ಅಂದು ಶಿಕ್ಷಕಿ… ಇಂದು ಭೂ ವಿಜ್ಞಾನಿ… ಮುರುಳ್ಯದ ಸಂಧ್ಯಾರವರ ಅಪರೂಪದ ಸಾಧನೆ

Puttur_Advt_NewsUnder_1
Puttur_Advt_NewsUnder_1

✍ ದುರ್ಗಾಕುಮಾರ್ ನಾಯರ್ ಕೆರೆ

ತಾಲೂಕಿನ ಆಟದ ಮೈದಾನಗಳಲ್ಲಿ ಓಡಾಡಿಕೊಂಡಿದ್ದ, ರಂಗ ವೇದಿಕೆಗಳಲ್ಲಿ ನಲಿದಾಡಿಕೊಂಡಿದ್ದ , ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲವಾಗಿದ್ದ ಹುಡುಗಿ ಈಗ ಭೂ ವಿಜ್ಞಾನಿ. ಮೊನ್ನೆ ಮೊನ್ನೆಯವರೆಗೆ ತರಗತಿಯಲ್ಲಿ ಮಕ್ಕಳಿಗೆ ವಿಜ್ಞಾನ ಪಾಠ ಹೇಳಿಕೊಡುತ್ತಿದ್ದ ಶಿಕ್ಷಕಿ ಈಗ ನೆಲದ ಪಾಠ ಆಲಿಸುತ್ತಿದ್ದಾರೆ. ಸುಳ್ಯ ತಾಲೂಕಿನ ಮಟ್ಟಿಗೆ ದಲಿತ ಸಮುದಾಯದ ಮೊದಲ ವಿಜ್ಞಾನಿ, ಜಿಲ್ಲೆಯ ಮಟ್ಟಿಗೆ ದಲಿತ ಸಮುದಾಯದ ಎರಡನೆಯ ವಿಜ್ಞಾನಿ ಎಂಬ ಹೆಗ್ಗಳಿಕೆಯೂ ಈಕೆಯ ಬೆನ್ನಿಗಿದೆ.

ಈ ಸಾಧನೆಯ ರೂವಾರಿ ಮುರುಳ್ಯದ ಸಂಧ್ಯಾ ಬಿ.ಎನ್. ಪೆರುವಾಜೆ ಗ್ರಾಮದ ಮುಕ್ಕೂರಿನ ನೆಲ್ಲಿಕುಮೇರು ನಿವಾಸಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಾಬು ಎನ್. ಮತ್ತು ಲಲಿತಾ ದಂಪತಿಯ ಪುತ್ರಿಯಾದ ಸಂಧ್ಯಾ ಓದಿದ್ದು, ಬೆಳೆದದ್ದು ಅಜ್ಜಿ ಮನೆಯಾದ ಮುರುಳ್ಯದಲ್ಲಿ. ಅಜ್ಜ ಗುರುವರವರ ಮನೆಯಿಂದ ಶಾಲೆಗೆ ಹೋಗತೊಡಗಿದ್ದರು. ಪ್ರಾಥಮಿಕ ಶಿಕ್ಷಣವನ್ನು ಮುರುಳ್ಯ ಶಾಂತಿನಗರ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಕಾಣಿಯೂರಿನ ಪ್ರಗತಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಪೂರೈಸಿದ ಸಂಧ್ಯಾ ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಶಿಕ್ಷಣ ಮಾಡಿದರು. ತರುವಾಯ ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ಬಿಎಸ್‌ಸಿ ಶಿಕ್ಷಣ ಪೂರೈಸಿದರು.

ನಂತರ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಸಾಗರ ಮತ್ತು ಭೂ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಎಂಎಸ್‌ಸಿ ಯ ಬಳಿಕ ಪುತ್ತೂರಿನ ವಿವೇಕಾನಂದ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಬಿಎಡ್ ಶಿಕ್ಷಣವನ್ನೂ ಕೈಗೊಂಡರು.

ನಂತರ ಸಂಧ್ಯಾರದ್ದು ಶಿಕ್ಷಕ ವೃತ್ತಿ. ಮೂರು ವರ್ಷ ತಾನು ಕಲಿತ ಅದೇ ಪ್ರಗತಿ ವಿದ್ಯಾ ಸಂಸ್ಥೆಯಲ್ಲಿ ಮೂರು ವರ್ಷ ಶಿಕ್ಷಕಿಯಾಗಿ ವೃತ್ತಿ ನಡೆಸಿದರು. ಕರ್ನಾಟಕ ಲೋಕಸೇವಾ ಆಯೋಗವು 2016- 17 ರಲ್ಲಿ ನಡೆಸಿದ ಪರೀಕ್ಷೆ ಮತ್ತು ಸಂದರ್ಶನದಲ್ಲಿ ತೇರ್ಗಡೆ ಹೊಂದಿ ಭೂ ವಿಜ್ಞಾನಿಯಾಗಿ ಆಯ್ಕೆಗೊಂಡು ಮೂರು ತಿಂಗಳು ತರಬೇತಿಯ ಬಳಿಕ ಅವರೀಗ ಉಡುಪಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನ ಕಛೇರಿಯಲ್ಲಿ ಸಂಧ್ಯಾ ಭೂ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಲ್ಲು ಕೋರೆ, ಮರಳುಗಾರಿಕೆಗೆ ಪರವಾನಿಗೆ ನೀಡುವ, ಅಕ್ರಮಗಳು ನಡೆಯುವಲ್ಲಿಗೆ ಕಾರ್ಯಾಚರಣೆ ನಡೆಸುವ ಅಧಿಕಾರ ಹೊಂದಿರುವ ಈ ಹುದ್ದೆಗೆ ಕ್ಷೇತ್ರ ಕಾರ್ಯ ನಡೆಸುವ ಅವಕಾಶವೂ ಇದೆ. ಪ್ರಾಕೃತಿಕ ದುರಂತಗಳು ಸಂಭವಿಸಿದಾಗ, ಭೂ ಕುಸಿತಗಳು ಸಂಭವಿಸಿದಾಗ ಸ್ಥಳ ಪರಿಶೀಲನೆ ನಡೆಸುವ, ಕಾರಣವನ್ನು ಸಂಶೋಧಿಸುವ ಕೆಲಸವೂ ಇದೆ.

ಹಿರಿಯ ಮಾವ ಮುತ್ತಪ್ಪ, ಕೆ.ಎಸ್.ಆರ್.ಟಿ.ಸಿ. ಉದ್ಯೋಗಿಯಾಗಿರುವ ಮಾವ ಸುಭಾಶ್ , ಚಿಕ್ಕಮ್ಮ ಜಾನಕಿ, ಮಾಜಿ ಜಿ.ಪಂ. ಸದಸ್ಯೆ, ಸಾಮಾಜಿಕ ಕಾರ್ಯಕರ್ತೆಯಾಗಿರುವ ಚಿಕ್ಕಮ್ಮ ಭಾಗೀರಥಿ ಮುರುಳ್ಯರವರ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಪೂರೈಸಿದ ಸಂಧ್ಯಾ ಇದೀಗ ಉನ್ನತ ಹುದ್ದೆಯನ್ನು ಪಡೆದಿದ್ದಾರೆ.

ಊರಿನಲ್ಲಿ ಯುವತಿ ಮಂಡಲ ಸೇರಿದಂತೆ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ ಸಂಧ್ಯಾ ರಾಷ್ಟ್ರ ಸೇವಿಕಾ ಶಿಕ್ಷಕಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಸಂಧ್ಯಾ ರವರ ಅಣ್ಣ ಶಶಿಕುಮಾರ್ ಖಾಸಗಿ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕನಾಗಿದ್ದು ತಮ್ಮ ಸತ್ಯಕುಮಾರ್ ಉದ್ಯಮ ನಡೆಸುತ್ತಿದ್ದಾರೆ.

ಬದುಕು ಬದಲಿಸಿದ ಆ ಜ್ವರ…
ಸಂಧ್ಯಾರಿಗೆ ಬಾಲ್ಯದಲ್ಲಿ ಗುರಿ ಇದ್ದದ್ದು ಶಿಕ್ಷಕಿಯಾಗಬೇಕೆಂದು. ಬಿಎಡ್ ಶಿಕ್ಷಣದ ಬಳಿಕ ಶಿಕ್ಷಕಿಯೂ ಆದರು. ಆದರೆ ಬದುಕಿನ ಪಥ ಬದಲಾಯಿತು. ಇದರ ಹಿಂದೆ ಒಂದು ಕಾರಣವೂ ಇದೆ. ಪದವಿ ಶಿಕ್ಷಣದ ಬಳಿಕ ಸ್ನಾತಕೋತ್ತರ ಪದವಿ ಪಡೆಯಲು ಹೋದ ಸಂಧ್ಯಾರಿಗೆ ಆಸಕ್ತಿ ಇದ್ದದ್ದು ರಸಾಯನ ಶಾಸ್ತ್ರ, ಜೀವಶಾಸ್ತ್ರ ಅಥವಾ ಪ್ರಾಣಿ ಶಾಸ್ತ್ರದಲ್ಲಿ. ಆದರೆ ಅವುಗಳ ಕೌನ್ಸಿಲಿಂಗ್ ದಿವಸ ಸಂಧ್ಯಾರಿಗೆ ಜ್ವರ ಬಾಧಿಸಿದ ಪರಿಣಾಮ ಕೌನ್ಸಿಲಿಂಗ್‌ಗೆ ಹೋಗಲಾಗಲಿಲ್ಲ. ಆ ಬಳಿಕ ಹೋದಾಗ ಅದರ ಸೀಟುಗಳು ಭರ್ತಿಯಾಗಿತ್ತು. ರಿಸರ್ವೇಶನ್ ಸೀಟುಗಳನ್ನೂ ನೀಡಿಯಾಗಿತ್ತು. ಹಾಗೆ ನಿರಾಶರಾಗಿದ್ದ ಸಂಧ್ಯಾರಿಗೆ ಅಲ್ಲಿದ್ದ ಯಾರೋ ಸಾಗರ ಮತ್ತು ಭೂ ವಿಜ್ಞಾನ ವಿಷಯದ ಸಲಹೆ ನೀಡಿದರು. ಅನಿವಾರ್ಯವಾಗಿ ಈ ವಿಷಯದಲ್ಲಿ ಅಧ್ಯಯನ ನಡೆಸಿದ ಪರಿಣಾಮ ಆಕೆಗಿಂದು ಬೇಗನೇ ಸರಕಾರಿ ವೃತ್ತಿ ಸಿಗುವಂತಾಗಿದೆ. ಈಗ ಈ ವೃತ್ತಿಯಲ್ಲೇ ಖುಷಿ ಕಾಣುತ್ತಿದ್ದೇನೆ ಎಂದು ಸಂಧ್ಯಾ ಹೇಳುತ್ತಾರೆ.

ಪ್ರಗತಿಯ ಹೆಮ್ಮೆಯ ಹಳೆ ವಿದ್ಯಾರ್ಥಿನಿ
ಎಂಟನೇ ತರಗತಿಗೆ ಕನ್ನಡ ಮಾಧ್ಯಮದಲ್ಲಿ ಕಲಿಯಲು ಕಾಣಿಯೂರಿನ ಪ್ರಗತಿ ಕನ್ನಡ ಮಾಧ್ಯಮ ಶಾಲೆಗೆ ಸೇರಿದ ಸಂಧ್ಯಾಕುಮಾರಿ ಬಿ.ಎನ್. ತರಗತಿಯಲ್ಲಿ ಓರ್ವ ಉತ್ತಮ ವಿದ್ಯಾರ್ಥಿನಿಯಾಗಿದ್ದು ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಕೂಡ ಮುಂದೆ ಇದ್ದವಳು. ಎಸ್ಎಸ್ಎಲ್ ಸಿಯಲ್ಲಿ ಉತ್ತಮ ಅಂಕ ಗಳಿಸಿ ಉನ್ನತ ಶಿಕ್ಷಣಕ್ಕಾಗಿ ಬೇರೆ ವಿದ್ಯಾಸಂಸ್ಥೆಗೆ ಸೇರಿದ್ದರೂ ಕೂಡ ಪ್ರಗತಿ ಶಾಲೆಯ ಪ್ರೀತಿ ಅಭಿಮಾನದಿಂದಾಗಿ ಆಗಾಗ್ಗೆ ತನ್ನ ವಿದ್ಯಾಸಂಸ್ಥೆಗೆ ಭೇಟಿ ನೀಡುತ್ತಿದ್ದರಲ್ಲದೇ ತನ್ನ ಕಿರಿಯ ಸಹೋದರನನ್ನು ಕೂಡ ನಮ್ಮ ವಿದ್ಯಾಸಂಸ್ಥೆಗೆ ಸೇರಿಸಿ ಅವನು ಕೂಡ ಉತ್ತಮ ವಿದ್ಯಾರ್ಥಿಯಾಗಲು ಶ್ರಮಿಸಿದ್ದಾಳೆ. ನಂತರ ಶಿಕ್ಷಕಿಯಾಗಿ ಕೂಡ ಪ್ರಗತಿಗೆ ಪ್ರಥಮವಾಗಿ ಸೇರಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಕಲಿಕೆಯೊಂದಿಗೆ ಸಾಂಸ್ಕೃತಿಕವಾಗಿ ಕೂಡ ಉತ್ತಮ ತರಬೇತಿ ನೀಡಿದ ಹಿರಿಮೆ ಈಕೆಯದು.‌ ಪ್ರಸ್ತುತ ಸರಕಾರಿ ನೌಕರಿಗೆ ಸೇರ್ಪಡೆಗೊಂಡರೂ ಕೂಡ ಪ್ರಗತಿಯನ್ನು ಪ್ರತಿದಿನ ನೆನಪಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ – ಗಿರಿಶಂಕರ ಸುಲಾಯ ಮುಖ್ಯ ಶಿಕ್ಷಕರು, ಪ್ರಗತಿ ಪ್ರೌಢ ಶಾಲೆ ಕಾಣಿಯೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.