ಆತೂರು: ಕಡಬ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ

Puttur_Advt_NewsUnder_1
Puttur_Advt_NewsUnder_1


ರಾಮಕುಂಜ: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಆತೂರು ಬದ್ರಿಯಾ ಆಂಗ್ಲಮಾಧ್ಯಮ ಶಾಲಾ ಆಶ್ರಯದಲ್ಲಿ ಕಡಬ ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರ ವಾಲಿಬಾಲ್ ಪಂದ್ಯಾಟ ಆ.30ರಂದು ಆತೂರು ಬದ್ರಿಯಾ ಶಾಲಾ ವಠಾರದಲ್ಲಿ ನಡೆಯಿತು.

ಬದ್ರಿಯಾ ಶಾಲಾ ಸಂಚಾಲಕ ಪಿ.ಆದಂ ಹಾಜಿ ಪಿಲಿಕುಡೇಲುರವರು ಪಂದ್ಯಾಟ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ಬದ್ರಿಯಾ ಶಾಲಾ ಶೈಕ್ಷಣಿಕ ಸಲಹೆಗಾರ, ಟ್ಯಾಲೆಂಟ್ ರಿಸರ್ಚ್ ಪೌಂಡೇಶನ್‌ನ ಹಾಜಿ ಕೆ.ರಫೀಕ್ ಮಾಸ್ಟರ್‌ರವರು ಮಾತನಾಡಿ, ‘ನೂರಾರು ಪಂದ್ಯ ಗೆದ್ದಿದ್ದೇನೆ. ಇದಕ್ಕಾಗಿ ಸಾವಿರಾರು ಪಂದ್ಯ ಸೋತಿದ್ದೇನೆ’ ಎಂಬ ವಿಶ್ವದ ನಂ.1 ಟೆನ್ನಿಸ್ ಆಟಗಾರ ರೋಜರ್ ಫೆಡರರ್‌ರವರ ಮಾತು ಕ್ರೀಡಾಪಟುಗಳಿಗೆ ಸ್ಪೂರ್ತಿದಾಯಕವಾಗಬೇಕು. ಆದ್ದರಿಂದ ಗೆದ್ದಾಗ ಸಂಭ್ರಮಿಸಿ, ಸೋತಾಗ ನಿರಾಶೆಪಡಬೇಡಿ. ದೇಶದಲ್ಲಿ ಕ್ರೀಡೆಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ. ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಬ್ಯಾಡ್ಮಿಂಟನ್ ಪಂದ್ಯ ದಿನ ನಿತ್ಯ ನಡೆಯುತ್ತಿದೆ. ಮೂಡಬಿದ್ರೆ ಆಳ್ವಾಸ್‌ನಂತಹ ಶಿಕ್ಷಣ ಸಂಸ್ಥೆಗಳು ಕ್ರೀಡಾಪಟುಗಳಿಗೆ ಉಚಿತ ವಸತಿ ಸಹಿತ ಶಿಕ್ಷಣ ನೀಡುತ್ತಿವೆ. ವಿದ್ಯಾರ್ಥಿಗಳು ಕ್ರೀಡೆಯ ಬಗ್ಗೆ ನಿರಾಸಕ್ತಿ ತೋರಿಸದೇ ಉನ್ನತ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೀರ್ತಿ ತರುವಂತಾಗಬೇಕೆಂದು ಹೇಳಿದರು. ರಾಮಕುಂಜ ಕ್ಲಸ್ಟರ್‌ನ ಸಿಆರ್‌ಪಿ ಮಹೇಶ್‌ರವರು ಮಾತನಾಡಿ, ಕ್ಲಸ್ಟರ್, ವಲಯ, ತಾಲೂಕು ಮಟ್ಟದ ಕ್ರೀಡಾಕೂಟಗಳನ್ನು ಬದ್ರಿಯಾ ಶಾಲೆಯ ಆಡಳಿತ ಮಂಡಳಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದೆ. ಕಡಬ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟವೂ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.

ತಾಲೂಕು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ ರೈ ಮಾತನಾಡಿ, ಕ್ರೀಡೆ ಇಲ್ಲದ ಜೀವನ ಕೀಟ ಇಲ್ಲದ ಹಣ್ಣಿನಂತೆ. ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿದೆ. ಉತ್ತಮ ಆರೋಗ್ಯಕ್ಕಾಗಿ ಜೀವನದಲ್ಲಿ ಕ್ರೀಡೆಗೆ ಒತ್ತು ನೀಡಬೇಕೆಂದು ಹೇಳಿದರು. ಕೊಲ ಗ್ರಾ.ಪಂ.ಸದಸ್ಯ ಕೆ.ಎ.ಸುಲೈಮಾನ್ ಶುಭಹಾರೈಸಿದರು. ಬದ್ರಿಯಾ ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಪೊಡಿಕುಂಞಿ ಎನ್., ಖಜಾಂಜಿ ಅಬ್ದುಲ್ ಖಾದರ್, ಆತೂರು ಬದ್ರಿಯಾ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಸಿರಾಜ್ ಬಡ್ಡಮೆ, ಶಾಲಾ ಮುಖ್ಯಶಿಕ್ಷಕಿ ಮಾಲಾ ಎಸ್., ಯೂಸುಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬದ್ರಿಯಾ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಎ.ಯಾಹ್ಯಾ ಸ್ವಾಗತಿಸಿ, ಶಿಕ್ಷಕ ಸಮದ್ ವಂದಿಸಿದರು. ಶಿಕ್ಷಕಿ ಶೃತಿ ಕಾರ್‍ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.