ಬಿಜೆಪಿ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಇನ್ನಿಲ್ಲ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಹೃದಯ ಸಂಬಂಧೀ ಖಾಯಿಲೆಯಿಂದ ದೆಹಲಿಯ  ಏಮ್ಸ್‌ನ ಹೃದ್ರೋಗ ವಿಭಾಗಕ್ಕೆ ದಾಖಲಾಗಿದ್ದ, ಕೇಂದ್ರ ಮಾಜಿ ಹಣಕಾಸು ಸಚಿವ, ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ   ಅರುಣ್ ಜೇಟ್ಲಿ ಆ.24ರಂದು ವಿಧಿವಶರಾದರು. ಕಳೆದ ಕೆಲವು ದಿನಗಳಿಂದ ಜೇಟ್ಲಿ ಯವರಿಗೆ  ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮಧ್ಯಾಹ್ನ 12.07ಕ್ಕೆ ಕೊನೆಯುಸಿರೆಳೆದಿದ್ದಾರೆ.

ಅನಾರೋಗ್ಯದ ಕಾರಣ 2019 ರ ಲೋಕಸಭಾ ಚುನಾವಣೆಯಿಂದ ಜೇಟ್ಲಿ ಹೊರಗುಳಿದಿದ್ದರು. ಅಲ್ಲದೆ, ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ತಮ್ಮನ್ನು ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಬಿಡುಗಡೆ ಮಾಡುವಂತೆ ಕೋರಿದ್ದರು.

ಕೇಂದ್ರದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಕೆಲವೇ ದಿನಗಳ ಹಿಂದೆ ಮೃತಪಟ್ಟಿದ್ದರು. ಇದೀಗ ಅರುಣ್  ಜೇಟ್ಲಿ ಅವರು ನಿಧನರಾಗಿದ್ದಾರೆ. ಇದರಿಂದ ಬಿಜೆಪಿ ತಿಂಗಳ ಅವಧಿಯಲ್ಲಿ ಇಬ್ಬಿಬ್ಬರು ನಾಯಕರನ್ನು ಕಳೆದುಕೊಂಡಂತಾಗಿದೆ. ಈ ಇಬ್ಬರೂ ನಾಯಕರು ಕಿಡ್ನಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂಬುದು ಗಮನಾರ್ಹ.

 ಮಹಾರಾಜಾ ಜೇಟ್ಲಿ ಹಾಗೂ ರತನ್ ಪ್ರಭಾ ಜೇಟ್ಲಿ ದಂಪತಿಯ ಮಗನಾಗಿ ಅರುಣ್  ಜೇಟ್ಲಿ 1952 ರ ಡಿಸೆಂಬರ್ 28ರಂದು ನವದೆಹಲಿಯಲ್ಲಿ ಜನಿಸಿದ್ದರು. ತಂದೆ ವಕೀಲರಾಗಿದ್ದರು. 1969-70ರ ಅವಧಿಯಲ್ಲಿ ನವದೆಹಲಿಯ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ ಅಭ್ಯಾಸ ಮಾಡಿದ್ದರು. 1973ರಲ್ಲಿ ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ವಾಣಿಜ್ಯ ಪದವಿ ಪಡೆದರು. 1977 ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್ ಲಾದಿಂದ ಕಾನೂನು ಪದವಿ ಪಡೆದರು.

ಎಪ್ಪತ್ತರ ದಶಕದಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ (ಎಬಿವಿಪಿ) ನಾಯಕನಾಗಿದ್ದರು ಹಾಗೂ 1974ರಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು.1975-77ರ ನಡುವೆ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಹೇರಲ್ಪಟ್ಟಿದ್ದಾಗ ಇವರು 19 ತಿಂಗಳು ಸೆರೆವಾಸ ಶಿಕ್ಷೆಗೆ ಗುರಿಯಾಗಿದ್ದರು. ರಾಜ್ ನಾರಾಯಣ್ ಮತ್ತು ಜಯಪ್ರಕಾಶ್ ನಾರಾಯಣ್ ಅವರ ಭ್ರಷ್ಟಾಚಾರಿ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಅರುಣ್ ಜೇಟ್ಲಿ, ಜೆಪಿ ಅವರ ವಿದ್ಯಾರ್ಥಿಗಳು ಮತ್ತು ಯುವ ಸಂಘಟನೆಗಳ ರಾಷ್ಟ್ರೀಯ ಸಮಿತಿಯ ರಾಷ್ಟ್ರೀಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ಜೈಲಿನಿಂದ ಬಿಡುಗಡೆಗೊಂಡ ಬಳಿಕ ಜನಸಂಘಕ್ಕೆ ಸೇರ್ಪಡೆಗೊಂಡಿದ್ದರು.

1991ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ನೇಮಕಗೊಂಡಿದ್ದ ಜೇಟ್ಲಿ, 1999ರಲ್ಲಿ ಪಕ್ಷದ ವಕ್ತಾರರಾಗಿ ಕಾರ್ಯನಿರ್ವಹಿಸಿದ್ದರು. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಎನ್ ಡಿಎ ಸರ್ಕಾರದಲ್ಲಿ ಮೊದಲಿಗೆ ವಾರ್ತಾ ಮತ್ತು ಪ್ರಸಾರ ಇಲಾಖೆಯ ರಾಜ್ಯ ಸಚಿವರಾಗಿ, ಬಳಿಕ ಬಂಡವಾಳ ಹಿಂತೆಗೆತ (ಸ್ವತಂತ್ರ) ಸಚಿವರಾಗಿ, 2000ರಲ್ಲಿ ಕಾನೂನು, ನ್ಯಾಯಾಂಗ ಮತ್ತು ಕಂಪನಿ ವ್ಯವಹಾರಗಳ ರಾಜ್ಯ ಸಚಿವರಾಗಿ ನೇಮಕಗೊಂಡಿದ್ದರು. ರಾಮ್ ಜೇಠ್ಮಲಾನಿ ಅವರು ರಾಜೀನಾಮೆ ನೀಡಿದ ಬಳಿಕ ಕಾನೂನು, ನ್ಯಾಯಾಂಗ ಮತ್ತು ಕಂಪನಿ ವ್ಯವಹಾರಗಳ ಸಂಪುಟ ದರ್ಜೆಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು.

2019ರಲ್ಲಿ ರಾಜ್ಯಸಭೆಯಲ್ಲಿನ ಪ್ರತಿಪಕ್ಷಗಳ ನಾಯಕನಾಗಿ ಕಾರ್ಯನಿರ್ವಹಿಸಿದ್ದರು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ    ಎನ್ ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ವಿತ್ತ ಸಚಿವರಾಗಿ, ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿ ಮತ್ತು ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇವರು ವಿತ್ತ ಸಚಿವರಾಗಿದ್ದ ಅವಧಿಯಲ್ಲಿ 500 ರೂ. ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ್ದರು. ಬಳಿಕ 500 ರೂ. ಹಾಗೂ 2 ಸಾವಿರ ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಳಕೆಗೆ ಬಿಡುಗಡೆ ಮಾಡಿದ್ದರು. ತನ್ಮೂಲಕ ಕಪ್ಪುಹಣ ವಿರುದ್ಧದ ಹೋರಾಟಕ್ಕೆ ನಾಂದಿ ಹಾಡಿದ್ದರು.

2017ರ ಜುಲೈ 1ರಿಂದ ಜಾರಿಗೆ ಬರುವಂತೆ ಒಂದೇ ರಾಷ್ಟ್ರ ಒಂದೇ ತೆರಿಗೆ ನೀತಿಯಡಿ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ ಟಿ ) ಜಾರಿಗೊಳಿಸಿದ್ದರು.

ಜಮ್ಮು ಮತ್ತು ಕಾಶ್ಮೀರದ ಮಾಜಿ ವಿತ್ತ ಸಚಿವ ಗಿರಿಧರಿ ಲಾಲ್ ಡೋಗ್ರಾ ಅವರ ಪುತ್ರಿ ಸಂಗೀತಾ ಜತೆ ಅರುಣ್ ಜೇಟ್ಲಿ 1982ರಲ್ಲಿ ಸಪ್ತಪದಿ ತುಳಿದಿದ್ದರು. ರೋಹನ್ ಮತ್ತು ಸೊನಾಲಿ ಎಂಬ ಇಬ್ಬರು ಮಕ್ಕಳಿದ್ದಾರೆ. ವೃತ್ತಿಯಲ್ಲಿ ಇವರಿಬ್ಬರೂ ವಕೀಲರಾಗಿದ್ದಾರೆ. ಸೊನಾಲಿ ಅವರು ಜಯೇಶ್ ಭಕ್ಷಿ ಅವರನ್ನು ಮದುವೆಯಾಗಿದ್ದಾರೆ.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.