ಟಿ ಒಡೆಯುವುದು. ಎತ್ತರವಾದ ಅಡಿಕೆ ಮರದ ತುದಿಯಲ್ಲಿ ಕಟ್ಟಿದ ನಿಧಿಯನ್ನು ತೆಗೆಯುವುದು ಮುಂತಾದ ಸಾಹಸ ಪ್ರದರ್ಶನವಾಗುತ್ತಿತ್ತು ಅನೇಕ ಮಂದಿಯ ತಂಡದಿಂದ ಪಿರಮಿಡ್ ರಚನೆ ಮಾಡಿ ಸಂತೋಷ ಪಡುವುದು ಎಲ್ಲವೂ ನಮ್ಮ ಕಣ್ಣು ತುಂಬಿಕೊಳ್ಳಲು ಸಾಧ್ಯವಿಲ್ಲ. ಗ್ರೀಸ್ ಸವರಿದ ಕಂಬ ಹತ್ತುವ ಅಪಾಯಕಾರಿ ಆಟಗಳನ್ನು ನಡೆಸುತ್ತಾರೆ. ಇದರಿಂದಾಗಿ ಅಪಾಯ ಸಂಭವಿಸಿ ಕೆಲವರು ಸೊಂಟ ಮುರಿದುಕೊಂಡದ್ದೂ ಇವೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಟಕ ತಂಡಗಳನ್ನು ಕರೆಸಿ ನಾಟಕ, ರಸಮಂಜರಿ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸು ತ್ತಿದ್ದಾರೆ. ಶ್ರೀಕೃಷ್ಣ ವೇಷ ಸ್ಪರ್ಧೆ ಎಲ್ಲೆಡೆ ನಡೆಯುತ್ತಿದೆ. ಅವುಗಳಲ್ಲಿ ಮುದ್ದು ಕೃಷ್ಣ, ಕಳ್ಳ ಕೃಷ್ಣ, ತುಂಟಾಟ ಕೃಷ್ಣ ಇತ್ಯಾದಿ ವಿವಿಧ ವೇಷಭೂಷಣದಲ್ಲಿ ಜನರ ಗಮನ ಸೆಳೆಯುವಂತೆ ಮಾಡುವರು. ತೆಂಗಿನಕಾಯಿಗಳನ್ನು ಪರಸ್ಪರ ಘರ್ಷಣೆ ಮಾಡುವ ‘ತಾರಾಯಿದ ಕಟ್ಟ’ ಎಂಬ ತುಳು ಕ್ರೀಡೆ ಅಷ್ಟಮಿಯ ದಿನಗಳಲ್ಲಿ ನಡೆಯುತ್ತದೆ. ಇದೊಂದು ಜಾನಪದ ಕ್ರೀಡೆಯಾದರೂ ಈ ಆಟದ ಮೇಲೆ ಜೂಜು ಕಟ್ಟಿ ಅಷ್ಟಮಿಯಂತಹ ಶುಭ ಸಂದರ್ಭದಲ್ಲಿ ಕಿಸೆ ಖಾಲಿ ಮಾಡಿಕೊಳ್ಳುವ ಪ್ರವೃತ್ತಿಯೂ ಕೆಲವರಿಗೆ ಇರುತ್ತದೆ. ಜೂಜಾಡುವವರಿಗೆ ಸುಖ-ದುಃಖಗಳ ಪರಿವೆಯೇ ಇರುವುದಿಲ್ಲ. ಅಂತು ಸಂಭ್ರಮ ಸಡಗರದ ಎಲ್ಲೆಡೆ ಎಲ್ಲರೂ ಒಂದುಗೂಡಿ ನಡೆಯುವ ಹಬ್ಬವಾಗಿದೆ.

ಹರ್ಷಿತಾ ಕುಲಾಲ್ ಕಾವು

 

 

 

 

 

 

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.